ಹಿಂದು ಮಹಾಗಣಪತಿ ವಿಸರ್ಜನೆ

ಬಂಕಾಪುರ: ಪಟ್ಟಣದ ಬಸ್ ನಿಲ್ದಾಣ ಹತ್ತಿರದ ನೆಹರು ಗಾರ್ಡನ್​ನಲ್ಲಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿಯ ವಿಸರ್ಜನೆ ಬುಧವಾರ ಸಂಜೆ ಅದ್ದೂರಿಯಾಗಿ ಜರುಗಿತು.

ಶಾಸಕ ಬಸವರಾಜ ಬೊಮ್ಮಾಯಿ, ಸಂಸದ ಪ್ರಲ್ಹಾದ ಜೋಶಿ, ಅರಳೆಲೆಮಠದ ಶ್ರೀ ರೇವಣಶಿದ್ಧೇಶ್ವ ರ ಶಿವಾಚಾರ್ಯರು, ಕೂಡಲದ ಮಹೇಶ್ವರ ಸ್ವಾಮಿಗಳು ಗಣಪತಿ ವಿಸರ್ಜನೆಗೆ ಚಾಲನೆ ನೀಡಿದರು. ಬೆಳಗ್ಗೆ 10ಕ್ಕೆ ನಡೆಯಬೇಕಿದ್ದ ಕಾರ್ಯಕ್ರಮ ಡಿಜೆ ಹಚ್ಚುವ ಬಗ್ಗೆ ಪೊಲೀಸ್ ಮತ್ತು ಗಣೇಶ ಮಂಡಳಿಯವರ ಮಧ್ಯೆ ಗೊಂದಲದಿಂದ ವಿಳಂಬವಾಯಿತು. ಸಂಜೆ ಪೊಲೀಸರು ಡಿಜೆ ಹಚ್ಚುವುದಕ್ಕೆ ಸಮ್ಮತಿಸಿದ ನಂತರ ಗಣೇಶ ವಿಸರ್ಜನೆಗೆ ಉತ್ಸವ ಮಂಡಳಿಯವರು ಮುಂದಾದರು.

ಸಾವಿರಾರು ಹಿಂದು ಕಾರ್ಯಕರ್ತರು ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹಣೆಗೆ ತಿಲಕವಿಟ್ಟು ಕೇಸರಿ ಪಟ್ಟಿ ಕಟ್ಟಿಕೊಂಡಿದ್ದ ಯುವಕರು ಮೆರವಣಿಗೆಯುದ್ದಕ್ಕೂ ಗಣೇಶ ಮತ್ತು ಹಿಂದು ಪರ ಘೊಷಣೆ ಮೊಳಗಿಸಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ದೊಡ್ಡ ದೊಡ್ಡ ಕೇಸರಿ ಬಾವುಟಗಳನ್ನು ತಿರುಗಿಸಿ ಸಂಭ್ರಮಪಟ್ಟರು. ವಿಸರ್ಜನಾ ಮೆರವಣಿಗೆಯಲ್ಲಿ ತಾಲೂಕು ಹಾಗೂ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ಮೆರುಗು ನೀಡಿದರು.

ಆರ್​ಎಸ್​ಎಸ್ ಮುಖಂಡ ಗಂಗಾಧರ ಮಾಮ್ಲೆಪಟ್ಟಣಶೆಟ್ಟರ್, ಶಿವಾನಂದ ದೇವಸೂರ, ವಿಶ್ವನಾಥ ಹರವಿ, ಯಲ್ಲಪ್ಪ ನರಗುಂದ, ಸೋಮಶೇಖರ ಗೌರಿಮಠ, ಸತೀಶ ನಾಗನೂರ, ಸೇರಿದಂತೆ ಸಾವಿರಾರು ಹಿಂದೂ ಕಾರ್ಯಕರ್ತರು ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬಿಗಿ ಬಂದೋಬಸ್ತ್: ಪಟ್ಟಣದಲ್ಲಿ ಕಳೆದ ವರ್ಷ ಗಣೇಶ ವಿಸರ್ಜನೆಯಲ್ಲಿ ನಡೆದ ಕಹಿ ಘಟನೆ ಹಿನ್ನಲೆಯಲ್ಲಿ ಈ ವರ್ಷ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಪಟ್ಟಣದ ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜ್​ಗಳಿಗೆ ರಜೆ ಘೊಷಿಸಲಾಗಿತ್ತು.