ಹೀಗೊಂದು ಅಂಡರ್​ಗ್ರೌಂಡ್ ಸ್ಟೋರಿ…!!

ಇದು ಫ್ರಾನ್ಸ್​ನಿಂದ ವರದಿಯಾಗಿರುವ ಘಟನೆ. ಅಲ್ಲಿನ ಬ್ರಿಟಾನಿ ಎಂಬ ಪ್ರದೇಶದಲ್ಲಿ ಹಳೆಯ ಮನೆಯೊಂದನ್ನು ಒಡೆದುಹಾಕಲು ಕಟ್ಟಡ ಕೆಡಹುವ ಸಂಸ್ಥೆಯೊಂದಕ್ಕೆ ಕರೆಮಾಡಲಾಯಿತು. ತಂಡದವರು ಒಂದಿಂಚೂ ಬಿಡದಂತೆ ಮನೆಯನ್ನು ಅಗೆಯುತ್ತಿರುವಾಗ ಸೀಸದ ಕರಂಡಕವೊಂದು ಕಣ್ಣಿಗೆ ಬಿತ್ತು. ಮೊದಲ ನೋಟಕ್ಕೆ ಅದು ಎರಡನೇ ಮಹಾಯುದ್ಧದ ಸಮಯದಲ್ಲಿ ಬಳಕೆಯಲ್ಲಿದ್ದ ಫಿರಂಗಿಯ ತೋಟಾದಂತೆ ಕಾಣಿಸಿತು. ಆದರೆ ಕೈಗೆತ್ತಿಕೊಂಡು ಅಲ್ಲಾಡಿಸಿದಾಗ ‘ಟಣ್ ಟಣ್’ ಶಬ್ದ ಕೇಳಬೇಕೇ?!!

ಕುತೂಹಲಗೊಂಡ ಸಿಬ್ಬಂದಿ ಅದನ್ನು ಒಡೆದು ನೋಡಲಾಗಿ, ಎಲ್ಲರ ಕಂಗಳೂ ಅಕ್ಷರಶಃ ಮಿನುಗಿದವು. ಕಾರಣ ಅದರಲ್ಲಿದ್ದುದು ನಾಣ್ಯಗಳು. ಬರೀ ನಾಣ್ಯಗಳಲ್ಲಾರೀ, ಅಪ್ಪಟ ಬಂಗಾರದ ನಾಣ್ಯಗಳು. ಅದೂ ಒಂದೆರಡಲ್ಲ, ಬರೋಬ್ಬರಿ 600 ನಾಣ್ಯಗಳು! ಇವು 1870ರ ಕಾಲಾವಧಿಯದ್ದು ಎನ್ನಲಾಗಿದ್ದು, ಇಂದಿನ ಮಾರುಕಟ್ಟೆಯನುಸಾರ 1,00,000 ಯೂರೋಗಳಷ್ಟು (ಅಂದರೆ ಹತ್ತತ್ತಿರ 80 ಲಕ್ಷ ರೂ.) ಮೌಲ್ಯವಿದೆ ಎಂಬ ಲೆಕ್ಕಾಚಾರವೂ ಹೊಮ್ಮಿದೆ. ಫ್ರೆಂಚ್ ಕಾನೂನಿನ ಅನುಸಾರ, ನಿಧಿಯನ್ನು ಹೀಗೆ ಶೋಧಿಸಿದವರು ಮತ್ತು ಅದು ಕಂಡುಬಂದ ಜಮೀನು ಮಾಲೀಕರ ನಡುವೆ 50:50ರ ಅನುಪಾತದಲ್ಲಿ ಸಂಬಂಧಿತ ಆದಾಯವು ಹಂಚಿಕೆಯಾಗಬೇಕಂತೆ. ಬಂಗಾರದ ನಾಣ್ಯ ಸಿಕ್ಕಿದ್ದರ ಕುರಿತು ಮನೆಯೊಡೆಯನಿಗೆ ತಿಳಿಸಿದಾಗ, ಅವನಿಗೇನೂ ಅಚ್ಚರಿಯಾಗಲಿಲ್ಲವಂತೆ. ‘ಸಿಕ್ಕಿರಬಹುದು ಕಣ್ರೀ, ನಮ್ ತಾತ ನಾಣ್ಯಗಳ ಸಂಗ್ರಾಹಕರಾಗಿದ್ದರು’ ಎಂದು ಆತ ಪ್ರತಿಕ್ರಿಯಿಸಿದ್ದಾನೆ.

Leave a Reply

Your email address will not be published. Required fields are marked *