ಹಿಂಗಾರಿ ಇಳುವರಿ ಕಂಗಾಲ್ರೀ…

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಪ್ರಮುಖ ಬೆಳೆಗಳ ಫಸಲು ಬಾರದೇ ಅನ್ನದಾತ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಲವು ಕನಸು ಹೊತ್ತು, ಉತ್ತಿ ಬಿತ್ತಿದ ರೈತನ ಸಾಲದ ಹೊರೆ ಇಮ್ಮಡಿಗೊಂಡಿದೆ.

ಹಿಂಗಾರಿಗೆ ವಾಯುಭಾರ ಕುಸಿತ ಅಥವಾ ಯಾವುದಾದರೂ ಚಂಡಮಾರುತ ಬೀಸಿ ಮಳೆಯಾದರೆ ಎರಿ (ಕಪ್ಪು) ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಬೆಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಈ ಭಾಗದ ರೈತರು ಜೋಳ, ಕಡಲೆ, ಗೋಧಿ, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಒಂದೆರಡು ಬಾರಿ ಮಳೆಯಾಗಿದ್ದು ಬಿಟ್ಟರೆ, ಬಿತ್ತನೆ ಹಂತದಿಂದ ಹಿಡಿದು ಕೊನೆಯವರೆಗೂ ಮಳೆ ಕೊರತೆ ರೈತನನ್ನು ಕಾಡುತ್ತಲೇ ಬಂತು. ಹೀಗಾಗಿ, ತೆನೆ, ಹೂ, ಕಾಯಿ ಕಟ್ಟುವ ಸಮಯದಲ್ಲೇ ಬೆಳೆಗಳು ಬಾಡತೊಡಗಿದ್ದವು. ಇದೀಗ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಕೈಸೇರದ ಕಾರಣ, ಬೀಜ, ರಸಗೊಬ್ಬರ, ಕೀಟನಾಶಕ ಸೇರಿ ಬಿತ್ತನೆಗೆ ಮಾಡಿದ್ದ ಖರ್ಚು ಮಣ್ಣು ಪಾಲಾದಂತಾಗಿದೆ.

ನರೇಗಲ್ಲ ಹೋಬಳಿ ವ್ಯಾಪ್ತಿಯ ಎರಿ ಪ್ರದೇಶಗಳಾದ ಅಬ್ಬಿಗೇರಿ, ಮಾರನಬಸರಿ, ಜಕ್ಕಲಿ, ನಿಡಗುಂದಿ, ಡ.ಸ. ಹಡಗಲಿ, ಗುಜಮಾಗಡಿ, ನಾಗರಾಳ, ಯರೇಬೇಲೇರಿ, ಕುರಡಗಿ, ಹಾಲಕೆರೆ, ಹೊಸಳ್ಳಿ, ಜಕ್ಕಲಿ, ಕಳಕಾಪೂರ, ಬೂದಿಹಾಳ, ನರೇಗಲ್ಲನ ಮಜರೆ ಸೇರಿ ಹಲವು ಗ್ರಾಮಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕಡಲೆ ಬೆಳೆಯಲಾಗುತ್ತದೆ. ಆದರೆ, ಸಕಾಲಕ್ಕೆ ಮಳೆ ಆಗದೆ, ತೇವಾಂಶ ಕೊರತೆ ಜತೆಗೆ ಚಳಿಯ ಅಭಾವದಿಂದ ಕಡಲೆ ಇಳುವರಿ ಕುಸಿದಿದೆ. ಈ ಬಾರಿ ಎಕರೆಗೆ 1ರಿಂದ 1.5 ಕ್ವಿಂಟಾಲ್ ಫಸಲು ಕೂಡ ಬಾರದಿರುವುದು ದುರ್ದೈವದ ಸಂಗತಿಯಾಗಿದೆ.

ಖರ್ಚು ಹೆಚ್ಚು: ಕಡಲೆ ಬೆಳೆಗೆ ಕೀಟ ಬಾಧೆ ಹೆಚ್ಚು. ಬಿತ್ತನೆ ಮಾಡಿ, ಹೂವು ಹಾಗೂ ಕಾಯಿ ಹಿಡಿಯುವವರೆಗೂ ಕೀಟಗಳಿಂದ ಸಂರಕ್ಷಿಸಲು ನಾನಾ ಕೀಟನಾಶಕ ಸಿಂಪಡಿಸಬೇಕು. ಎಕರೆಗೆ ಕನಿಷ್ಠ 5ರಿಂದ 6 ಸಾವಿರ ರೂ. ಖರ್ಚು ಮಾಡಬೇಕಾಗುತ್ತದೆ. ರಾಶಿ ಮಾಡಲು 5ರಿಂದ 6 ಸಾವಿರ ರೂ. ಖರ್ಚಾಗುತ್ತದೆ. ಇಷ್ಟು ಕರ್ಚು ಮಾಡಿದರೂ ಎಕರೆಗೆ 1.5 ಕ್ವಿಂಟಾಲ್ ಇಳುವರಿ ಬಾರದಿರುವುದು ರೈತರನ್ನು ಆರ್ಥಿಕ ಸಂಕಷ್ಟಕ್ಕೀಡು ಮಾಡಿದಂತಾಗಿದೆ. ಕಳೆದ ಬಾರಿ ಅಬ್ಬಿಗೇರಿ ಭಾಗದ ಎರೆ ಭೂಮಿಯಲ್ಲಿ ಎಕರೆಗೆ 2- 3 ಕ್ವಿಂಟಾಲ್ ಹಾಗೂ ನರೇಗಲ್ಲ ಭಾಗದಲ್ಲಿ 3ರಿಂದ 3.5 ಕ್ವಿಂಟಾಲ್ ಇಳುವರಿ ದೊರೆತಿತ್ತು. ಈ ಬಾರಿ ಹವಾಮಾನ ವೈಪರೀತ್ಯದಿಂದ ರೈತನ ನಿರೀಕ್ಷೆಗಳೆಲ್ಲ ತಲೆ ಕೆಳಗಾಗಿವೆ.

ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕುಂಠಿತವಾಗುತ್ತಿದ್ದು, ವ್ಯವಸಾಯ ಮಾಡುವುದು ದುಸ್ತರವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ತ ಗಮನಹರಿಸಿ, ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು.

| ಬಸನಗೌಡ ಹಿರೇವಡಿಯರ, ವೀರಪ್ಪ ಜಿರ್ಲ್, ಕೋಡಿಕೊಪ್ಪದ ರೈತರು

ಸತತ ಬರಗಾಲದಿಂದ ಭೂಮಿಯಲ್ಲಿ ತೇವಾಂಶ ಕೊರತೆ ಹೆಚ್ಚಾಗಿದೆ. ಪದೇ ಪದೆ ಒಂದೇ ಬೆಳೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕುಗ್ಗುತ್ತಿದೆ. ಆದ್ದರಿಂದ ಕಡ್ಡಾಯವಾಗಿ ಪ್ರತಿ ವರ್ಷ ಬೆಳೆ ಬದಲಿಸಬೇಕು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುವ ಜತೆಗೆ ಉತ್ತಮ ಇಳುವರಿ ಹೊಂದಬಹುದು.

| ಶೌಕತ್​ಅಲಿ ತಹಸೀಲ್ದಾರ್, ಸಹಾಯಕ ಕೃಷಿ ಅಧಿಕಾರಿ