ಹಿಂದೂ ನಿಂದನೆಯ ಇತಿಹಾಸ ಮತ್ತು ವರ್ತಮಾನ

ಹಿಂದುತ್ವ ವಿರುದ್ಧ ಷಡ್ಯಂತ್ರ ಣಾಗ 3

ಸಂಝೋತಾ ಎಕ್ಸ್​ಪ್ರೆಸ್ ರೈಲು ಮತ್ತು ಮಾಲೇಗಾಂವ್ ಸ್ಫೋಟ ಪ್ರಕರಣಗಳಲ್ಲಿ ‘ಹಿಂದೂ ಭಯೋತ್ಪಾದನೆ’ ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಯಿತೆಂಬುದು ಈಗ ದೃಢಪಟ್ಟಿದೆ. ಈಗ ಲೋಕಸಭಾ ಚುನಾವಣೆಯಲ್ಲಿ ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಹಿಂದೂ ಧರ್ಮವನ್ನು ಗುರಿಯಾಗಿಸುವ ಯತ್ನಗಳು ಇವು ಮಾತ್ರವಲ್ಲ, ಇನ್ನೂ ಬೇಕಾದಷ್ಟು ಇವೆ. ಆ ಬಗ್ಗೆ ಈ ಲೇಖನ ಸರಣಿ ವಿವರಿಸುತ್ತದೆ.

ಜೀವಂತ ಮನುಷ್ಯನ ಎದೆಯನ್ನು ಬಗೆದು ಮಿಡಿಯುತ್ತಿರುವ ಹೃದಯವನ್ನು ಹೊರಗೆಳೆದು ಸೂರ್ಯನಿಗೆ ತೋರಿಸುವ ಪ್ರಾಚೀನ ಅಜ್ಟೆಕ್ ಧಾರ್ವಿುಕ ವಿಧಿಯಿಂದ ಹಿಡಿದು ಒಂದು ಸಣ್ಣ ಕ್ರಿಮಿಯನ್ನೂ ಕೊಲ್ಲಬಾರದೆನ್ನುವ ಜೈನಧರ್ಮದವರೆಗೆ, ಬಹುತೇಕ ಯುದ್ಧಗಳ ಮೂಲಕ ಪ್ರಸಾರಗೊಂಡ ಇಸ್ಲಾಂನಿಂದ ಹಿಡಿದು ಶಾಂತಿಯುತ ಪ್ರಚಾರದಿಂದಲೇ ಒಂದು ಕಾಲದಲ್ಲಿ ಏಷ್ಯಾದ ಪ್ರಮುಖ ಧರ್ಮವಾಗಿದ್ದ ಬೌದ್ಧಧರ್ಮದವರೆಗೆ ಹಲವು ಹತ್ತು ಧರ್ಮಗಳನ್ನು, ನಂಬುಗೆಗಳನ್ನು ಜಗತ್ತು ಕಂಡಿದೆ.

