ಹಿಂದು ಕಾರ್ಯಕರ್ತರ ಬಂಧನ ಪೂರ್ವ ನಿಯೋಜಿತ

ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಹಿಂದು ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಬಂಧಿಸಲಾಗುತ್ತಿದೆ ಎಂದು ಹಿಂದು ಜನಜಾಗೃತಿ ಸಮಿತಿ ಮುಖಂಡ ಗುರುಪ್ರಸಾದ ಗೌಡ ಆರೋಪಿಸಿದರು.

ಹಿಂದು ಜನಜಾಗೃತಿ ಸಮಿತಿಯಿಂದ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ‘ಎಡಪಂಥೀಯರ ಹಿಂದು ವಿರೋಧಿ ಷಡ್ಯಂತ್ರವನ್ನು ಬಹಿರಂಗಗೊಳಿಸಲು ಜನ ಸಂವಾದ ಸಭೆ’ಯಲ್ಲಿ ಅವರು ಮಾತನಾಡಿದರು.
ಗೌರಿ ಹತ್ಯೆಯನ್ನು ಸಮರ್ಥಿಸುವುದಿಲ್ಲ. ಆದರೆ, ಎಸ್​ಐಟಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಹಿಂದು ಯುವಕರನ್ನು ಬಂಧಿಸುತ್ತಿದ್ದಾರೆ. ತಮಗೆ ಬೇಕಾದಂತೆಯೇ ಹೇಳಿಕೆ ನೀಡುವಂತೆ ಹೆದರಿಸಿ ಹೇಳಿಕೆಗಳನ್ನು ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿಸುತ್ತಿದ್ದಾರೆ. ಗೌರಿ ಹತ್ಯೆ ನಂತರ ರಾಹುಲ್ ಗಾಂಧಿ ಮಾತನಾಡಿ, ಹತ್ಯೆಯ ಹಿಂದೆ ಬಿಜೆಪಿ, ಆರ್​ಎಸ್​ಎಸ್ ಕೈವಾಡ ಇದೆ ಎಂದುಬಿಟ್ಟರು. ಹಿಂದಿನ ಗೃಹ ಸಚಿವ ರಾಮಲಿಂಗಾರೆಡ್ಡಿ ಇದಕ್ಕೆ ಮುದ್ರೆ ಒತ್ತಿದಂತೆ ನಡೆದುಕೊಂಡರು. ‘ಕೇಸರಿ ಭಯೋತ್ಪಾದನೆ’ ಇದೆ ಎಂದು ಜನರನ್ನು ನಂಬಿಸುವ ತಂತ್ರ ರೂಪಿಸಲಾಗುತ್ತಿದೆ. ಎಸ್​ಐಟಿ ಅಧಿಕಾರಿಗಳ ಮೂಲಕ ರಾಜಕೀಯ ನಡೆಯುತ್ತಿದೆ ಎಂದು ಕಿಡಿಕಾರಿದರು.

ಹತ್ಯೆಗೆ ಗುಂಡು ನೀಡಿದ್ದರೆನ್ನಲಾದ ಬಷೀರ್​ನನ್ನು ವಿಚಾರಣೆಗೊಳಪಡಿಸಬೇಕು. ನಕ್ಸಲರ ಸುತ್ತಲೂ ತನಿಖೆ ನಡೆಯಬೇಕು. 27ಕ್ಕೂ ಹೆಚ್ಚು ಹಿಂದು ಮುಖಂಡರು ಹಾಗೂ ಕಾರ್ಯಕರ್ತರ ಹತ್ಯೆಯಾಗಿದೆ. ಆ ಪ್ರಕರಣಗಳನ್ನು ಕೂಡ ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ನಿರಪರಾಧಿ 14 ಹಿಂದು ಕಾರ್ಯಕರ್ತರನ್ನು ಬಂಧಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು. ವಕೀಲ ಉಮಾಶಂಕರ ಮಾತನಾಡಿ, ಅಧಿಕಾರಿಗಳು ಒತ್ತಡ ಹೇರಿ ಹೇಳಿಕೆ ಪಡೆಯುವುದು, ನ್ಯಾಯಾಲಯದ ಆದೇಶಗಳನ್ನು ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಕೋರ್ಟ್ ಆದೇಶ ಪಡೆದು ಬಂಧಿತರ ಭೇಟಿಗೆ ತೆರಳಿದರೆ ಎಸ್​ಐಟಿ ಅಧಿಕಾರಿಗಳು ತಡವಾಗಿ ಅವಕಾಶ ಮಾಡಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದು ಜನಜಾಗೃತಿ ಸಮಿತಿಯ ರಾಜಶ್ರೀ ಜಡಿ ಮಾತನಾಡಿದರು.