ಹಿರೇಕೆರೂರ ಕೈ ಪಾಳಯದಲ್ಲಿ ಭಾರಿ ಸಂಚಲನ!

ಹಾವೇರಿ: ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ ಕಮಲದತ್ತ ಚಿತ್ತ ಹರಿಸಿರುವ ಗುಲ್ಲು ಜಿಲ್ಲಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದಂತೆ, ಕೈ ಪಾಳಯದಲ್ಲಿ ಪರ, ವಿರೋಧದ ಚರ್ಚೆ ಆರಂಭಗೊಂಡಿವೆ.

ಬಿ.ಸಿ. ಪಾಟೀಲರ ಸ್ವಕ್ಷೇತ್ರ ಹಿರೇಕೆರೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿ ಪ್ರಮುಖ ಮುಖಂಡರು ಬಿ.ಸಿ. ಪಾಟೀಲರ ನಡೆಯನ್ನು ಬೆಂಬಲಿಸಲು ಸಜ್ಜಾಗಿದ್ದರೆ, ಜಿಪಂ ಚುನಾಯಿತ ಪ್ರತಿನಿಧಿಗಳು ವಿರೋಧಿಸಲು ಮುಂದಾಗಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಮೋದಿ ಅಲೆಗೆ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿರುವುದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್​ಗೆ ಭವಿಷ್ಯವಿಲ್ಲ. ಹೀಗಾಗಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸ್ಥಾನ ನೀಡಲು ಸಮ್ಮತಿಸಿದರೆ ಬಿಜೆಪಿಗೆ ಹೋಗುವುದರಲ್ಲಿ ತಪ್ಪಿಲ್ಲ ಎಂದು ಕಾಂಗ್ರೆಸ್ ಪಕ್ಷದಲ್ಲಿನ ಕೆಲ ಮುಖಂಡರು ಬಿ.ಸಿ. ಪಾಟೀಲರಿಗೆ ಹುರಿದುಂಬಿಸಿದ್ದಾರೆ. ರಟ್ಟಿಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಎನ್. ಗಂಗೋಳ ಅವರು ಬಿ.ಸಿ. ಪಾಟೀಲರನ್ನು ಬಿಜೆಪಿಯತ್ತ ಕರೆದೊಯ್ಯಲು ಸಕಲ ರೀತಿಯ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಲೋಕಸಭೆ ಚುನಾವಣೆಯ ಫಲಿತಾಂಶವೇ ಬೇರೆ, ವಿಧಾನಸಭೆ ಚುನಾವಣೆಯೇ ಬೇರೆ. ಜನತೆ ಈ ಬಾರಿ ದೇಶದ ಆಡಳಿತ ಗಮನದಲ್ಲಿರಿಸಿಕೊಂಡು ಬಿಜೆಪಿ ಬೆಂಬಲಿಸಿದ್ದಾರೆ. ಹಿಂದೆ ಇಂದಿರಾಗಾಂಧಿಯವರ ಆಡಳಿತದ ಅವಧಿಯಲ್ಲಿಯೂ ಇದೇ ರೀತಿಯ ಫಲಿತಾಂಶ ಬಂದಿರುವುದು ಎಲ್ಲರಿಗೂ ಗೊತ್ತಿದೆ. ಯಾವುದೇ ಆಸೆಗೆ ಬಿದ್ದು, ದುಡುಕಿನ ನಿರ್ಧಾರ ಕೈಗೊಂಡರೆ ಭವಿಷ್ಯದಲ್ಲಿ ರಾಜಕೀಯ ಅತಂತ್ರ ಸ್ಥಿತಿಯನ್ನು ಎದುರಿಸುವ ಸ್ಥಿತಿ ಬರಲಿದೆ ಎಂಬ ಲೆಕ್ಕಾಚಾರವನ್ನು ಜಿಪಂ, ತಾಪಂನ ಕೆಲ ಚುನಾಯಿತ ಪ್ರತಿನಿಧಿಗಳು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಪರೋಕ್ಷವಾಗಿ ಬಿ.ಸಿ. ಪಾಟೀಲರು ಬಿಜೆಪಿ ಸೇರುವುದನ್ನು ವಿರೋಧಿಸುತ್ತಿದ್ದಾರೆ.