ಇಂದು ಜಾಗತಿಕವಾಗಿ ಪ್ರಮುಖವೆನಿಸಿಕೊಳ್ಳುತ್ತಿರುವ ಧರ್ಮಗಳೆಲ್ಲವುಗಳ ಮೂಲವನ್ನು ಎರಡೇ ಧರ್ಮಗಳಲ್ಲಿ ಗುರುತಿಸಬಹುದಾಗಿದೆ. ಅವೆಂದರೆ ಹಿಂದೂ ಹಾಗೂ ಯೆಹೂದಿ ಧರ್ಮಗಳು. ಉಳಿದೆಲ್ಲ ಧರ್ಮಗಳು ಈ ಎರಡರಲ್ಲೇ ಮೊಳೆತ ನಿರಾಕರಣಾ ಅಥವಾ ಸುಧಾರಣಾ ಪ್ರಕ್ರಿಯೆಗಳು. ಬೌದ್ಧಧರ್ಮ, ಜೈನಧರ್ಮ, ಸಿಖ್​ಧರ್ಮ ಮುಂತಾದುವುಗಳ ಮೂಲ ಹಿಂದೂಧರ್ಮದಲ್ಲಿದ್ದರೆ ಕ್ರಿಶ್ಚಿಯಾನಿಟಿ, ಇಸ್ಲಾಂ ಮತ್ತು ಬಹಾಯಿ ಧರ್ಮಗಳ ಮೂಲವನ್ನು ಯೆಹೂದಿ ಧರ್ಮದಲ್ಲಿ ಕಾಣಬಹುದಾಗಿದೆ. ಹೀಗಾಗಿ ಹಿಂದೂ ಮತ್ತು ಯೆಹೂದಿ ಧರ್ಮಗಳ ಉಗಮದ ಬಗ್ಗೆ ರ್ಚಚಿಸಿದರೆ ಅದು ಉಳಿದೆಲ್ಲ ಧರ್ಮಗಳ ಉಗಮದ ಚರ್ಚೆಗೆ ಪೀಠಿಕೆಯಾಗುತ್ತದೆ. ಈ ಚರ್ಚೆಯನ್ನು, ಲೇಖನಸರಣಿಯ ಉದ್ದೇಶ ಮತ್ತು ವ್ಯಾಪ್ತಿಗನುಗುಣವಾಗಿ ಹಿಂದೂ ಧರ್ಮಕ್ಕಷ್ಟೇ ಸೀಮಿತಗೊಳಿಸಿಕೊಳ್ಳೋಣ.

ಹಿಂದೂಧರ್ಮದ ಕುರಿತಾದ ಚರ್ಚೆಯನ್ನು ‘ಹಿಂದೂ’ ಎಂಬ ಪದದ ಉಗಮದಿಂದಲೇ ಪ್ರಾರಂಭಿಸೋಣ. ಭಾರತೀಯರಿಗೆ ‘ಹಿಂದೂ’ ಎಂದು ಹೆಸರಿಟ್ಟದ್ದು ಪರ್ಷಿಯನ್ನರು. ಇದರ ಹಿಂದೆ ಭಾಷಿಕ ಹಾಗೂ ಉಚ್ಚಾರಣೀಯ ಕಾರಣಗಳಿವೆ. ಪ್ರಾಚೀನ ಪರ್ಶಿಯನ್ ಭಾಷೆಯಲ್ಲಿ ‘ಸ’ ಅಕ್ಷರ ಇಲ್ಲದ ಕಾರಣ ಬೇರೆಲ್ಲ ಭಾಷೆಗಳ ‘ಸ’ಕಾರಗಳು ಪರ್ಷಿಯನ್ ನಾಲಿಗೆಯಲ್ಲಿ ‘ಹ’ಕಾರಗಳಾಗಿ ಬದಲಾಗುತ್ತವೆ ಮತ್ತು ಹಿಂದೂ, ಹಿಂದೂಸ್ಥಾನ ಎಂಬ ಹೆಸರುಗಳು ಹುಟ್ಟಿಕೊಂಡ ರಹಸ್ಯ ಇದರಲಿ ಅಡಗಿದೆ.

1968-76ರ ಅವಧಿಯಲ್ಲಿ ತಾರ್ಬೆಲಾ ಅಣೆಕಟ್ಟು ನಿರ್ವಣವಾಗುವ ಮೊದಲು ಪಂಜಾಬ್ ಮತ್ತು ಸಿಂಧ್​ನಲ್ಲಿ ಸಿಂಧೂ ನದಿ ಅದೆಷ್ಟು ಅಗಲವಾಗಿತ್ತೆಂದರೆ ಮಳೆಗಾಲದಲ್ಲಿ ಈ ದಡದಲ್ಲಿ ನಿಂತರೆ ಆಚೆಯ ದಡ ಕಾಣುತ್ತಲೇ ಇರಲಿಲ್ಲ. ಹೀಗಾಗಿ ಅಗಾಧ ಜಲರಾಶಿ ಅಥವಾ ಸಾಗರವನ್ನು ಸೂಚಿಸುವ ‘ಸಿಂಧೂ’ ಎಂಬ ಹೆಸರು ಆ ಮಹಾನ್ ನದಿಗೆ ಅನ್ವರ್ಥವಾಗಿಯೇ ಇತ್ತು. ಈ ಸಂಸ್ಕೃತ ಹೆಸರು ಪ್ರಾಚೀನ ಪರ್ಶಿಯನ್ ನಾಲಿಗೆಯಲ್ಲಿ ‘ಹಿಂದೂ’ ಎಂದಾಗಿ ಅಪಭ್ರಂಶಗೊಂಡಿತು. ಪ್ರಾಚೀನ ಪರ್ಶಿಯನ್ನರು ಸಿಂಧೂನದಿಯನ್ನು ಹಿಂದೂ ಎಂದು ಕರೆದದ್ದಲ್ಲದೇ ಈ ಪ್ರದೇಶವನ್ನೂ ಆ ಹೆಸರಿನಿಂದಲೇ ಗುರುತಿಸಲಾರಂಭಿಸಿದರು. ಅದರ ಮುಂದುವರಿಕೆಯಾಗಿ ಈ ನಾಡಿನ ಜನರಿಗೂ ಹಿಂದೂ ಎಂಬ ಹೆಸರು ಬಂತು. ಹೀಗಾಗಿ ಹಿಂದೂ ಎನ್ನುವುದು ಮೂಲತಃ ಧರ್ಮಸೂಚಕವಾಗಿರಲಿಲ್ಲ. ಉತ್ತರ ಭಾರತದಲ್ಲಿ ವಾಸಿಸುವ ಎಲ್ಲರೂ, ಅವರ ಧಾರ್ವಿುಕ ನಂಬಿಕೆಗಳೇನೇ ಇರಲಿ ಅವರೆಲ್ಲರೂ ಹಿಂದೂಗಳೇ ಅಂದರೆ ಹಿಂದೂ (ಸಿಂಧೂ) ದೇಶವಾಸಿಗಳೇ. ಇಂದಿಗೂ ಪಶ್ಚಿಮ ಹಾಗೂ ಮಧ್ಯ ಏಷ್ಯಾದ ಭಾಷೆಗಳಲ್ಲಿ ಹಿಂದೂ ಅಂದರೆ ಭಾರತೀಯ (ಇಂಡಿಯನ್) ಎಂದರ್ಥ, ಹಿಂಧೂಧರ್ವಿುೕಯ ಎಂದಲ್ಲ.

ನಂತರ ಪರ್ಶಿಯನ್ನರಿಂದ ಹಿಂದೂ ಎಂಬ ನಾಡಿನ ಬಗ್ಗೆ ಅರಿತ ಗ್ರೀಕರು ಅದನ್ನು ತಮ್ಮ ಭಾಷಾನಿಯಮಗಳಿಗನುಸಾರವಾಗಿ ‘ಇಂಡಿಯಾ’ ಎಂದು ಬದಲಾಯಿಸಿಕೊಂಡರು. ಕಳೆದ ಎರಡೂವರೆ ಸಾವಿರ ವರ್ಷಗಳಿಂದಲೂ ಭಾರತವನ್ನು ಪಶ್ಚಿಮ ಜಗತ್ತು ಗುರುತಿಸುತ್ತಿರುವುದು ಈ ಹೆಸರಿನಿಂದ. ಮೊದಲಿಗೆ ಪ್ರದೇಶಸೂಚಕವಾದ ಹಿಂದೂ ಅಥವಾ ಇಂಡಿಯಾ ಎಂಬ ನಾಮಪದಗಳು ಮುಂದೆ ವಸಾಹತೀಕರಣದ ಕಾಲದಲ್ಲಿ ಪ್ರತ್ಯೇಕ ಅರ್ಥಗಳನ್ನು ಪಡೆದುಕೊಂಡವು. ಇದಕ್ಕೆ ಕಾರಣ ವಹಾಹತುಶಾಹಿ ವಿದ್ವಾಂಸರು ಇಂಡಿಯಾ ಎಂಬ ನಾಮಪದವನ್ನು ಭೌಗೋಳಿಕ ಹಾಗೂ ರಾಜಕೀಯ ವ್ಯವಸ್ಥೆಯನ್ನು ಸೂಚಿಸಲೂ, ಹಿಂದೂ ಎಂಬ ನಾಮಪದವನ್ನು ಆ ಭೌಗೋಳಿಕ ಪ್ರದೇಶಕ್ಕೇ ವಿಶಿಷ್ಟವಾದ ಧಾರ್ವಿುಕ

ನಂಬುಗೆಗಳನ್ನು ಸೂಚಿಸಲೂ ಬಳಸಿಕೊಳ್ಳತೊಡಗಿದ್ದು. ನಂತರ ವಸಾಹತುಶಾಹಿ ಶೈಕ್ಷಣಿಕ ಮೂಸೆಯಲ್ಲಿ ಅದ್ದಿತೆಗೆದ ಭಾರತೀಯರೂ ಈ ಅರ್ಥಗಳನ್ನೇ ಒಪ್ಪಿಕೊಂಡು ಪ್ರಚುರಪಡಿಸುತ್ತ ಬರುತ್ತಿದ್ದಾರೆ.

ಹಿಂದೂಧರ್ಮದ ಉಗಮದ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಆಧಾರಗಳಿಲ್ಲ. ಇದಕ್ಕೆ ಕಾರಣ ಹಿಂದೂಧರ್ಮವೆಂದು ಕರೆಸಿಕೊಳ್ಳುತ್ತಿರುವ ಸಂಪ್ರದಾಯ, ರೂಡಿರಿವಾಜುಗಳ ಮೊತ್ತದ ಪ್ರಾಚೀನತೆ. ಇದನ್ನು ವಿವರಿಸುವ ಮೊದಲು ಮಾನವಸಮಾಜದಲ್ಲಿ ಧರ್ಮದ ಉಗಮದ ಬಗ್ಗೆ ಒಂದೆರಡು ಮಾತುಗಳನ್ನು ಹೇಳುವುದು ಇಲ್ಲಿ ಉಚಿತ. ಧಾರ್ವಿುಕ ನಂಬುಗೆಗಳ, ವಿಚಾರಗಳ ಇತಿಹಾಸ ಬಹುಶಃ ಮಾನವ ಇತಿಹಾಸದಷ್ಟೇ ಪ್ರಾಚೀನ. ಹೀಗಾಗಿ ಮಾನವನ ಪ್ರಾಚೀನತೆಯ ಬಗ್ಗೆ ನಮಗೆ ನಿಖರವಾಗಿ ತಿಳಿಯುವವರೆಗೆ ಧರ್ಮದ ಪ್ರಾಚೀನತೆಯೂ ನಿಖರವಾಗಿ ತಿಳಿಯುವುದಿಲ್ಲ. ಈ ಮಾತನ್ನು ಯಾಕೆ ಹೇಳುತ್ತಿದ್ದೇನೆಂದರೆ ಈಗ ಚಾಲ್ತಿಯಲ್ಲಿರುವ ಡಾರ್ವಿನ್​ನ ವಿಕಾಸವಾದದ ಪ್ರಕಾರ ಪೂರ್ವ ಆಫ್ರಿಕಾದಲ್ಲಿ ವಾನರರಿಂದ ಮಾನವ ಪ್ರಬೇಧ ಬೇರ್ಪಟ್ಟದ್ದು ಅರವತ್ತು ಲಕ್ಷ ವರ್ಷಗಳ ಹಿಂದೆ. ಅದರ ಮುಂದುವರಿಕೆಯಾಗಿ 23 ಲಕ್ಷ ವರ್ಷಗಳ ಹಿಂದೆ ಕೈಗಳನ್ನು ಉಪಯೋಗಿಸುವ, ಆಯುಧಗಳನ್ನು ತಯಾರಿಸುವ ಬುದ್ಧಿಶಕ್ತಿಯನ್ನು ಹೊಂದಿದ ಹೋಮೊ ಹ್ಯಾಬಿಲಿಸ್ ಮಾನವನ ಉಗಮವಾಯಿತು. ಆಯುಧಗಳನ್ನೂ, ಉಪಕರಣಗಳನ್ನೂ ತಯಾರಿಸಿ ಉಪಯೋಗಿಸಬಲ್ಲ ಮಾನವನಿಗೆ ಸಹಜವಾಗಿಯೇ ಪ್ರಕೃತಿಯ ಹಲವು ನಿಯಮಗಳು ಪರಿಚಯವಾಗಿದ್ದಿರಲೇಬೇಕು. ಅವುಗಳ ಕುರಿತಾದ ಜಿಜ್ಞಾಸೆಯೊಂದಿಗೆ ತನ್ನನ್ನು ತಾನರಿಯುವ ಪ್ರಯತ್ನವನ್ನೂ ಆತ ನಡೆಸಿರಬೇಕು. ಅದೇ ಧಾರ್ವಿುಕ ನಂಬುಗೆಗಳಿಗೆ ತಳಹದಿಯೂ ಆಗಿರಬೇಕು. ಈ ಪ್ರಕ್ರಿಯೆಯನ್ನು ಚಿತ್ರಿಸುವಲ್ಲಿ ಬ್ರಿಟಿಷ್ ಮಾನವಶಾಸ್ತ್ರಜ್ಞ ಎಡ್ವರ್ಡ್ ಟೈಲರ್ (1832-1917) ಮಾಡಿರುವ ಅವಲೋಕನ ಪ್ರಸ್ತುತವೆನಿಸುತ್ತದೆ. ಟೈಲರ್ ಹೇಳುವುದು ಹೀಗೆ-‘‘ಇದ್ದಕ್ಕಿದ್ದಂತೆ ಮನಸ್ಸಿನಲ್ಲಿ ಮೂಡುವ ವಿವರಿಸಲಾಗದ ಆಲೋಚನೆಗಳು, ಕಾಣುವ ಚಿತ್ರಗಳು, ಕನಸುಗಳು, ಹಳವಂಡಗಳು, ಅವುಗಳಲ್ಲಿ ಮತ ಪರಿಚಯಸ್ಥರು ಕಾಣಿಸಿಕೊಳ್ಳುವುದು ಮುಂತಾದುವು ತಾನೆಂದರೆ ಭೌತಿಕ ಶರೀರ ಮಾತ್ರವಲ್ಲ, ಶರೀರದೊಳಗೆ ‘ಮತ್ತೇನೋ’ ಅಂದರೆ ಆತ್ಮ (ಲ್ಯಾಟಿನ್ನಲ್ಲಿ ‘ಅನಿಮಾ’) ಇರಬಹುದೆಂಬ ಕಲ್ಪನೆಯನ್ನು ಆದಿಮಾನವನಲ್ಲಿ ಮೂಡಿಸಿರಬಹುದು. ಅದು ಮುಂದುವರಿದು, ಸತ್ತ ನಂತರ ದೇಹವನ್ನು ತ್ಯಜಿಸಿದ ಆತ್ಮವು ನಾಶವಾಗದೇ ಪ್ರಕೃತಿಯಲ್ಲಿ ಅಂದರೆ ಮರಗಿಡಗಳು, ಕಲ್ಲುಬಂಡೆಗಳು, ನದಿಪರ್ವತಗಳಲ್ಲಿ, ಸೂರ್ಯ-ಚಂದ್ರ, ಗ್ರಹ, ನಕ್ಷತ್ರಗಳಲ್ಲಿ ನೆಲೆಸುತ್ತವೆಂಬ ನಂಬಿಕೆಯೂ ಮೂಡಿರಬೇಕು. ಅದರ ಮುಂದುವರಿಕೆಯಾಗಿ ಮೃತ ಪ್ರೀತಿಪಾತ್ರರು ನೆಲೆಸಿರುವ ಪ್ರಕೃತಿಯ ಚಿನ್ಹೆಗಳೂ ಆದಿಮಾನವನಿಗೆ ಪ್ರೀತಿಪಾತ್ರವಾಗಿ ಕ್ರಮೇಣ ಅವುಗಳ ಮೇಲೆ ಭಕ್ತಿ ಮೊಳೆತು ಅವು ಪೂಜಾರ್ಹಗೊಳ್ಳತೊಡಗಿರಬೇಕು. ಪೂಜಾವಿಧಾನಗಳು ಮತ್ತು ಅವುಗಳಿಗೆ ಒತ್ತುಕೊಟ್ಟ ಭಾವನೆಗಳು ಮತ್ತು ನಂಬಿಕೆಗಳು ಧಾರ್ವಿುಕ ವಿಧಿವಿಧಾನಗಳಿಗೆ ತಳಹದಿಯಾಗಿರಬೇಕು. ಧರ್ಮ ಹೀಗೆ ಉದಿಸಿರಬೇಕು’.

ಪ್ರಾಚೀನ ಹಿಂದೂ ನಂಬುಗೆಗಳಲ್ಲಿ ಪ್ರಕೃತಿಯ ಬಗ್ಗೆ ಪೂಜ್ಯ ಭಾವನೆ, ಅದರ ಅರಾಧನೆ ಪ್ರಮುಖವಾಗಿ ಕಾಣಿಸಿಕೊಳ್ಳುವುದರಿಂದ ಹಿಂದೂಧರ್ಮದ ಮೊಳಕೆಯನ್ನು ಹೊಮೋ ಹ್ಯಾಬಿಲಿಸ್​ನ ಕಾಲದಲ್ಲೇ ಗುರುತಿಸಬಹುದೇನೋ. ಆದರೆ ಅದಾದದ್ದು ಯಾವಾಗ? ಡಾರ್ವಿನ್​ನ ಪ್ರಕಾರ, ಹೋಮೋ ಹ್ಯಾಬಿಲಿಸ್ ಮಾನವನ ಉಗಮವಾದದ್ದು 23 ಲಕ್ಷ ವರ್ಷಗಳ ಹಿಂದೆ. ಇಲ್ಲಿ ನಮಗೆದುರಾಗುವ ತೊಡಕೆಂದರೆ ಡಾರ್ವಿನ್ ತನ್ನ ವಿಕಾಸವಾದವನ್ನು ಪ್ರಚಾರ ಮಾಡತೊಡಗಿದ ದಿನದಿಂದಲೂ ಅದನ್ನು ಸಾರಾಸಗಟಾಗಿ ನಿರಾಕರಿಸುವ ಬಲವಾದ ಸಾಕ್ಷ್ಯಗಳು ಒಂದರ ಹಿಂದೊಂದರಂತೆ ದೊರೆಯತೊಡಗುತ್ತಲೇ ಬಂದಿವೆ ಮತ್ತು ಅವೆಲ್ಲವನ್ನೂ ಉದ್ದೇಶಪೂರ್ವಕವಾಗಿ ಮೂಲೆಗೆ ತಳ್ಳಿ ಡಾರ್ವಿನ್​ನ ವಿಕಾಸವಾದವನ್ನೇ ವೈಜ್ಞಾನಿಕ ಸತ್ಯವೆಂಬಂತೆ ಪ್ರಚಾರಗೊಳಿಸುವ ವ್ಯವಸ್ಥಿತ ಪಿತೂರಿಯೂ ನಡೆಯುತ್ತಲೇ ಬಂದಿದೆ. ಮೂಲೆಗೊತ್ತರಿಸಲ್ಪಟ್ಟಿರುವ ಆಧಾರಗಳ ಪ್ರಕಾರ, ಕಲ್ಲಿನಿಂದ ಆಯುಧಗಳನ್ನೂ ಉಪಕರಣಗಳನ್ನೂ ತಯಾರಿಸಬಲ್ಲ ಬುದ್ಧಿಶಕ್ತಿಯುಳ್ಳ ಮಾನವ ಸುಮಾರು ನಾಲ್ಕೂವರೆಯಿಂದ ಐದು ಕೋಟಿ ವರ್ಷಗಳ ಹಿಂದೆಯೇ ತುರ್ಕ್​ವೆುನಿಸ್ತಾನ, ಫ್ರಾನ್ಸ್, ಸ್ವಿಜರ್​ಲ್ಯಾಂಡ್, ಅಮೆರಿಕ ಸೇರಿದಂತೆ ಪ್ರಪಂಚದ ವಿವಿಧೆಡೆ ಕಾಣಿಸಿಕೊಂಡಿದ್ದ!

