ಹಿತ್ತಲಹಳ್ಳಿ ಬಳಿ ಸಾರಿಗೆ ಡಿಪೋ

ಶಿಡ್ಲಘಟ್ಟ : ನಗರ ಹೊರವಲಯದಲ್ಲಿ ಕೆಎಸ್​ಆರ್​ಟಿಸಿ ಡಿಪೋ ನಿರ್ಮಾಣ ಆಗುವುದರಿಂದ ನಗರ ಉನ್ನತೀಕರಣಗೊಳ್ಳುವುದಲ್ಲದೇ ಜನತೆಗೂ ಅನುಕೂಲವಾಗಲಿದೆ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.

ನಗರ ಹೊರವಲಯದ ಹಿತ್ತಲಹಳ್ಳಿ ಗೇಟ್ ಬಳಿ ಬುಧವಾರ ಕೆಎಸ್​ಆರ್​ಟಿಸಿ ಡಿಪೋ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

5 ಎಕರೆ 15 ಗುಂಟೆ ಜಮೀನಿನಲ್ಲಿ 5.68 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಪೋ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದು, 9 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಬಸ್ ಘಟಕ ನಿರ್ವಣವಾಗುವುದರಿಂದ 162 ಗ್ರಾಮಗಳಿಗೆ ಸಾರಿಗೆ ಸೌಲಭ್ಯ ಸಿಗಲಿದ್ದು, ಪ್ರತಿನಿತ್ಯ 7 ಸಾವಿರ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಸಹಕಾರಿಯಾಗಲಿದೆ. ಅಲ್ಲದೆ, ರೇಷ್ಮೆ ಗೂಡು ಮಾರುಕಟ್ಟೆಗೆ ಬರುವ ರೈತರಿಗೂ ಅನುಕೂಲವಾಗಲಿದೆ ಎಂದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಕಾರ್ಯಪಾಲಕ ಗುರುಪ್ರಸಾದ್, ತಾಪಂ ಸದಸ್ಯ ನರಸಿಂಹಯ್ಯ, ಗ್ರಾಪಂ ಸದಸ್ಯ ವೆಂಕಟೇಶ್, ಪಿಡಿಒ ಅರುಣಾಕುಮಾರಿ, ಜಿಪಂ ಮಾಜಿ ಸದಸ್ಯರಾದ ಶ್ರೀನಿವಾಸ್, ಎಸ್.ಎಂ.ನಾರಾಯಣಸ್ವಾಮಿ ಮತ್ತಿತರರಿದ್ದರು.

2 ಬಾರಿ ಭೂಮಿ ಪೂಜೆ: ಕ್ಷೇತ್ರದಲ್ಲಿ ಕೆಎಸ್​ಆರ್​ಟಿಸಿ ಬಸ್ ಘಟಕ ನಿರ್ವಿುಸಲು ಶ್ರಮಿಸಿದ ಮಾಜಿ ಶಾಸಕ ಎಂ.ರಾಜಣ್ಣ ತಮ್ಮ ಅವಧಿಯಲ್ಲಿಯೇ ಕಾಮಗಾರಿ ಆರಂಭವಾಗಬೇಕು ಎಂಬ ನಿಟ್ಟಿನಲ್ಲಿ ಚುನಾವಣೆಗೂ ಮುನ್ನ ಗುದ್ದಲಿಪೂಜೆ ನೆರವೇರಿಸಿದ್ದರು. ಈಗ ಶಾಸಕ ವಿ.ಮುನಿಯಪ್ಪ ತನ್ನ ಬೆಂಬಲಿಗರೊಂದಿಗೆ ಅದೇ ಸ್ಥಳದಲ್ಲಿ ಗುದ್ದಲಿಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

Leave a Reply

Your email address will not be published. Required fields are marked *