ಹಿಮ್ಮಡಿ ಒಡಕು ನಿವಾರಣೆ ಸಾಧ್ಯವೆ?

| ಡಾ. ವೆಂಕಟ್ರಮಣ ಹೆಗಡೆ

ಚಳಿಗಾಲದ ಪ್ರಾರಂಭವಾಗಿದೆ. ಹೆಚ್ಚಿನ ಚಳಿಯು ಅನೇಕ ಆರೋಗ್ಯ ವೈಪರೀತ್ಯಗಳಿಗೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ದೇಹದ ರಕ್ಷಣಾವ್ಯವಸ್ಥೆ ದುರ್ಬಲವಾಗಿರುತ್ತದೆ. ಈ ಸಮಯದಲ್ಲಿ ಕಂಡುಬರುವ ತೊಂದರೆಗಳಲ್ಲಿ ಹಿಮ್ಮಡಿ ಒಡಕು ಒಂದು. ತ್ವಚೆ ಶುಷ್ಕವಾಗುವುದರಿಂದ ಚಳಿಗಾಲದಲ್ಲಿ ಹಿಮ್ಮಡಿ ಒಡಕು ಹೆಚ್ಚು. ಕೆಲವರಲ್ಲಿ ತುರಿಕೆ ಕಂಡುಬರುತ್ತದೆ. ರಕ್ತಸ್ರಾವವೂ ಆಗಬಹುದು. ನಡೆದಾಡಲೂ ಕಷ್ಟವಾಗಬಹುದು. ಇದು ತೇವಾಂಶ ಕಡಿಮೆಯಾದುದರ ಸೂಚ್ಯಂಕ.

ಚಳಿಗಾಲದಲ್ಲಿ ಪಾದಗಳಿಗೆ ಹೆಚ್ಚಿನ ತೇವಾಂಶ ನೀಡಬೇಕಾಗುತ್ತದೆ. ಕಾಲುಗಳನ್ನು ಒದ್ದೆ ಮಾಡಿಕೊಂಡ ನಂತರ ಕಾಲುಚೀಲ (ಸಾಕ್ಸ್) ಧರಿಸಿ ಮಲಗುವುದರಿಂದ ಹಿಮ್ಮಡಿಗೆ ಹೆಚ್ಚಿನ ತೇವಾಂಶ ದೊರೆತು ಒಡಕು ಕಡಿಮೆ ಆಗಲು ಸಹಾಯವಾಗುತ್ತದೆ. ಹೊರಗಡೆ ಹೋಗುವಾಗಲೂ ಕಾಲುಚೀಲ ಧರಿಸುವುದು ಉತ್ತಮ. ಯಾರು ಹೆಚ್ಚಿನ ಹಿಮ್ಮಡಿ ಒಡಕನ್ನು ಹೊಂದಿರುತ್ತಾರೋ ಅವರು ಬರಿಗಾಲಿನಲ್ಲಿ ಹೊರಗಡೆ ತಿರುಗುವ ಪ್ರಮೇಯವನ್ನು ತಪ್ಪಿಸುವುದು ಉತ್ತಮ. ಬರಿಗಾಲಿನಲ್ಲಿ ಹೋದಾಗ ಬ್ಯಾಕ್ಟೀರಿಯಾಗಳು, ಧೂಳು ಸೇರಿ ಸಮಸ್ಯೆಯು ಹೆಚ್ಚಾಗುವಂತೆ ಆಗಬಹುದು.

ಕಲ್ಲುಪ್ಪು ಬೆರೆಸಿದ ಉಗುರುಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ಅರ್ಧಗಂಟೆ ಇಟ್ಟುಕೊಳ್ಳುವುದರಿಂದ ಹಿಮ್ಮಡಿ ಒಡಕು ಕಡಿಮೆ ಆಗುತ್ತ ಬರುತ್ತದೆ. ತಾಜಾ ಅಲೋವೆರಾವನ್ನು ಕತ್ತರಿಸಿ ಆ ಲೋಳೆಯನ್ನು ಕಾಲಿಗೆ ಹಚ್ಚಿ ಮಲಗುವುದರಿಂದ ಹಿಮ್ಮಡಿ ಬಿರುಕು ಕಡಿಮೆ ಆಗಲು ಸಹಾಯವಾಗುತ್ತದೆ.

ಒಂದು ಚಮಚ ಅಕ್ಕಿಹಿಟ್ಟು, ಎರಡು ಚಮಚ ಅಲೋವೆರಾ ಜೆಲ್, ಒಂದು ಚಮಚ ಜೇನುತುಪ್ಪ, ಒಂದು ನಿಂಬೆಹಣ್ಣನ್ನು ಹಿಂಡಿ ಮಿಶ್ರಣ ಮಾಡಿ ಅದನ್ನು ಹಿಮ್ಮಡಿಗೆ ಹಚ್ಚಿ ಐದು ನಿಮಿಷ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಈ ಮನೆಮದ್ದಿನಿಂದ ಹಿಮ್ಮಡಿ ಒಡಕು ಕಡಿಮೆಯಾಗಲು ಸಹಾಯವಾಗುತ್ತದೆ.

ಪೋಷಕಾಂಶಗಳ ಕೊರತೆಯಿಂದ ಹಿಮ್ಮಡಿ ಒಡಕು ಕಾಡುವ ಸಾಧ್ಯತೆ ಹೆಚ್ಚು. ಹಿಮ್ಮಡಿಯ ಮೇಲೆ ಹೆಚ್ಚಿನ ಒತ್ತಡ, ಬೊಜ್ಜು, ಗಡುಸಾದ ಸೋಪುಗಳ ಬಳಕೆ ಹಿಮ್ಮಡಿ ಒಡಕಿಗೆ ಕಾರಣವಾಗುವ ಸಾಧ್ಯತೆಗಳಿರುತ್ತವೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಪೋಷಕಾಂಶಗಳ ಕೊರತೆಯಿಂದ ಅನೇಕ ತೊಂದರೆಗಳು ಕಾಡುತ್ತಿದ್ದು, ಅದರಲ್ಲಿ ಹಿಮ್ಮಡಿ ಒಡಕು ಸಾಮಾನ್ಯವಾದುದು. ಝಿಂಕ್, ಒಮೆಗಾ-3, ವಿಟಮಿನ್ ಎ, ಕಬ್ಬಿಣದಂಶ ಹೆಚ್ಚಿರುವ ಆಹಾರಪದಾರ್ಥಗಳನ್ನು ಹೆಚ್ಚು ಸೇವಿಸಬೇಕು.

ಮಲಗುವಾಗ ಗ್ಲಿಸರಿನ್ ಹಚ್ಚಿಕೊಳ್ಳುವುದು ರೋಸ್ ವಾಟರ್ ಹಿಮ್ಮಡಿಗೆ ಸವರಿಕೊಳ್ಳುವುದು ಬಹಳ ಸುಲಭ. ಆದರೆ ಪರಿಣಾಮಕಾರಿ ವಿಧಾನಗಳಾಗಿವೆ. ಎರಡು ಚಮಚ ಗ್ಲಿಸರಿನ್, ಒಂದು ಚಮಚ ರೋಸ್ ವಾಟರ್, ಅರ್ಧ ನಿಂಬೆಹಣ್ಣಿನ ರಸ, ಶುದ್ಧ ನೀರು, ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಅರ್ಧ ಬಕೆಟ್ ಬಿಸಿನೀರಿಗೆ ಹಾಕಿ 15ರಿಂದ 20 ನಿಮಿಷಗಳ ಕಾಲ ಪಾದಗಳನ್ನು ಅದ್ದಿರಿಸಿಕೊಳ್ಳುವುದರಿಂದ ಹಿಮ್ಮಡಿ ಒಡಕು ಕಡಿಮೆ ಆಗಲು ಸಹಾಯವಾಗುತ್ತದೆ. ರಾತ್ರಿ ಮಲಗುವುದಕ್ಕಿಂತ ಮೊದಲು ತೆಂಗಿನ ಎಣ್ಣೆ, ಜೇನುತುಪ್ಪವನ್ನು ಹಿಮ್ಮಡಿಗೆ ಹಚ್ಚಿ ಮಲಗುವುದರಿಂದ ಸಮಸ್ಯೆಯ ನಿರ್ವಹಣೆ ಸಾಧ್ಯ. ಹಿಮ್ಮಡಿಗೆ ಆಲಿವ್ ಆಯಿಲ್, ನಿಂಬೆರಸದ ಮಿಶ್ರಣ ಹಚ್ಚುವುದರಿಂದಲೂ ಹಿಮ್ಮಡಿ ಒಡಕು ಕಡಿಮೆಯಾಗಲು ನೆರವಾಗುತ್ತದೆ.

ಚರ್ಮದ ಆರೋಗ್ಯಕ್ಕೆ ಮುಖ್ಯವಾಗಿ ಬೇಕಾಗುವ ವಿಟಮಿನ್ ಸಿ ಹಾಗೂ ವಿಟಮಿನ್ ಎ ಒಳಗೊಂಡಿರುವ ಆಹಾರ ಸೇವಿಸುವುದು ಅಗತ್ಯ. ನೆಲ್ಲಿಕಾಯಿ, ಮೂಸಂಬಿ, ಕಿತ್ತಲೆ, ಸೀಬೆಹಣ್ಣು (ಪೇರಲೆ) ಇಂಥವುಗಳ ಸೇವನೆಯಿಂದ ವಿಟಮಿನ್ ಸಿ ಲಭ್ಯವಾಗುತ್ತದೆ. ಕ್ಯಾರೆಟ್, ಹಸಿರು ಸೊಪ್ಪುಗಳು, ಹಾಲು ಹಾಗೂ ಹಾಲಿನ ಉತ್ಪನ್ನಗಳು, ಮಾಂಸಾಹಾರಿಗಳಾಗಿದ್ದಲ್ಲಿ ಬೇಯಿಸಿದ ಮೀನು, ಬೇಯಿಸಿದ ಮಾಂಸಗಳಿಂದ ಸಹ ವಿಟಮಿನ್ ಎ ಪೋಷಕಾಂಶ ಪಡೆಯಬಹುದಾಗಿದೆ. ವ್ಯವಸ್ಥಿತ ಆಹಾರಪದ್ಧತಿ, ಸರಳ ಮನೆಮದ್ದುಗಳು, ಪೂರಕ ಆಹಾರಗಳಿಂದ (ಸಪ್ಲಿಮೆಂಟ್​ಗಳು) ಹಿಮ್ಮಡಿ ಒಡಕಿನ ನಿರ್ವಹಣೆ ಸುಲಭ ಸಾಧ್ಯ.