ಎಡ್ವರ್ಡ್ ಟೈಲರ್​ರ ಅವಲೋಕನದಂತೆ ಆದಿ ಮಾನವನಲ್ಲಿ ಉದಿಸಿದ್ದು ಹಿಂದೂ ಧಾರ್ವಿುಕ ನಂಬುಗೆಗಳು ಮಾತ್ರವಲ್ಲ. ಪ್ರಪಂಚದ ಎಲ್ಲೆಡೆ ಮಾನವ ಗುಂಪುಗಳು ಈ ಬಗೆಯಾಗಿಯೇ ತಂತಮ್ಮ ಧಾರ್ವಿುಕ ನಂಬುಗೆಗಳನ್ನು ಮೂಡಿಸಿಕೊಂಡಿರಬೇಕು. ಅವುಗಳಲ್ಲಿ ಕೆಲವು ನಶಿಸುತ್ತ, ಮತ್ತೆ ಕೆಲವು ಬದಲಾಗುತ್ತ ಬೆಳೆಯುತ್ತ ಸಾಗಿಬಂದಿವೆ. ಹೀಗೆ ಸಾಗಿಬಂದಿರುವುದಕ್ಕೆ ಅತ್ಯಂತ ಸೂಕ್ತ ಉದಾಹರಣೆ ಹಿಂದೂಧರ್ಮ. ಪ್ರಕೃತಿಯ ಆರಾಧನೆಯ ರೂಪದಲ್ಲಿ ಎಂದೋ ಉದಿಸಿದ ಹಿಂದೂಧರ್ಮ ತನ್ನ ಇತಿಹಾಸದುದ್ದಕ್ಕೂ ಹೊಸತುಗಳನ್ನು ಸ್ವೀಕರಿಸುತ್ತ, ವಿಕಾಸಗೊಳ್ಳುತ್ತ, ಬೆಳೆಯುತ್ತ ಸಾಗಿಬಂದಿದೆ. ಈ ಬೆಳವಣಿಗೆಯಲ್ಲಿ ಕಂಡುಬರುವ ಪ್ರಮುಖ ಲಕ್ಷಣವೆಂದರೆ ಹಿಂದೂಧರ್ಮಕ್ಕೆ ಯಾವುದೂ ‘ಅನ್ಯ’ವಲ್ಲ. ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ತಾವು ಪ್ರಸರಿಸಿದ ನೆಲದಲ್ಲಿ ಮೊದಲಿದ್ದ ವಿಚಾರ ಮತ್ತು ನಂಬಿಕೆಗಳನ್ನು ಬೇರುಸಹಿತ ಕಿತ್ತೊಗೆದು ಅಲ್ಲಿ ತಮ್ಮ ವಿಚಾರ ಮತ್ತು ನಂಬಿಕೆಗಳನ್ನು ನೆಟ್ಟದ್ದು ಸರ್ವವಿದಿತ.

