ಹುಟ್ಟು ಸಾವಿನ ಪ್ರಶ್ನೆಗಳು

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? |

ನಾವರಿಯಲಾರದೆಲ್ಲದರೊಟ್ಟು ಹೆಸರೆ? |

ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು? ||

ಸಾವು ಹುಟ್ಟುಗಳೇನು? – ಮಂಕುತಿಮ್ಮ ||

ಬಾಳ ಪಯಣದಲ್ಲೆಲ್ಲೋ ನಮ್ಮೆಲ್ಲರನ್ನೂ ಕಾಡುವ ಪ್ರಶ್ನೆಯಿದು. ದೇವರು ಹೇಗಿದ್ದಾನೆ? ನಿಜವಾಗಿ ಇದ್ದಾನೆಯೇ? ಇದ್ದಾನೆ ಎಂದ ಮೇಲೆ ಈ ಭೂಮಿಯ ಬದುಕು ಹೀಗೇಕಿದೆ? ಸಾವು-ಹುಟ್ಟುಗಳ ನಡುವಿನ ಜೀವನ, ಅದರೊಳಗೆ ಅನುಭವಿಸುವ ಅನೇಕ ದುರಿತಗಳು ಇವುಗಳೆಲ್ಲವುಗಳಿಂದ ಬಾಳಿನುದ್ದಕ್ಕೂ ತೊಳಲಾಟವೇ ತುಂಬಿದೆ. ನಾಳೆಗಳ ಬಗ್ಗೆ ಯೋಚಿಸಲೂ ಭಯಪಡುವಂತೆ ಸಾವಿನ ನೆರಳು ಹಿಂಬಾಲಿಸುತ್ತದೆ. ಇವೆಲ್ಲಾ ಯಾಕೆ ಹೀಗೆ? ಹುಟ್ಟು-ಸಾವಿನ ನಡುವೆ ನಮಗೇಕೆ ಅನಿಶ್ಚಿತ ಬಾಳುವೆ?

ಸುತ್ತಲಿನ ಪರಿಸರವನ್ನು ನೋಡಿದರೆ ಅನೇಕ ವೈರುದ್ಧ್ಯಳನ್ನು ಕಾಣುತ್ತೇವೆ. ಯಾವಾಗಲೂ ಸತ್ಸಂಗ, ಸನ್ನಡತೆಯಲ್ಲಿರುವವರು ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ. ಅದೇ ದುಷ್ಕಾರ್ಯಗಳನ್ನು ಮಾಡುತ್ತಾ ಬಾಳುವವರು ಎಲ್ಲ ಸುಖಸಂಪತ್ತನ್ನೂ ಅನುಭವಿಸುತ್ತಿರುತ್ತಾರೆ. ಸಮಾಜವೂ ಅವರನ್ನು ಓಲೈಸುತ್ತದೆ. ಇದನ್ನೆಲ್ಲಾ ನೋಡಿ ’ಒಳ್ಳೆಯವರಿಗೆ ಕಾಲವಲ್ಲ’ ಎಂದು ನಿಟ್ಟುಸಿರಿಟ್ಟು ಮೌನತಾಳುವುದು ಶ್ರೀಸಾಮಾನ್ಯರ ನಡೆಯಾಗಿದೆ. ಜೊತೆಗೆ ಆದರ್ಶಗಳು ಮರೆಯಾಗುತ್ತವೆ. ಇವೆಲ್ಲ ಮೇಲ್ನೋಟಕ್ಕೆ ಕಾಣುವ ಸತ್ಯ. ಸಂಯಮದಿಂದ ಅರ್ಥೈಸಿಕೊಂಡರೆ ಉತ್ತರ ಸುಸ್ಪಷ್ಟ. ಮನುಷ್ಯ ಸೋತಾಗ ಮಾತ್ರ ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ. ತಾನು ಯಾರು, ತನ್ನ ಇತಿಮಿತಿಯೇನು, ಏಕೆ ಸೋಲಾಯಿತು ಎಂದು ಅರಿತುಕೊಳ್ಳಲು ಪ್ರಯತ್ನಿಸುತ್ತಾನೆ. ತನ್ನ ದೌರ್ಬಲ್ಯವನ್ನು ಮೀರಿ, ಮುಂದಿನ ಹೆಜ್ಜೆಗಳನ್ನು ಎಚ್ಚರದಿಂದ ಇಡುತ್ತಾನೆ. ಬೇಸರದ ಅಲೆಯೊಳಗೆ ಅಸಹಾಯಕತೆಯಿಂದ ಮುಳುಗೇಳುತ್ತಿರುವಾಗ ಅದ್ಯಾವುದೋ ನಾವೆಯೊಂದು ತೇಲಿ ಬರುತ್ತದೆ, ಯಾವುದೋ ಕೈಗಳು ರಕ್ಷಿಸುತ್ತವೆ. ಆ ನಿಷ್ಕಾಮ ಪ್ರೀತಿ ನಮ್ಮೊಳಗೊಂದು ಭರವಸೆಯನ್ನು ಮೂಡಿಸುತ್ತದೆ.

