ಹಿಂದಿನ ಶಾಸಕರಿಂದ ನೀರಿನ ನಾಟಕ

ರಾಮನಗರ: ಈ ಹಿಂದೆ ಚನ್ನಪಟ್ಟಣದಲ್ಲಿ ಕೈಗೊಂಡಿರುವ ನೀರಾವರಿ ಯೋಜನೆ ಕಾಮಗಾರಿಗೆ ಕಳಪೆ ಪೈಪ್​ಗಳನ್ನು ಬಳಕೆ ಮಾಡಿ ಅವ್ಯವಹಾರ ನಡೆಸಿದ್ದಾರೆ. ಅಲ್ಲದೆ ಇದೊಂದು ತಾತ್ಕಾಲಿಕ ಕ್ರಮವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬೇವೂರಿನಲ್ಲಿ ಮಂಗಳವಾರ ಜನತಾ ದರ್ಶನದಲ್ಲಿ ಮಾತನಾಡಿ, ತಾವು ಮುಖ್ಯಮಂತ್ರಿ ಆದ ನಂತರ ಕೆರೆಗಳನ್ನು ತುಂಬಿಸುತ್ತಿಲ್ಲ ಎಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ, ಹಿಂದಿನ ಶಾಸಕರ ಅವಧಿಯಲ್ಲಿ ಒಂದು ವರ್ಷ 84 ಕರೆಗಳು, ಮತ್ತೊಂದು ವರ್ಷ 25 ಕೆರೆಗಳನ್ನು ತುಂಬಿಸಲಾಗಿತ್ತು. ಈಗ 125 ಕೆರೆಗಳನ್ನು ತುಂಬಿಸಲಾಗಿದೆ. ಇದು ನಿಮಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು. ಹಿಂದಿನ ಶಾಸಕರು ತಾತ್ಕಾಲಿಕವಾಗಿ ನೀರು ಬಿಟ್ಟು ನಿಮ್ಮ ಮುಂದೆ ನಾಟಕವಾಡಿದ್ದಾರೆ ಎಂದರು.

ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕ್ರಮ: ಕಾವೇರಿ ನ್ಯಾಯಾಧೀಕರಣ ಆದೇಶದಂತೆ ಇಂತಿಷ್ಟೇ ಪ್ರಮಾಣದ ನೀರು ಬಿಡಬೇಕೆಂಬ ನಿಯಮವಿದೆ. ತಮಿಳುನಾಡು, ಪಾಂಡಿಚೇರಿ ಹಾಗೂ ರಾಜ್ಯದ ಅಧಿಕಾರಿಗಳಿದ್ದಾರೆ. ಹೀಗಾಗಿ ಬೇಕಾಬಿಟ್ಟಿ ನೀರು ಬಿಡಲು ಸಾಧ್ಯವಿಲ್ಲ. ಹಿಂದೆ ಶಿಂಷಾ ಸೀಪೇಜ್ ನೀರನ್ನು ಬಳಕೆ ಮಾಡಿ ನೀರು ಬಿಡುವ ಕೆಲಸ ಮಾಡಿದ್ದರು. ಆದರೆ, ಈಗ 540 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನದಿಯಿಂದಲೇ ಸತ್ತೇಗಾಲ ಬಳಿಯಿಂದ ಇಗ್ಗಲೂರು ಬ್ಯಾರೇಜ್ ತುಂಬಿಸಿ, ಅಲ್ಲಿಂದ ಕಣ್ವ ಹಾಗೂ ವೈಜಿ ಗುಡ್ಡ ಮತ್ತು ಮಂಚನಬೆಲೆ ಜಲಾಶಯ ತುಂಬಿಸಿ ಇಡೀ ಜಿಲ್ಲೆಗೆ ಎಲ್ಲ ಕಾಲದಲ್ಲೂ ನೀರು ನೀಡಲು ಶಾಶ್ವತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅಧಿಕಾರಿಗಳಿಗೆ ಎಚ್ಚರಿಕೆ: ನಮ್ಮ ತಂದೆ ಅವರಿಗೂ ನೀವೆ ಬೆನ್ನಲುಬಾಗಿದ್ದೀರಿ. ದೇವರ ದಯೆಯಿಂದ ನಾನು ಸಿಎಂ ಆಗಿದ್ದೇನೆ. ನೀವು ಧೈರ್ಯವಾಗಿರಿ. ಎಂದಿಗೂ ಚನ್ನಪಟ್ಟಣದವರಿಗೆ ಮೋಸ ಮಾಡುವುದಿಲ್ಲ ಎಂದರು. ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿದ್ದರೆ ಇಷ್ಟೊಂದು ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗುತ್ತಿರಲಿಲ್ಲ. ಹೀಗಾಗಿ 15 ದಿನದೊಳಗಾಗಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸೂಚಿಸಿದ್ದೇನೆ. ಇಲ್ಲವಾದಲ್ಲಿ ಕೆಲಸದಿಂದ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.

