ಹಿಂದು ರಾಷ್ಟ್ರ ಕಟ್ಟಿದ ಶಿವಾಜಿ ಮಹಾರಾಜ್

ಹಾವೇರಿ:

ಛತ್ರಪತಿ ಶಿವಾಜಿ ನೇರ ನುಡಿಯ ನಿಷ್ಠುರವಾದಿ, ಚತುರ ಆಡಳಿತಗಾರ, ತಾಂತ್ರಿಕ ಯುದ್ಧ ಕೌಶಲಯುಳ್ಳ ದೇಶಭಕ್ತರಾಗಿದ್ದರು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಗಳವಾರ ಇಲ್ಲಿನ ಶಿವಾಜಿನಗರದ ತಾಲೂಕು ಮರಾಠಾ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅಪ್ಪಟ ದೇಶಪ್ರೇಮ ಹಾಗೂ ಕೆಚ್ಚೆದೆಯ ನಾಯಕನಾಗಿದ್ದ ಶಿವಾಜಿ ಮಹಾರಾಜರು ಮರಾಠಾ ನೆಲದ ಜನರನ್ನು ಒಗ್ಗೂಡಿಸಿ ಬಲಾಢ್ಯ ಮೊಗಲರ ದುರಾಡಳಿತ ವಿರುದ್ಧ ಹೋರಾಡಿದರು. ಮಾನವೀಯ ಗುಣವುಳ್ಳ ಮಹಾನ್ ವೀರಯೋಧರಾಗಿದ್ದರು ಎಂದು ಬಣ್ಣಿಸಿದರು.

ಸಮಾಜದ ಮುಖಂಡರಾದ ಎಂ.ಎನ್. ವೆಂಕೋಜಿ ಮಾತನಾಡಿ, ಛತ್ರಪತಿ ಶಿವಾಜಿಯವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಯುದ್ಧ ಮಾಡಲು ಯಾವುದೇ ತಾಂತ್ರಿಕ ಸೌಲಭ್ಯಗಳಿಲ್ಲದ ಸಮಯದಲ್ಲಿ ತಮ್ಮ ಧೈರ್ಯ, ಸಾಹಸ ಒಗ್ಗೂಡಿಸಿ ಹಿಂದು ರಾಷ್ಟ್ರ ಕಟ್ಟುವಲ್ಲಿ ಶ್ರಮಿಸಿದರು. ಇಂತಹ ಮಹಾನ್ ಸಾಹಸಿಯ ಪುತ್ಥಳಿ ನಿರ್ಮಾಣ ಹಾಗೂ ಶಿವಾಜಿ ವೃತ್ತ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.

ಭುವನೇಶ್ವರಿ ಪಾಟೀಲ ಉಪನ್ಯಾಸ ನೀಡಿದರು.

ನಗರಸಭೆ ಸದಸ್ಯರಾದ ಪ್ರಸನ್ನ ಧಾರವಾಡಕರ, ಕವಿತಾ ಇಂಗಳಗಿಮಠ, ಚನ್ನಮ್ಮ ಬ್ಯಾಡಗಿ, ಪ್ರಕಾಶ ಮುಂಜೋಜಿ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಸ್ವಾಗತಿಸಿದರು.

ಕಾರ್ಯಕ್ರಮದ ನಂತರ ಶಿವಾಜಿ ಮಹಾರಾಜರ ಅಶ್ವರೋಢ ಪುತ್ಥಳಿಯ ಮೆರವಣಿಗೆಯನ್ನು ಸಕಲ ವಾದ್ಯಮೇಳದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು