ಹೀಗೊಂದು ಟೈಗರ್ ಗಲ್ಲಿ!

‘ನೋ ಪಾರ್ಕಿಂಗ್’ ತಾಣಗಳಲ್ಲಿ ನಿಲ್ಲಿಸಿದ ವಾಹನಗಳನ್ನು ಪೊಲೀಸರ ‘ಟೈಗರ್’ ವಾಹನಗಳು ಎತ್ಹಾಕಿಕೊಂಡು ಹೋಗುವುದು ನಿಮಗೆಲ್ಲ ಗೊತ್ತಿರುವ ಸಂಗತಿಯೇ. ತಮ್ಮ ಕೆಲಸಕ್ಕೆ ನೆರವಾಗುವ ಸದರಿ ‘ಟೈಗರ್’ಗಳೆಂದರೆ ಪೊಲೀಸರಿಗೆ ಇನ್ನಿಲ್ಲದ ಮಮತೆ. ಆದರೆ ಹೊತ್ತಲ್ಲದ ಹೊತ್ತಲ್ಲಿ ‘ಟೈಗರ್’ ಒಂದು ಎದುರಾಗಿದ್ದಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಕಂಗಾಲಾದ ಘಟನೆ ವರದಿಯಾಗಿದೆ. ಆದರೆ, ಅದು ಇಲ್ಲಿಯ ಘಟನೆಯಲ್ಲ್ಲ ಅಮೆರಿಕದ ವರ್ಜೀನಿಯಾದ್ದು ಮತ್ತು ‘ಟೈಗರ್’ ಎಂಬುದು ವಾಹನವಲ್ಲ, ‘ಹುಲಿ’ಯ ಸಾಕಾರಮೂರ್ತಿಯೇ ಎಂಬುದನ್ನು ನಿಮಗೆ ಸ್ಪಷ್ಟೀಕರಿಸುತ್ತಿದ್ದೇವೆ!

ಅಲ್ಲಿನ ಶಾಪಿಂಗ್ ಸೆಂಟರ್ ಒಂದರಲ್ಲಿ ‘ಅಗ್ನಿ ಐಪಿಎಸ್’ ಶೈಲಿಯಲ್ಲಿ ಠಳಾಯಿಸುತ್ತಿದ್ದ ಈ ಅಧಿಕಾರಿಗೆ, ಅಚಾನಕ್ಕಾಗಿ ಹುಲಿಯೊಂದು ಕಂಡು ಷಾಕ್ ಆಯಿತಂತೆ. ಕೊಂಚ ಸಾವರಿಸಿಕೊಂಡು ನೋಡಿದಾಗ, ಹಾಗೆ ‘ಷೋ’ ಕೊಡುತ್ತಿರುವುದು ಹುಲಿಯೊಂದರ ‘ಲೈಫ್-ಸೈಜ್’ ಪ್ರತಿಕೃತಿ ಎಂಬುದು ಗೊತ್ತಾಯ್ತಂತೆ!

ಈ ಅನುಭವದ ನಂತರ ಆ ಅಧಿಕಾರಿ, ‘ವ್ಯಾಪಾರ-ವ್ಯವಹಾರದ ಸ್ಥಳಗಳಲ್ಲಿ ಇಂಥ ಪ್ರತಿಕೃತಿಗಳನ್ನು ಬಿಂಬಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸ್ರಪ್ಪಾ….. ಕೊನೆಗೆ ಬರೋ ಗಿರಾಕಿಗಳೂ ಬರದ್ಹಂಗೆ ಆದೀತೂ…’ ಎಂಬ ಸಲಹೆಯನ್ನು ಅಂಗಡಿ ಮಾಲೀಕರಿಗೆ ನೀಡಿದ್ರಂತೆ!