ಕಂಪ್ಲಿ: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದವರಿಗೆ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಹಾಗೂ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದುಗಳ ನರಮೇಧ ಖಂಡಿಸಿ ಪಟ್ಟಣದಲ್ಲಿ ತಾಲೂಕು ಜನಿವಾರ ಸಮುದಾಯಗಳ ಸಮಿತಿ, ಹಿಂದು ಸಂಘಟನೆಗಳಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಆರ್ಯವೈಶ್ಯ ಸಮುದಾಯದ ಪ್ರಮುಖ ಡಿ.ಶ್ರೀಧರ ಶ್ರೇಷ್ಠಿ ಮಾತನಾಡಿ, ಪರೀಕ್ಷೆಗಳಲ್ಲಿ ಜನಿವಾರ, ತಾಳಿ ಮೊದಲಾದ ಹಿಂದು ಧರ್ಮದ ಸಂಕೇತಗಳನ್ನು ತೆಗೆಸುವುದು ಖಂಡನೀಯ. ಈ ಮೂಲಕ ನಡೆಯುವ ಹಿಂದುಗಳ ಮೇಲಿನ ದೌರ್ಜನ್ಯವನ್ನು ಸಹಿಸುವುದಿಲ್ಲ. ಜನಿವಾರ ತೆಗೆಸಿದವರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಚಿತ್ರಗಾರ ಸಮುದಾಯದ ಪ್ರಮುಖ ಷಣ್ಮುಖಪ್ಪ ಚಿತ್ರಗಾರ ಮಾತನಾಡಿ, ಪಹಲ್ಗಾಮ್‌ನಲ್ಲಿ ಹಿಂದು ಪ್ರವಾಸಿಗರ ಮೇಲಿನ ಉಗ್ರರ ದಾಳಿ ತೀವ್ರ ಖಂಡನೀಯವಾಗಿದೆ. ಉಗ್ರರನ್ನು ಸಂಪೂರ್ಣ ಸದೆಬಡಿಯಬೇಕು ಎಂದು ಆಗ್ರಹಿಸಿದರು. ಇದಕ್ಕೂ ಮುನ್ನ ಉದ್ಭವ ಮಹಾಗಣಪತಿ ದೇವಸ್ಥಾನ ಬಳಿ ವೀರಶೈವ ಸಮುದಾಯದ ಮುಖಂಡ ಅರವಿ ಬಸವನಗೌಡ ಮಾತನಾಡಿ, ಸಮಸ್ತ ಹಿಂದುಗಳು ಭೇದ ಮರೆತು ಸಂಘಟಿತರಾಗಬೇಕು. ಹಿಂದುಗಳೆಲ್ಲ ಸಂಘಟಿತರಾದಲ್ಲಿ ದುಷ್ಟಶಕ್ತಿಗಳನ್ನು ಮೆಟ್ಟಿನಿಲ್ಲಲು ಸಾಧ್ಯ ಎಂದು ಹೇಳಿದರು.
ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಡಿ.ಗೋಪಾಲಕೃಷ್ಣ, ಆರ್ಯವೈಶ್ಯ ಸಮಾಜದ ತಾಲೂಕು ಅಧ್ಯಕ್ಷ ಡಿ.ವಿ.ಸುಬ್ಬಾರಾವ್, ಸೋಮವಂಶ ಆರ್ಯಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ಮಾರುತಿ ಚಿತ್ರಗಾರ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಎ.ರುದ್ರಪ್ಪಾಚಾರ್, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಜಗದೀಶ ರಾಯ್ಕರ್, ರಜಪೂತ ಸಮಾಜದ ಅಧ್ಯಕ್ಷ ಕೆ.ಇಂದ್ರಜಿತ್‌ಸಿಂಗ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಪಿ.ವಿಶ್ವನಾಥ, ದೇವಾಂಗ ಸಮಾಜದ ಉಪಾಧ್ಯಕ್ಷ ಎಸ್.ತುಳಸಿರಾಮಚಂದ್ರ, ಪದ್ಮಶಾಲಿ ಸಮಾಜದ ಅಧ್ಯಕ್ಷ ಪಿ.ಬ್ರಹ್ಮಯ್ಯ, ಗೊಂದಳಿ ಸಮಾಜದ ಅಧ್ಯಕ್ಷ ಎಂ.ನಾಗರಾಜ, ಮರಾಠ ಸಮಾಜದ ಅಧ್ಯಕ್ಷ ಗಣೇಶ, ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಅಂಜಿನಪ್ಪ, ಕ್ಷತ್ರಿಯ ಸಮಾಜದ ಅಧ್ಯಕ್ಷ ಡಾ.ರಾಮರಾಜು, ಬಲಿಜ ಸಮಾಜದ ಕಾರ್ಯದರ್ಶಿ ನಾರಾಯಣಪ್ಪ ಇಂಗಳಗಿ ಇತರರಿದ್ದರು.