ಚಿತ್ರದುರ್ಗ: ರೈತರ ಪ್ರತಿಭಟನೆಗೆ ಅಡ್ಡಿಪಡಿಸಿ, ಉದ್ರೇಕಗೊಳಿಸಿ, ರಾಜ್ಯ ರೈತ ನಾಯಕರನ್ನು ಕೀಳಾಗಿ ಕಂಡ ಹಿರಿಯೂರು ಡಿವೈಎಸ್ಪಿ ಚೈತ್ರಾ ಅವರ ವಿರುದ್ಧ ನಿಯಮಾನುಸಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ತಾಲೂಕಿನ ವಿವಿಧೆಡೆ ಕಳ್ಳತನ, ಬೆದರಿಕೆ, ಕೊಲೆ, ಇಸ್ಪಿಟ್ ದಂಧೆ ನಡೆಯುತ್ತಿದ್ದರೂ ಹಿರಿಯೂರು ಡಿವೈಎಸ್ಪಿ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ತನಿಖೆಗೆ ಮುಂದಾಗುತ್ತಿಲ್ಲ. ಆದರೆ, ರೈತ ಹೋರಾಟಗಾರರು ತಮ್ಮ ನ್ಯಾಯಯುತ ಬೇಡಿಕೆಗಾಗಿ ಪ್ರತಿಭಟನೆಗೆ ಮುಂದಾದರೆ, ತಡೆಯುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯ 16 ಕೆರೆಗಳಿಗೆ ನೀರು ಹರಿಸುವಂತೆ 42 ದಿನಗಳಿಂದ ಧರಣಿ ಸತ್ಯಾಗ್ರಹ ಮಾಡುತ್ತಿದ್ದು, ಜು. 31ರಂದು ಅಲ್ಲಿಂದ ಹಿರಿಯೂರು ತಹಸೀಲ್ದಾರ್ ಕಚೇರಿವರೆಗೂ ಪಾದಯಾತ್ರೆ ಮೂಲಕ ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಬೇಕಿತ್ತು. ಆದರೆ, ಕಚೇರಿ ಆವರಣದೊಳಗೆ ಪ್ರವೇಶಿಸಲು ಬಿಡಲಿಲ್ಲ. ಇದು ಎಷ್ಟು ಸರಿ ಎಂದು ಕಿಡಿಕಾರಿದರು.
ಡಿವೈಎಸ್ಪಿ ಅವರಿಗೆ ಒಂದು ದಿನ ಮುನ್ನ ಸೂಕ್ತ ಬಂದೋಬಸ್ತ್ ನೀಡುವಂತೆ ಮನವಿ ಸಲ್ಲಿಸಿದ್ದೆವು. ಅವರು ಹಾಕಿಕೊಟ್ಟ ಮಾರ್ಗದಲ್ಲೇ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿಕೊಂಡು ತಾಲೂಕು ಕಚೇರಿಗೆ ತಲುಪಿದಾಗ ಕಾಂಪೌಂಡ್ ಗೇಟ್ ಹಾಕಿಸಿ ದರ್ಪದಿಂದ ಮಾತನಾಡಿದರು. ಸಾವಿರಾರು ರೈತರನ್ನು ರಸ್ತೆಯಲ್ಲಿ ನಿಲ್ಲುವಂತೆ ಮಾಡಿದರು. ಇದು ಆಕ್ರೋಶಕ್ಕೆ ಕಾರಣವಾಗಿ ನೂಕುನುಗ್ಗಲು ಉಂಟಾಯಿತು. ಭದ್ರತೆಗಾಗಿ ಬೇರೆ ತಾಲೂಕುಗಳಿಂದ ಬಂದಿದ್ದ ಪೊಲೀಸ್ ಅಧಿಕಾರಿಗಳು ರೈತರನ್ನು ತಳ್ಳಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ವೇಳೆ ಬಿಗುವಿನ ವಾತಾವರಣ ನಿರ್ಮಾಣಕ್ಕೆ ರೈತರನ್ನು ಪ್ರಚೋದಿಸಿದ ಚೈತ್ರಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ, ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಕಾರ್ಯದರ್ಶಿ ಬಸವರಾಜಪ್ಪ, ವಿವಿಧ ತಾಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ಸಿದ್ದರಾಮಣ್ಣ, ಸದಾಶಿವಪ್ಪ, ಮಂಜುನಾಥ್, ರಂಗಸ್ವಾಮಿ, ಪದಾಧಿಕಾರಿಗಳಾದ ಪ್ರಸನ್ನ, ತಿಮ್ಮಾರೆಡ್ಡಿ ಇತರರಿದ್ದರು.