ಜೀವನದಲ್ಲಿ ಕೆಲವೊಮ್ಮೆ ದಿಕ್ಕೆಟ್ಟ ಪರಿಸ್ಥಿತಿಯೊದಗುತ್ತದೆ. ಆಗ ಯಾವುದೋ ರೂಪದಲ್ಲಿ ಪರಿಹಾರವು ಸಿದ್ಧಿಸುತ್ತದೆ. ಕುಸಿಯುವ ಭೀತಿಯಲ್ಲಿರುವಾಗಲೆಲ್ಲ ಯಾವುದೋ ನೆರವು ನಮ್ಮನ್ನು ಆಧರಿಸಿದೆ. ಜೀವನದಲ್ಲಿ ಒಳಿತನ್ನೇ ಮಾಡುತ್ತಾ, ತನ್ನ ಸುತ್ತ ಒಳಿತನ್ನೇ ಕಾಣುವ ಮನಸ್ಸುಗಳು ಇಂಥ ದಿವ್ಯ ಅನುಭೂತಿಯನ್ನು ಪದೇಪದೆ ಪಡೆಯುತ್ತವೆ. ಕರ್ಮಶೇಷಕ್ಕೆ ಅನುಗುಣವಾಗಿ ಏನನ್ನು ಅನುಭವಿಸಬೇಕೋ ಅದನ್ನು ಪಡೆಯಲೇಬೇಕಾಗುತ್ತದೆ. ಆದರೆ ಪಾಪಕಾರ್ಯವನ್ನು ಬಾಳುವವರಿಗೆ ಸುಖ-ಸೌಲಭ್ಯವಿದ್ದರೂ ಆಂತರ್ಯವು ಅಶಾಂತಿಯಿಂದ ನರಳುತ್ತಿರುತ್ತದೆ. ಅಂತರಂಗವು ಅಪರಾಧಿಪ್ರಜ್ಞೆಯಿಂದ, ಕೆಟ್ಟ ನೆನಪುಗಳಿಂದ ಚುಚ್ಚುತ್ತಿದ್ದರೆ ನೆಮ್ಮದಿಯಾಗಿರಲು ಸಾಧ್ಯವೆ? ಕೆಡುಕು ಹೆಚ್ಚಾದರೆ ಅದರ ನಿಗ್ರಹವೂ ಅದೇ ವೇಗದಲ್ಲಿ ಆಗುತ್ತದೆ. ಈ ಜಗತ್ತಿನಲ್ಲಿ ಯಾವುದು ಶಾಶ್ವತ? ಯೌವನವೇ? ಸಂಪತ್ತೇ? ಕೀರ್ತಿಯೇ? ಈಗಿದ್ದಂತೆ ಇನ್ನೊಂದು ಕ್ಷಣವಿರದು. ಬದುಕು ಬದಲಾಗುತ್ತದೆ.

ಕೆಟ್ಟಕೆಲಸಗಳಲ್ಲಿ ತೊಡಗಿಸಿಕೊಂಡವರು; ಸಂಚಿತ ಕರ್ಮಶೇಷಗಳೊಂದಿಗೆ ಇನ್ನಷ್ಟು ಪಾಪವನ್ನೂ ಸೇರಿಸಿ ಬದುಕಿನ ಸರ್ವನಾಶಕ್ಕೆ ಅವರೇ ಕಾರಣರಾಗುತ್ತಾರೆ. ಅಹಂಕಾರದಿಂದ ಮೇಲೆ ಏರುವ ವ್ಯಕ್ತಿ ಯಾವುದೋ ಒಂದು ಹಂತದಲ್ಲಿ ಉರುಳಿಬೀಳುತ್ತಾನೆ. ಆಗ ಆತನನ್ನು ಹಿಡಿದೆತ್ತಲೂ ಯಾರೂ ಇರುವುದಿಲ್ಲ. ಹಾಗಾಗಿ ಈ ಜಗತ್ತು ದೇವನಾಡುವ ವಿಸ್ಮಯದ ಆಟ. ವಿಧಾತನು ಮಾಯೆಯ ಬಲೆಯನ್ನು ಬೀಸಿ ಮನುಷ್ಯರನ್ನು ಪರೀಕ್ಷಿಸುತ್ತಲೇ, ಪೊರೆಯುತ್ತಾನೆ. ನಮ್ಮ ಎದುರು ದೇವನಿಟ್ಟ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡುತ್ತಾ ಉತ್ತೀರ್ಣರಾಗುವುದೇ ನಮ್ಮ ಗುರಿಯಾಗಬೇಕಿದೆ. ಆತ್ಮಸಂಸ್ಕಾರವುಳ್ಳವರು ಉದ್ಧರಿಸಲ್ಪಡುತ್ತಾರೆ. ಹಾಗಾಗಿ ನಮ್ಮ ಅರಿವಿಗೆ ನಿಲುಕದಂಥ ಔನ್ನತ್ಯದಲ್ಲಿರುವ ಭಗವಂತನನ್ನು ಅನವರತ ನಂಬಿ ಬಾಳುವುದು ನಮ್ಮ ಕರ್ತವ್ಯವಾಗಲಿ. ಆಗ ಆತನ ಕಣ್ಗಾವಲಲ್ಲಿ ನಮ್ಮ ಬದುಕು ವಿಸ್ತರಿಸುತ್ತಾ ಸಾಗುವ ಸುಯೋಗ ನಮ್ಮದಾಗುತ್ತದೆ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)