15 ದಿನದೊಳಗೆ ಪರಿಹಾರ: ನನ್ನ ಭೇಟಿ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಬೋರ್ ವೆಲ್​ಗಳಿಗೆ ಹಗಲಿನ ವೇಳೆ ವಿದ್ಯುತ್ ನೀಡಲಾಗುತ್ತಿದೆ ಎಂಬುದು ಗೊತ್ತಿದೆ. ಹೀಗಾಗಿ ತಾಲೂಕಿನಲ್ಲಿ ಏನೆಲ್ಲ ಕಾರ್ಯಕ್ರಮಗಳು ನಡೆಯಬೇಕಿದೆ ಎಂಬ ಬಗ್ಗೆ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರಿ ಶಾಲೆ, ಆಸ್ಪತ್ರೆ ಕಟ್ಟಡಗಳನ್ನು ಪರಿಶೀಲಿಸಿ, ಕಟ್ಟಡ ದುರಸ್ತಿ, ವೈದ್ಯರ ಕೊರತೆ, ಅಧಿಕಾರಿ, ಸಿಬ್ಬಂದಿ ಕೊರತೆ ಇದ್ದಲ್ಲಿ 15 ದಿನದೊಳಗೆ ಬಗೆಹರಿಯಲಿದೆ ಎಂದರು.

ಮಾವು ಸಂಸ್ಕರಣಾ ಘಟಕಕ್ಕೆ 15 ಎಕರೆ: ಚನ್ನಪಟ್ಟಣ ಕ್ಷೇತ್ರದಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ನನಗೆ ಗೊತ್ತಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬುಧವಾರ (ಜೂ.19) ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು. ಕಣ್ವದ ಬಳಿ 15 ಎಕರೆ ಪ್ರದೇಶವನ್ನು ಗುರ್ತಿಸಲಾಗಿದ್ದು, ಇಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪಿಸಲಾಗುವುದು, ಜಿಲ್ಲೆಯ ಕುಡಿಯುವ ನೀರು ಪೂರೈಕೆಗೆ 1 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಬೆಳೆ ವಿಧಾನ ಬದಲಿಸಿ..!: ನೀರಾವರಿ ಮತ್ತು ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ರೈತರು ಮೊದಲು ತಮ್ಮಬೆಳೆ ವಿಧಾನವನ್ನು ಬದಲಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು. ನೀರು ಹೆಚ್ಚಿದೆ ಎನ್ನುವ ಕಾರಣಕ್ಕೆ ಕಾಲುವೆ ಮೂಲಕ ನೀರು ಹಾಯಿಸುವ ಕೆಲಸ ಮಾಡಬೇಡಿ, ಇದರ ಬದಲು ಹನಿ ನೀರಾವರಿ ಅಳವಡಿಸಿಕೊಳ್ಳಿ. ಇದರಿಂದ ನೀರು ಮತ್ತು ವಿದ್ಯುತ್ ಎರಡೂ ಉಳಿತಾಯವಾಗಲಿದೆ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಕಸ ಸುರಿಯುವ ಮೊದಲು ವಿಷ ನೀಡಿ

ರಾಮನಗರ: ನಮ್ಮೂರಲ್ಲಿ ಕಸ ಹಾಕಬೇಡಿ, ಒಂದು ವೇಳೆ ಹಾಕಲೇಬೇಕೆಂದಿದ್ದರೆ ನಮಗೆ ವಿಷ ಕೊಟ್ಟು ಬಿಡಿ….. ಹೀಗೆ ಹೇಳಿದವರು ಕಣ್ವ ಗ್ರಾಮಸ್ಥರು.

ತಾಲೂಕಿನ ಕಣ್ವ ಗ್ರಾಮದಲ್ಲಿ ಜಿಲ್ಲಾ ನೀರಾವರಿ ಯೋಜನೆಗೆ ಚಾಲನೆ ನೀಡಿ, ನಂತರ ಜನತಾ ದರ್ಶನ ನಡೆಸಿದ ವೇಳೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಕಣ್ವ ಬಳಿ ಮತ್ತೆ ಕಸ ಹಾಕುವ ಸಂಬಂಧ ಅಧಿಕಾರಿಗಳು ಪದೇಪದೆ ಗ್ರಾಮಕ್ಕೆ ಬರುತ್ತಾರೆ, ಸಭೆ ನಡೆಸುತ್ತಾರೆ. ಆದರೆ, ಈ ಹಿಂದೆಯೇ ನಾವು ಕಸದಿಂದ ನೋವನ್ನು ಉಂಡಿದ್ದೇವೆ. ಈಗ ಮತ್ತೆ ಕಸ ಹಾಕುವ ಮೂಲಕ ನಮ್ಮನ್ನು ಸಮಸ್ಯೆಗೆ ತಳ್ಳಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ. ಒಂದು ವೇಳೆ ಅಧಿಕಾರಿಗಳ ಮಾತು ಕೇಳಿ ಕಸ ಸುರಿಯಲು ಅನುಮತಿ ನೀಡುವ ಮೊದಲು ನಮಗೆ ವಿಷ ಕೊಟ್ಟು ಬಿಡಿ ಎಂದು ಮುಖ್ಯಮಂತ್ರಿಗಳನ್ನು ಅಂಗಲಾಚಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಣ್ಚದಲ್ಲಿ ಕಸ ವಿಲೇವಾರಿ ಮಾಡಲು ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಕಸ ವಿಲೇವಾರಿ ಮಾಡುತ್ತಿದ್ದಾಗ ಸ್ಥಳೀಯ ಸಂಸ್ಥೆಗಳು ವೈಜ್ಞಾನಿಕವಾಗಿ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿದೆ. ಒಟ್ಟಿನಲ್ಲಿ ಎಲ್ಲಿಯಾದರೂ, ಕಸ ವಿಲೇವಾರಿ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಕಸ ವಿಲೇವಾರಿ ಸಂಬಂಧ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಆದರೆ, ಇದಕ್ಕೆ ಒಪ್ಪದ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಕಸ ಹಾಕಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

Leave a Reply

Your email address will not be published. Required fields are marked *