ಹಿಂದು ದೇವದೇವಿಯರು

| ಸ್ವಾಮಿ ಹರ್ಷಾನಂದಜೀ, ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು

ಲಲಿತೆಯು ಕೈಗಳಲ್ಲಿ ಹಿಡಿದುಕೊಂಡಿರುವ ಬಾಣಗಳೆಂದರೆ ಪಂಚತನ್ಮಾತ್ರೆಗಳು – ಆಕಾಶ, ವಾಯು, ಅಗ್ನಿ, ಆಪಸ್, ಪೃಥ್ವೀ ಎಂಬ ಪಂಚಭೂತಗಳ ಹಿಂದೆ ಇರುವ ಐದು ಸೂಕ್ಷಾ್ಮಂಶಗಳು. ಕಣ್ಣು ಕಿವಿ ಇತ್ಯಾದಿ ಇಂದ್ರಿಯಗಳು ಈ ತನ್ಮಾತ್ರೆಗಳಿಂದಾದ ಉತ್ಪನ್ನಗಳು; ಇವು ಮನಸ್ಸಿನ ಮೂಲಕ ಬಿಟ್ಟ ಬಾಣಗಳಂತೆ ವಿಷಯಗಳೆಡೆ ಸಾಗುತ್ತವೆ. ಆದ್ದರಿಂದ ಈ ತನ್ಮಾತ್ರೆಗಳನ್ನು ಅವಳ ಕೈಯಲ್ಲಿರುವ ಬಾಣಗಳೆಂದು ವರ್ಣಿಸಲಾಗಿದೆ. ನಮ್ಮ ಮನಸ್ಸಿಗೆ, ಇಂದ್ರಿಯಗಳಿಗೆ ಬಲವನ್ನಿತ್ತು ನಿಯಂತ್ರಿಸುವ ಶಕ್ತಿಯೇ ಅವಳು. ಇದೇ ಇಲ್ಲಿ ಅಂತರ್ಗತವಾಗಿರುವ ಅಭಿಪ್ರಾಯ. ಪಾಶವು ನಮ್ಮನ್ನು ಬಂಧಿಸುವ ರಾಗ (ಮೋಹದಿಂದ ಅಂಟಿಕೊಳ್ಳುವುದು). ಅಂಕುಶವೇ ಕ್ರೋಧ, ಹೇವರಿಕೆ – ಇದು ನೋವನ್ನುಂಟುಮಾಡುತ್ತದೆ. ನಮ್ಮ ಮೋಹಕ್ಕೆ, ಹೇವರಿಕೆಗೆ ಚಾಲನೆ ಕೊಡುವ ಶಕ್ತಿಯೂ ಅವಳದ್ದೇ. ಅವಳನ್ನು ನಾವು ಮರೆತರೆ, ಅವಳು ನಮ್ಮನ್ನು ರಾಗಪಾಶದಿಂದ ಬಂಧಿಸಬಹುದು, ಕ್ರೋಧಾಂಕುಶದಿಂದ ತಿವಿಯಬಹುದು. ಅವಳಲ್ಲಿ ಶರಣಾಗತರಾದರೆ, ಅವಳು ಅವುಗಳನ್ನು ಕೈಯಲ್ಲಿ ತೆಗೆದುಕೊಳ್ಳುವಳು; ಆ ಮೂಲಕ ಅವುಗಳಿಂದ ಆಗುವ ಯಾತನೆಯಿಂದ ನಾವು ಮುಕ್ತರಾಗುವೆವು. ಶ್ರೀಚಕ್ರದ ಕುರಿತಾದ ಸ್ವಲ್ಪವಾದರೂ ವಿವರಣೆ ಇಲ್ಲದೆ ಲಲಿತೆಯ ಬಗೆಗಿನ ಚಿತ್ರಣ ಪೂರ್ಣವಾಗಲಾರದು. ಶ್ರೀಚಕ್ರವು ಮುಖ್ಯವಾಗಿ ಒಂದು ಯಂತ್ರ- ದೇವತೆಯ ರೂಪಣೆ, ಮಾದರಿ; ಸಂಕೀರ್ಣವಾದ ಜ್ಯಾಮಿತೀಯ ಚಿತ್ರ.