ಹಿಂಗಾರು ಬೆಳೆಹಾನಿ ವೀಕ್ಷಣೆ

ಬೆಳಗಾವಿ: ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ತಂಡವು ಬೆಳಗಾವಿ, ಬೈಲಹೊಂಗಲ ಹಾಗೂ ಸವದತ್ತಿ ತಾಲೂಕಿನ ಹಲವು ಗ್ರಾಮಗಳ ಕೃಷಿಭೂಮಿಗೆ ಭೇಟಿ ನೀಡಿ ಹಿಂಗಾರು ಹಂಗಾಮಿನಲ್ಲಾಗಿರುವ ಬೆಳೆಹಾನಿ ವೀಕ್ಷಿಸಿತು

ಮಂಗಳವಾರ ಬೆಳಗ್ಗೆ ಆರಂಭದಲ್ಲಿ ಬಾಳೇಕುಂದ್ರಿ ಬಿ.ಕೆ.ಗ್ರಾಮದಲ್ಲಿ ಬರ ಪರಿಹಾರ ಯೋಜನೆಯಡಿ ಹಸಿರು ಮೇವು ಉತ್ಪಾದನೆ ಮಾಡಿದ ರೈತ ಲಕ್ಷ್ಮಣ ಯಡ್ಡಿ ಅವರ ಕೃಷಿಭೂಮಿಗೆ ಭೇಟಿ ನೀಡಿತು. ಸಚಿವ ಆರ್.ವಿ.ದೇಶಪಾಂಡೆ ಈ ಯೋಜನೆಯಿಂದ ದೊರೆತ ಯಶಸ್ಸಿನ ಬಗ್ಗೆ ರೈತನಿಂದ ಮಾಹಿತಿ ಪಡೆದರು. ಅಗತ್ಯವಿರುವ ಮತ್ತು ಅಂತರ್ಜಲ ಪ್ರಮಾಣ ಹೆಚ್ಚಿರುವ ಕೃಷಿಭೂಮಿಗಳ ರೈತರಿಗೆ ಹಸಿರು ಮೇವಿನ ಕಿಟ್ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಕೊಳದೂರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಬಾಂದಾರ ಹಿಂದಿನ ಹೂಳೆತ್ತುವ ಕಾಮಗಾರಿ ಪರಿಶೀಲನೆ ನಡೆಸಿದರು. ಅಲ್ಲಿಂದ ಹೊರಟು ಕಲಕುಪ್ಪಿ ಗ್ರಾಮದಲ್ಲಿ ಜೋಳ ಮತ್ತು ಕಡಲೆ ಬೆಳೆಹಾನಿ ವೀಕ್ಷಿಸಿದರು. ಈ ವೇಳೆ ರೈತರು ತಮ್ಮ ಕಷ್ಟ ತೆರೆದಿಟ್ಟರು.
ವಿಮೆ ಹಣ ಪಾವತಿಸಲು ಒತ್ತಾಯ: ನಾವು ಕಳೆದ ವರ್ಷ ತುಂಬಿದ ಬೆಳೆಹಾನಿ ವಿಮೆ ಹಣವೇ ಬಂದಿಲ್ಲ. ಹಾಗಾಗಿ, ನಾವು ಈ ವರ್ಷ ವಿಮೆ ಕಂತು ಕಟ್ಟಿಲ್ಲ. ತಾಂತ್ರಿಕ ಸಮಸ್ಯೆಯಿಂದಾಗಿ ಜಿಲ್ಲಾಧಿಕಾರಿ ಖಾತೆಯಲ್ಲಿ 8 ಕೋಟಿ ರೂ. ಇದೆ. ಆದರೆ, ಅದನ್ನು ಹಂಚಿಕೆ ಮಾಡುತ್ತಿಲ್ಲ. ಜಿಲ್ಲಾಧಿಕಾರಿಗೆ ಈ ಬಗ್ಗೆ ಸೂಚನೆ ನೀಡುವಂತೆ ಸಚಿವರನ್ನು ಒತ್ತಾಯಿಸಿದರು.

