ಹುಣಸವಳ್ಳಿ ಕ್ವಾರಿಯಲ್ಲಿ ಡಿಸಿ ಪರಿಶೀಲನೆ

ತೀರ್ಥಹಳ್ಳಿ: ಹುಣಸವಳ್ಳಿ ಮರಳು ಕ್ವಾರಿಯಲ್ಲಿ ಗುತ್ತಿಗೆ ಷರತ್ತನ್ನು ಉಲ್ಲಂಘಿಸಿ ನದಿಯ ಆಳದಿಂದ ಮರಳನ್ನು ತೆಗೆಯಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಹೈಕೋರ್ಟ್ ಸೂಚನೆಯಂತೆ ಡಿಸಿ ಕೆ.ಎ.ದಯಾನಂದ್ ಮರಳು ಕ್ವಾರಿಗೆ ಭೇಟಿ ನೀಡಿ ಪರಿಶೀಲಿಸಿದರು.

ಗುತ್ತಿಗೆಯ ಷರತ್ತನ್ನು ಉಲ್ಲಂಘಿಸಿ, ಕ್ವಾರಿಯ ಗಡಿಯನ್ನು ಮೀರಿ ಹರಿಯುವ ನದಿಯ ಆಳದಿಂದ ಮರಳನ್ನು ತೆಗೆಯಲಾಗುತ್ತಿದೆ. ಇದರಿಂದ ನದಿ ಪಾತ್ರಕ್ಕೆ ಧಕ್ಕೆಯಾಗುತ್ತದೆ ಎಂಬ ಆರೋಪದ ಮೇಲೆ ಸ್ಥಳೀಯ ರೈತರೊಬ್ಬರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಆಗಮಿಸಿ ನದಿ ಪಾತ್ರವನ್ನು ವೀಕ್ಷಿಸಿದರು. ಮಳೆಯಾಗಿದ್ದ ಕಾರಣ ನದಿಯಲ್ಲಿ ಎರಡು ಮೂರು ಅಡಿಗಳಷ್ಟು ನೀರು ಬಂದಿದ್ದು ನದಿಯ ಆಳದಿಂದ ಮರಳು ತೆಗೆದಿದ್ದ ಕುರುಹು ಇರಲಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗುತ್ತಿಗೆದಾರ ಉಮೇಶ್ ಆರೋಪ ನಿರಾಕರಿಸಿದರು. ನಂತರ ಸ್ಟಾಕ್ ಯಾರ್ಡ್​ನಲ್ಲಿರುವ ಸಿಸಿಟಿವಿಯನ್ನು ವೀಕ್ಷಿಸಿದ ಡಿಸಿ ಅವರಿಗೆ ವೇಬ್ರಿಡ್ಜ್ ಹಾಗೂ ಇತರೆ ಸಮರ್ಪಕ ವಿವರಗಳು ಲಭ್ಯವಾಗಿರಲಿಲ್ಲ. ಭೂ ಮತ್ತು ಗಣಿ ಇಲಾಖೆಯ ಕಿರಿಯ ವಿಜ್ಞಾನಿ ವಿಂಧ್ಯಾ, ಪಿಎಸ್​ಐ ಗುರುಪ್ರಸಾದ್, ರಾಜಸ್ವ ನಿರೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಿಗ ರಮೇಶ್ ಇದ್ದರು.

Leave a Reply

Your email address will not be published. Required fields are marked *