ಹಿಂಸಾ ಪ್ರವೃತ್ತಿಯವರನ್ನು ಸೋಲಿಸಿ

ಹುಬ್ಬಳ್ಳಿ:ಹಿಂಸಾ ಪ್ರವೃತ್ತಿಯವರನ್ನು ಸೋಲಿಸಿ ಮೋಡ್ಕಾಕ್ಕೆ ಹಾಕಬೇಕು. ಸರಳ, ಸಜ್ಜನ ರಾಜಕಾರಣಿ ಪ್ರಲ್ಹಾದ ಜೋಶಿ ಅವರನ್ನು ಧಾರವಾಡ ಲೋಕಸಭೆ ಅಭ್ಯರ್ಥಿಯನ್ನಾಗಿ ಮತ್ತೆ ಗೆಲ್ಲಿಸಬೇಕು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಮನವಿ ಮಾಡಿದರು.

ಬಿಜೆಪಿ ವತಿಯಿಂದ ಇಲ್ಲಿನ ಗೋಕುಲ ಗಾರ್ಡನ್​ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಬಲಗೈ ಬಂಟ ಹಾಗೂ ಅನಂತಕುಮಾರ್ ನಂತರ ಅವರ ಸ್ಥಾನ ತುಂಬಬಲ್ಲ ಪ್ರಲ್ಹಾದ ಜೋಶಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಹಿಂದಿನಿಂದಲೂ ಜಾತಿ ಜಾತಿಗಳ ನಡುವೆ ವೈಷಮ್ಯ ಹುಟ್ಟು ಹಾಕುತ್ತ ಬಂದಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಚುನಾವಣೆಗೆ ನಿಂತಾಗ ಅವರನ್ನು ಕುತಂತ್ರದಿಂದ ಸೋಲುವಂತೆ ಮಾಡಿದ್ದು ಕಾಂಗ್ರೆಸ್. ಬಾಬು ಜಗಜೀವನರಾಂ ಪ್ರಧಾನಿ ಆಗುತ್ತಾರೆ ಎಂದಾಗ ಇಂದಿರಾ ಗಾಂಧಿ ಮೋಸದಿಂದ ಸೋಲಿಸಿದರು ಎಂದು ಆರೋಪಿಸಿದರು.

ಕುಡಚಿ ಶಾಸಕ ಪಿ. ರಾಜೀವ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಪಾರ್ಲಿಮೆಂಟ್​ಗೆ ಹಣೆ ಹಚ್ಚಿ ನಮಸ್ಕರಿಸಿದ್ದರು. ಶತ್ರು ರಾಷ್ಟ್ರ ಪಾಕಿಸ್ತಾನಿ ಉಗ್ರರಿಗೆ ಬಾಲಾಕೋಟ್ ದಾಳಿ ಮೂಲಕ ಉತ್ತರ ಕೊಟ್ಟರು. ಜಗತ್ತಿಗೆ ಭಾರತದ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟರು ಎಂದರು.

ಸಂಸದ ಪ್ರಲ್ಹಾದ ಜೋಶಿ ಮಾತನಾಡಿ, ಜಿಲ್ಲೆಯ 34 ಸಾವಿರ ದಲಿತ ಕುಟುಂಬಗಳಿಗೆ ಎಲ್​ಪಿಜಿ ಸಿಲಿಂಡರ್ ವಿತರಿಸಿದ್ದೇವೆ. ಸಂಸದರ ನಿಧಿಯಲ್ಲಿ ಶೇ. 30ರಷ್ಟು ಅನುದಾನವನ್ನು ದಲಿತರ ಸಮುದಾಯ ಭವನ, ರಸ್ತೆ ಮತ್ತಿತರರ ಅಭಿವೃದ್ಧಿಗೆ ಬಳಸಿದ್ದೇನೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 15800 ಮನೆ ನಿರ್ವಣಕ್ಕೆ ಚೆಕ್ ನೀಡಲಾಗಿದೆ ಎಂದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಮೀಸಲಾತಿ ತೆಗೆಯುತ್ತಾರೆ ಎಂಬುದು ಶುದ್ಧ ಸುಳ್ಳು. ಇದು ಕಾಂಗ್ರೆಸ್​ನ ಕುತಂತ್ರ. ಪ್ರಜಾಪ್ರಭುತ್ವ ಇರುವವರೆಗೆ ಮೀಸಲಾತಿ ಇರುತ್ತದೆ ಎಂದು ಮೋದಿಯವರೇ ಹೇಳಿದ್ದಾರೆ ಎಂದರು. ಹಿಂದುಳಿದ, ದಲಿತರ ಏಳ್ಗೆಗೆ ನಾನು ಸದಾ ಸಿದ್ಧ. ನಿಮಗಾಗಿ ನನ್ನ ಮನೆ ಬಾಗಿಲು ತೆರೆದಿರುತ್ತದೆ. ನಾನು ಈ ಕ್ಷೇತ್ರದ ಪ್ರಧಾನ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಜೋಶಿ ಹೇಳಿದರು.

ಶಾಸಕರಾದ ಶಿವನಗೌಡ ನಾಯಕ, ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಮನೋಹರ ಐನಾಪುರ, ಹು-ಧಾ ಮಹಾನಗರ ಅಧ್ಯಕ್ಷ ನಾಗೇಶ ಕಲಬುರ್ಗಿ, ಗ್ರಾಮೀಣ ಜಿಲ್ಲಾಧ್ಯಕ್ಷ ಈರಣ್ಣ ಜಡಿ, ಅರುಣ ಹುದ್ಲಿ, ವೆಂಕಟೇಶ ಮೇಸ್ತ್ರಿ, ಚಂದ್ರಶೇಖರ ಗೋಕಾಕ, ಶಂಕರಪ್ಪ ಬಿಜವಾಡ, ಸಿ.ಟಿ. ಪಾಟೀಲ, ಪ್ರಕಾಶ ದಾಸನವರ, ಮತ್ತಿತರರು ಉಪಸ್ಥಿತರಿದ್ದರು. ನಾಗರಾಜ ಟಗರಗುಂಟಿ ಸ್ವಾಗತಿಸಿದರು. ಅಶೋಕ ವಾಲ್ಮೀಕಿ ವಂದಿಸಿದರು. ಮಹೇಂದ್ರ ಕೌತಾಳ ನಿರೂಪಿಸಿದರು.

ಖರ್ಗೆ ಸ್ಥಾನದಲ್ಲಿ ಇದ್ದಿದ್ದರೆ ಬುದ್ಧಿ ಕಲಿಸುತ್ತಿದ್ದೆ:ಬಿಜೆಪಿಯಲ್ಲಿ ಚಹಾ ಮಾರುತ್ತಿದ್ದ ಹುಡುಗ ಪ್ರಧಾನಿಯಾಗಿದ್ದಾರೆ. ದಲಿತ ಕುಟುಂಬದ ರಾಮನಾಥ ಕೋವಿಂದ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಖರ್ಗೆ, ಪರಮೇಶ್ವರ್, ಎನ್. ರಾಚಯ್ಯ, ಕೆ.ಎಚ್. ರಂಗನಾಥ ಅವರಂಥ ದಲಿತರನ್ನು ಸಿಎಂ ಮಾಡಲು ಕಾಂಗ್ರೆಸ್ ಹಿಂದೇಟು ಹಾಕಿದೆ. ಖರ್ಗೆ ಅವರ ಸ್ಥಾನದಲ್ಲಿ ನಾನು ಇದ್ದಿದ್ದರೆ ಹೈಕಮಾಂಡ್​ಗೆ ಬುದ್ಧಿ ಕಲಿಸುತ್ತಿದ್ದೆ ಎಂದು ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.


ಸವಾಲ್ : ಕಾಂಗ್ರೆಸ್ ಉರಿಯುವ ಮನೆ, ಒಳಗಡೆ ಹೋದರೆ ಸುಟ್ಟು ಹೋಗುತ್ತೀರಿ ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಅಲ್ಲದೆ, ಅಂಬೇಡ್ಕರ್ ಯಾಕೆ ಕಾಂಗ್ರಸ್ ತೊರೆದರು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಲಿ ಎಂದು ಕಾರಜೋಳ ಹಾಕಿದರು.