ಕಮಲ ಪಾಳಯದಲ್ಲಿಯೂ ಚಟುವಟಿಕೆ: ಪಾಟೀಲರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಕಮಲ ಸೇರುವ ವಿಷಯ ಹರಡುತ್ತಿದ್ದಂತೆ ಕಮಲ ಪಾಳಯದಲ್ಲೂ ಚಟುವಟಿಕೆಗಳು ಆರಂಭಗೊಂಡಿವೆ. ಕ್ಷೇತ್ರದ ಮತದಾರರು ಸೂಕ್ಷ್ಮವಾಗಿದ್ದು, ಈ ವಿಚಾರದಲ್ಲಿ ಬಿಜೆಪಿ ವರಿಷ್ಠರು ಸೂಕ್ತ ಸಮಾಲೋಚನೆ ನಡೆಸಿ ನಿರ್ಣಯ ಕೈಗೊಳ್ಳಬೇಕು. ಇದನ್ನು ಪಕ್ಷದ ಮುಖಂಡರಿಗೆ ತಿಳಿಸಬೇಕು ಎಂದು ಮಾಜಿ ಶಾಸಕ ಯು.ಬಿ. ಬಣಕಾರ ಅವರ ಮೇಲೆಯೂ ಒತ್ತಡ ತರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಭೆ ಕರೆಯಲು ಕೈ ಮುಖಂಡರ ನಿರ್ಧಾರ…?: ಶಾಸಕ ಬಿ.ಸಿ. ಪಾಟೀಲರು ಬಿಜೆಪಿ ಸೇರುವ ವಿಷಯ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ತಂದಿದ್ದು, ಮೊದಲಿನಿಂದಲೂ ಬಿಜೆಪಿ ವಿರೋಧಿಸುತ್ತ ಬಂದಿರುವ ಅನೇಕ ಕಾಂಗ್ರೆಸ್ ಮುಖಂಡರು ಶೀಘ್ರ ಸಭೆ ಸೇರಿ ಬಿಸಿಪಿ ಕಾಂಗ್ರೆಸ್ ತೊರೆದರೆ ಮುಂದೆ ಯಾವ ನಿರ್ಣಯ ಕೈಗೊಳ್ಳಬೇಕು ಎಂದು ನಿರ್ಣಯಿಸಲು ಚಿಂತನೆ ನಡೆಸಿದ್ದಾರೆ. ಬಿ.ಸಿ. ಪಾಟೀಲರ ಆಪ್ತ ವಲಯದಲ್ಲಿರುವವರನ್ನು ಹೊರಗಿಟ್ಟು ಸಭೆ ಸೇರಲಿದ್ದಾರೆ ಎಂಬ ಮಾಹಿತಿ ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

ಬಿ.ಸಿ. ಪಾಟೀಲರು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದಾರೆ. ಅವರಿಗೆ ಶೀಘ್ರದಲ್ಲಿಯೇ ಪಕ್ಷವು ಸೂಕ್ತ ಸ್ಥಾನಮಾನ ನೀಡಲಿದೆ. ಈ ಕುರಿತು ಬಿ.ಸಿ. ಪಾಟೀಲರೊಂದಿಗೆ ಮಾತನಾಡಿದ್ದು, ಪಕ್ಷ ತೊರೆಯುವುದಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮಗಳಿಗೆ ತಮ್ಮ ಮನಸ್ಸಿಗೆ ಬಂದಂತೆ ಹೇಳಿಕೆ ನೀಡಿರುವ ಪಕ್ಷದ ಪದಾಧಿಕಾರಿಗಳಿಗೂ ಎಚ್ಚರಿಕೆ ನೀಡಿದ್ದೇನೆ. ಇಲ್ಲಿನ ಎಲ್ಲ ಬೆಳವಣಿಗೆಯನ್ನು ಹೈಕಮಾಂಡ್ ಗಮನಕ್ಕೂ ತಂದಿದ್ದೇನೆ.
| ಎಂ.ಎಂ. ಹಿರೇಮಠ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾವೇರಿ

ನಮ್ಮ ಕ್ಷೇತ್ರದ ಶಾಸಕ ಬಿ.ಸಿ. ಪಾಟೀಲರು ಬಿಜೆಪಿಗೆ ಹೋಗುವ ವಿಚಾರ ತಿಳಿದಿಲ್ಲ. ಕೆಲವರು ವದಂತಿ ಹಬ್ಬಿಸಿದ್ದಾರೆ. ಒಂದೊಮ್ಮೆ ಅವರು ಬಿಜೆಪಿ ಸೇರ್ಪಡೆಗೊಂಡರೂ ನಾವು ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ. ಮೊದಲಿನಿಂದಲೂ ನಮ್ಮ ಕುಟುಂಬದವರು ತತ್ವ, ಸಿದ್ಧಾಂತಗಳಿಗೆ ಬದ್ಧವಾಗಿ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ನಾವು ಅದನ್ನೇ ಮುಂದುವರಿಸುತ್ತೇವೆ.
| ಪ್ರಕಾಶ ಬನ್ನಿಕೋಡ, ಜಿಪಂ ಸದಸ್ಯರು ರಟ್ಟಿಹಳ್ಳಿ

ಶಾಸಕ ಬಿ.ಸಿ. ಪಾಟೀಲರು ಬಿಜೆಪಿ ಸೇರುವುದು ಊಹಾಪೋಹ. ನಾವಂತೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಈ ಹಿಂದೆಯೂ ಅನೇಕರು ಪಕ್ಷ ತೊರೆದರೂ ನಾವು ಪಕ್ಷ ಬಿಟ್ಟಿಲ್ಲ. ಬರುವವರಿಗೆ ಅಣ್ಣನಾಗಿ, ಹೋಗುವವರಿಗೆ ತಮ್ಮನಾಗಿ ಪಕ್ಷದಲ್ಲಿಯೇ ಇರುತ್ತೇನೆ.
| ಎಸ್.ಕೆ. ಕರಿಯಣ್ಣನವರ, ಜಿಪಂ. ಅಧ್ಯಕ್ಷರು ಹಾವೇರಿ

Leave a Reply

Your email address will not be published. Required fields are marked *