ಈ ಬಗ್ಗೆ ಸಚಿವರು ಡಿಸಿ ಬೊಮ್ಮನಹಳ್ಳಿ ಅವರನ್ನು ವಿಚಾರಿಸಿದಾಗ, ತಾಂತ್ರಿಕ ಸಮಸ್ಯೆಯಿಂದಾಗಿ ವಿಮೆ ಹಣ ಪಾವತಿಯಾಗದಿರುವ ಬಗ್ಗೆ ಮಾಹಿತಿ ನೀಡಿದರು. ಆಗ ಪ್ರತಿಕ್ರಿಯಿಸಿದ ಸಚಿವ ಆರ್.ವಿ.ದೇಶಪಾಂಡೆ ಅವರು, ವಿಮೆ ಕಂಪೆನಿ ಅಚಾತುರ್ಯಕ್ಕೆ ರೈತರೇಕೆ ಪರದಾಡಬೇಕು. ಕೂಡಲೇ ವಿಮೆ ಹಣ ಪಾವತಿಗೆ ಕ್ರಮ ವಹಿಸಿ. ನಾನು ಈ ಬಗ್ಗೆ ಕೃಷಿ ಇಲಾಖೆ ಕಾರ್ಯದರ್ಶಿ ಜತೆ ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸುವೆ ಎಂದು ಆಶ್ವಾಸನೆ ನೀಡಿದರು.

ನಮ್ಮ ಕೃಷಿಭೂಮಿಯಿಂದ ಕೇವಲ 25 ಕಿ.ಮೀ. ದೂರದಲ್ಲಿ ಮಾರ್ಕಂಡೇಯ ನದಿ ಕಾಲುವೆ ಹಾಯ್ದು ಹೋಗಿದೆ. ಆ ಕಾಲುವೆಯನ್ನು ನಮ್ಮೂರಿನವರೆಗೆ ವಿಸ್ತರಿಸಿದರೆ ಅನುಕೂಲವಾಗುತ್ತದೆ. ಕೃಷಿ ಮಾಡಲು ನೀರಾವರಿ ಸೌಲಭ್ಯ ದೊರಕುತ್ತದೆ ಎಂದು ರೈತರು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಆಶ್ವಾಸನೆಯನ್ನು ಸಚಿವರು ಕೊಟ್ಟರು.
ನಂತರ ಗುಂಡ್ಲೂರ, ತಡಸಲೂರ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಕ್ಷೇತ್ರ ಬದು ನಿರ್ಮಾಣ ಕಾಮಗಾರಿ, ಬೆಳೆಹಾನಿ ಕೃಷಿಭೂಮಿ ಹಾಗೂ ಕುಡಿಯುವ ನೀರಿನ ಪೂರೈಕೆ ಯೋಜನೆ ಕಾಮಗಾರಿ ವೀಕ್ಷಿಸಿದರು.

ಸಂಸದ ಸುರೇಶ ಅಂಗಡಿ, ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡರ, ಬೆಳಗಾವಿ ಪ್ರಾದೇಶಿಕ ವಿಭಾಗದ ಆಯುಕ್ತ ಪಿ.ಎ.ಮೇಘಣ್ಣವರ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ಝೆಲಾನಿ ಮೊಕಾಶಿ, ಸಚಿವ ಸಂಪುಟ ಉಪಸಮಿತಿ ಸದಸ್ಯರು, ತಾಲೂಕುಮಟ್ಟದ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.

ಕಾಲಿಗೆರಗಿದ ರೈತರು!: ಕಲಕುಪ್ಪಿ ಗ್ರಾಮದಲ್ಲಿ ಇಬ್ಬರು ರೈತರು ಬೆಳೆಹಾನಿ ಪರಹಾರ ಕೊಡಿಸುವಂತೆ ಸಚಿವ ದೇಶಪಾಂಡೆ ಕಾಲಿಗೆರಗಿದರು. ನನ್ನ ಕಾಲಿಗೆ ನಮಸ್ಕರಿಸಬೇಡಿ. ದೇವರಿಗೆ ನಮಸ್ಕರಿಸಿ. ನಿಮ್ಮ ಬೇಡಿಕೆಯಂತೆ ಬೆಳೆಹಾನಿಗೆ ಪರಿಹಾರ ಕೊಡಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು. ರೈತರು ತಂದಿದ್ದ ಹೂವಿನ ಹಾರ ಹಾಕಿಸಿಕೊಳ್ಳದೆ ಸಚಿವರು ಬೆಳೆಹಾನಿ ವೀಕ್ಷಣೆಗೆ ಮುಂದಾದರು.