ಹಾಸ್ಟೆಲ್​ಗಳಿಗೆ ನ್ಯಾಯಾಧೀಶರ ಭೇಟಿ

ಚಿಂತಾಮಣಿ: ನಗರದ ಸಮಾಜ ಕಲ್ಯಾಣ ಇಲಾಖೆಯ ಎರಡು ವಿದ್ಯಾರ್ಥಿ ನಿಲಯಗಳಿಗೆ ಜೆಎಂಎಫ್​ಸಿ ನ್ಯಾಯಾಧೀಶರಾದ ಎಚ್.ಎ ಸಾತ್ವಿಕ್ ಮತ್ತು ರಾಜೇಂದ್ರಕುಮಾರ್ ಶನಿವಾರ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.

ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್​ನಲ್ಲಿ 180 ವಿದ್ಯಾರ್ಥಿಗಳಿದ್ದು, ಕುಡಿಯುವ ನೀರು, ಸ್ವಚ್ಛತೆ, ಸಮರ್ಪಕ ಆಹಾರ ವ್ಯವಸ್ಥೆ ಇಲ್ಲ. ಹುಳು ಇರುವ ತರಕಾರಿ ಅಕ್ಕಿ ಬಳಸಿ ಅಡುಗೆ ಮಾಡಲಾಗುತ್ತಿದೆ. ಶೌಚಗೃಹಗಳ ಸ್ವಚ್ಛತೆ ಇಲ್ಲ. ವಾರ್ಡನ್ ವಿಜಯರಾಣಿಗೆ ಸಮಸ್ಯೆ ಕುರಿತು ತಿಳಿಸಿದರೆ ದೌರ್ಜನ್ಯ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ನ್ಯಾಯಾಧೀಶರ ಬಳಿ ಹೇಳಿಕೊಂಡರು.

ಅಂಬೇಡ್ಕರ್ ಬಾಲಕರ ಪದವಿ ಹಾಸ್ಟೆಲ್​ಗೆ ನ್ಯಾಯಾಧೀಶರು ಭೇಟಿ ನೀಡಿದಾಗ ಹೊರಗಿನ ವಿದ್ಯಾರ್ಥಿಗಳಿದ್ದರು. ಇದನ್ನು ಗಮನಿಸಿದ ನ್ಯಾಯಾಧೀಶರು ಹಾಸ್ಟೆಲ್​ಗಳಲ್ಲಿ ಹೊರಗಿನವರು ಕಾಣಿಸಿಕೊಂಡರೆ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ನಿಲಯ ಪಾಲಕರಿಗೆ ಎಚ್ಚರಿಕೆ ನೀಡಿದರು.

ವಿದ್ಯಾರ್ಥಿ ನಿಲಯಗಳಲ್ಲಿ ಸಮರ್ಪಕ ರೀತಿಯಲ್ಲಿ ಸೌಲಭ್ಯ ಕಲ್ಪಿಸದಿದ್ದರೆ, ನಿಲಯ ಪಾಲಕರು ದೌರ್ಜನ್ಯ ಮಾಡಿದರೆ ವಿದ್ಯಾರ್ಥಿಗಳು ನೇರವಾಗಿ ನ್ಯಾಯಾಲಯಕ್ಕೆ ಬಂದು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಧೀಶರು ವಿದ್ಯಾರ್ಥಿಗಳಿಗೆ ತಿಳಿಸಿದರು. ವಕೀಲ ರಮೇಶ್ ಮತ್ತಿತರರಿದ್ದರು.