ಕಳಸ: ಹೆಣ್ಣನ್ನು ಹೆಂಡತಿ ಅಂತ ಒಪ್ಪಿಕೊಂಡು ಅದಕ್ಕೆ ವಿಶೇಷವಾದ ಪಾವಿತ್ರ್ಯ ಕೊಡುವುದು ಹಿಂದು ಧರ್ಮದಲ್ಲಿ ಮಾತ್ರ ಎಂದು ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಷಾನಂದ ಹೇಳಿದರು.

ಶ್ರೀಕ್ಷೇತ್ರ ಹೊರನಾಡಿನಲ್ಲಿ ಶುಕ್ರವಾರ ನಡೆದ ಗ್ರಾಮೀಣಾಭಿವೃದ್ಧಿ ಯೋಜನೆಯ ಸಪ್ತಪದಿ ಯೋಜನೆಯ 32ನೇ ವಷರ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿವಾಹ ಹೊಸ ಜವಾಬ್ದಾರಿಯ ಚಿಂತನೆ ಆಗಬೇಕು. ಮನೆಗೆ ಬಂದ ಸೊಸೆಯನ್ನು ಮನೆಯನ್ನು ಬೆಳಗುವ ಮಗಳಂತೆ ಕಾಣಬೇಕು. ಸೊಸೆಯೂ ಅತ್ತೆ, ಮಾವನನ್ನು ಅಪ್ಪ, ಅಮ್ಮನಂತೆ ಕಂಡಾಗ ಮಾತ್ರ ಆ ಮನೆ ನಂದಗೋಕುಲವಾಗುತ್ತದೆ ಎಂದು ಹೇಳಿದರು.
ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮಾತನಾಡಿ, ಸಂಸಾರದ ಏರಿಳಿತಗಳನ್ನು ಸರಿದೂಗಿಸಿಕೊಂಡು ಹೋಗುವುದೇ ಜೀವನ. ಮನಸ್ಸು, ಬದುಕು, ಜೀವನವನ್ನು ಜೋಡಿಸುವ ಕೆಲಸವನ್ನು ಶ್ರೀಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆ ಮಾಡುತ್ತಿದೆ. ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಕ್ಷೇತ್ರದಿಂದ ಹಲವು ಸವಲತ್ತುಗಳನ್ನು ನೀಡುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸತಿ ಪತಿಗಳ ಹೊಂದಾಣಿಕೆಯೇ ಜೀವನದ ಸೂತ್ರವಾಗಬೇಕು ಎಂದು ಹೇಳಿದರು.
ವಧುವರರು ಅರಿತು ಬಾಳಿ. ಮನೆಯ ಹಿರಿಯರನ್ನು ಗೌರವದಿಂದ, ಕಿರಿಯರನ್ನು ಪ್ರೀತಿಯಿಂದ ಕಾಣಬೇಕು. ಹೆಣ್ಣು ಮನೆಯನ್ನು ಬೆಳಗುವ ಮತ್ತು ಈ ಮನೆಯ ಶಕ್ತಿ ಎಂಬ ನಂಬಿಕೆಯನ್ನು ವಧು ಇಟ್ಟುಕೊಂಡಿರುತ್ತಾಳೆ. ಅದನ್ನು ವರ ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಈ ವರ್ಷ 11 ಜೋಡಿಗಳು ಶ್ರೀಮಾತೆಯ ಸನ್ನಿಧಿಯಲ್ಲಿ ವಿವಾಹವಾದರು. ಶ್ರೀ ಅನ್ನಪೂರ್ಣ ಪಾದಸೇವಾ ಧುರಂಧರ ಪುಸ್ತಕದ ಸಂಪಾದಕ ವೆಂಕಟೇಶ್ ಜೋಯಿಷ್ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಟ್ರಸ್ಟಿಗಳಾದ ರಾಜಲಕ್ಷ್ಮೀ ಜಿ. ಜೋಷಿ, ರಾಜಗೋಪಾಲ ಜೋಷಿ, ಗಿರಿಜಾ ಶಂಕರ ಜೋಷಿ ಇತರರಿದ್ದರು.