ಹೀಗೆ ಯಾವುದನ್ನೂ ಅನ್ಯ ಎಂದು ತಿರಸ್ಕರಿಸದೆ, ಬಹುತ್ವಕ್ಕೆ ಬೆಲೆ ಕೊಟ್ಟು, ಎಲ್ಲವನ್ನೂ ಮಾನ್ಯ ಮಾಡುವ ಮೌಲ್ಯವನ್ನು ರೂಢಿಸಿಕೊಂಡಿರುವುದರಿಂದಲೇ ದೇವರನ್ನು ತಲುಪಲು ತಾನೊಂದೇ ಮಾರ್ಗ ಎಂದು ಹಿಂದೂಧರ್ಮ ಹೇಳುವುದಿಲ್ಲ. ಜೀಸಸ್ ಕ್ರೖೆಸ್ಟ್​ನ ಶಿಷ್ಯರಲ್ಲೊಬ್ಬರಾದ ಸಂತ ಥಾಮಸ್ ಕ್ರಿ.ಶ. ಒಂದನೆಯ ಶತಮಾನದಲ್ಲಿಯೇ ಕೋರಮಂಡಲ ತೀರದಲ್ಲಿ ಕ್ರೖೆಸ್ತಧರ್ಮವನ್ನು ಪ್ರಚಾರ ಮಾಡಿದ್ದಕ್ಕೆ ಹಿಂದೂ ಭಾರತದಲ್ಲಿ ಯಾವ ಅಡ್ದಿಯೂ ಎದುರಾಗಲಿಲ್ಲ. ಪ್ರವಾದಿ ಮಹಮ್ಮದರ ಜೀವನಕಾಲದಲ್ಲಿಯೇ ಅಂದರೆ ಕ್ರಿ.ಶ. 629ರಲ್ಲೇ ಅರಬ್ ವರ್ತಕರು ಕೇರಳದ ಕೋಡಂಗಲ್ಲೂರಿನಲ್ಲಿ ಮಸೀದಿಯೊಂದನ್ನು ನಿರ್ವಿುಸಿದರಂತೆ. ಪರಧರ್ವಿುಯರಿಂದ ತುಂಬಿದ್ದ, ರಾಜಕೀಯ ಅಧಿಕಾರ ಹಾಗೂ ಸೇನಾಹಿಡಿತದಲ್ಲಿಲ್ಲದ ದೂರದ ನಾಡೊಂದರಲ್ಲಿ ತಮ್ಮ ಧರ್ಮವನ್ನು ಬಹಿರಂಗವಾಗಿ ಆಚರಿಸುವ ಸ್ವಾತಂತ್ರ್ಯ ಮುಸ್ಲಿಂ ಸಮುದಾಯಕ್ಕೆ ಮೊಟ್ಟಮೊದಲು ದೊರೆತದ್ದು ಹಿಂದೂ ಭಾರತದಲ್ಲಿ. ಇದೆಲ್ಲವೂ ಹೇಳುವುದೇನೆಂದರೆ ತನ್ನ ನಡುವೆ ತಲೆಯೆತ್ತಿ ಬೆಳೆದು ಪ್ರತ್ಯೇಕವಾಗಿಯೇ ನಿಲ್ಲುವ ಅವಕಾಶವನ್ನು ಅನ್ಯಧರ್ಮಗಳಿಗೆ ಹಿಂದೂಧರ್ಮ ನೀಡುತ್ತಲೇ ಬಂದಿದೆ. ಇದಕ್ಕೆ ಪ್ರತಿಯಾಗಿ ಹಿಂದೂಗಳಿಗೆ ಸಿಕ್ಕಿದ್ದೇನು? ಅವಹೇಳನ, ಅವಮಾನ, ದಬ್ಬಾಳಿಕೆ, ಮತಾಂತರ, ಸುಳ್ಳು ದೋಷಾರೋಪಣೆ…

| ಪ್ರೇಮಶೇಖರ (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)