ಹಾಸಿಗೆ ಹಿಡಿದ ರೋಗಿ ಓಡಾಡಿದಾಗ….

| ಡಾ. ಮಂಜುನಾಥ್​ ಬಿ. ಎಚ್​.

ವೈದ್ಯರು ಖಂಡಿತವಾಗಿಯೂ ದೇವರಲ್ಲ. ಯಾರ ಜೀವಿತಾವಧಿಯನ್ನಾಗಲೀ, ಹಣೆಬರಹವನ್ನಾಗಲೀ ಬರೆಯಲು ಅವರಿಂದ ಸಾಧ್ಯವಿಲ್ಲ. ಆದರೆ ವೈದ್ಯರು ರೋಗಿಗಳ ಜೀವನ ಗುಣಮಟ್ಟವನ್ನು ಹೆಚ್ಚಿಸಬಹುದು. ಬದುಕಿರುವಷ್ಟೂ ದಿನ ಚೆನ್ನಾಗಿ ಜೀವಿಸುವಂತೆ ಮಾಡಬಹುದು. ವೈದ್ಯಕೀಯದ ಉದ್ದೇಶವೂ ಅದೇ ಅಲ್ಲವೇ…

 

ರೋಗಿಗಳ ಜೀವಿತಾವಧಿ ವೈದ್ಯರ ಕೈಯಲ್ಲಿಲ್ಲ; ಆದರೆ ಅವರ ಆರೋಗ್ಯ ಪಾಲನೆಯಂತೂ ಇದೆಯಲ್ಲ!

ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ನನ್ನನ್ನು ಭೇಟಿಯಾಗಲು ಆಸ್ಪತ್ರೆಗೆ ಬಂದಿದ್ದರು. ಬಂದವರೇ, ‘ಡಾಕ್ಟ್ರೇ, ಮಗಳ ಮದುವೆ. ಮೊದಲ ಆಮಂತ್ರಣ ಪತ್ರಿಕೆಯನ್ನು ನಿಮಗೇ ಕೊಡಬೇಕೆಂದು ಬಂದಿದ್ದೇನೆ. ಖಂಡಿತವಾಗಿಯೂ ಬರಲೇಬೇಕು’ ಎಂದರು. ಅವರ ಪರಿಚಯ ನನಗೆ ಸಿಕ್ಕಿತು. ಅವರನ್ನು ಭೇಟಿಯಾಗಿ ಸಾಕಷ್ಟು ವರ್ಷಗಳಾಗಿದ್ದರೂ, ಅವರ ದೈಹಿಕ ಆರೋಗ್ಯದಲ್ಲಿನ ಅಪರಿಮಿತ ಸುಧಾರಣೆ ನೆನಪುಗಳ ಹಾದಿಯಲ್ಲಿ ಹಿಂದಕ್ಕೊಯ್ದಿತು.

ಅವರನ್ನು ನಾನು ಭೇಟಿಯಾಗಿದ್ದು 8 ವರ್ಷಗಳ ಹಿಂದೆ. ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳ ನಿಭಾವಣೆಯ ಜವಾಬ್ದಾರಿ ಹೊಂದಿದ್ದ ಅವರು ಮಂಡಿ ಹಾಗೂ ಸೊಂಟದ ಸಂಧಿವಾತಕ್ಕೆ ತುತ್ತಾಗಿ ಓಡಾಡುವುದಿರಲಿ, ಮಲಗಿದಲ್ಲಿಂದ ಏಳಲಾಗದ ಸ್ಥಿತಿಗೆ ಬಂದಿದ್ದರು. ಅವರನ್ನು ನೋಡುತ್ತಿದ್ದಂತೆ ಅವರ ನಾಲ್ಕೂ ಸಂದುಗಳ ಬದಲಿ ಜೋಡಣೆ ಆಗಬೇಕಾಗಿದೆ ಎಂಬುದು ಅರಿವಾಯಿತು. ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು, ಶಸ್ತ್ರಚಿಕಿತ್ಸೆ ನಡೆಸಿ, ಒಂದಿಷ್ಟು ವ್ಯಾಯಾಮಗಳನ್ನೂ ತಿಳಿಸಿದೆ. ಮಲಗಿದಲ್ಲೇ ಇದ್ದು ಅವರು ಸಾಕಷ್ಟು ದೇಹತೂಕವನ್ನೂ ಗಳಿಸಿದ್ದರು. ಆರೋಗ್ಯ ಸುಧಾರಣೆಗಾಗಿ ಅವರು ಸಣ್ಣಗಾಗುವ ಅನಿವಾರ್ಯತೆಯಿತ್ತು. ತರುವಾಯದಲ್ಲಿ ಚೇತರಿಸಿಕೊಂಡ ಅವರು ಕೈನೆಟಿಕ್ ಹೋಂಡಾದಲ್ಲಿ ಬೇಕಾದಲ್ಲಿಗೆ ಹೋಗಿಬರತೊಡಗಿದರು, ಮಗಳ ಮದುವೆಯ ಸಂಭ್ರಮದಲ್ಲಿ ಓಡಾಡತೊಡಗಿದರು. ಒಬ್ಬ ವೈದ್ಯನಿಗೆ ತನ್ನ ರೋಗಿ ಆರೋಗ್ಯವಂತನಾಗುವುದು ಅತ್ಯಂತ ಸಂತಸದ ವಿಷಯ. ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಲಭಿಸಿದರಷ್ಟೇ ಅದು ಸಾಧ್ಯ! ಆದರೆ ಎಲ್ಲ ರೋಗಿಗಳಿಗೂ ಆ ಅವಕಾಶ ಇರುವುದಿಲ್ಲವಲ್ಲ….

***

ಆತನಿಗಿನ್ನೂ 37ರ ಹರೆಯ. ತಾಯಿ, ಪತ್ನಿ ಹಾಗೂ ಮಗು ಇರುವ ಕುಟುಂಬದ ಸಂಪೂರ್ಣ ಜವಾಬ್ದಾರಿ ಅವನದ್ದು. ಅಂತಹವನಿಗೆ ಇದ್ದಕ್ಕಿದ್ದಂತೆ ಭೇದಿ ಕಾಡಿತು. ಭೇದಿಪೀಡಿತರಿಗೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ತಕ್ಷಣ ಲವಣಯುಕ್ತ ದ್ರವ ಪದಾರ್ಥಗಳನ್ನು ದೇಹಕ್ಕೆ ಪೂರಣ ಮಾಡಿದರೆ, ಅಂಥವರ ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ, ಸುಧಾರಣೆಯಾಗುತ್ತದೆ. ಆದರೆ ಮನೆಯವರಿಗೆ ಮಾಹಿತಿಯ ಕೊರತೆಯೋ ಏನೋ, ಹಳ್ಳಿಯ ನಾಟಿವೈದ್ಯನ ಬಳಿ ಅವನನ್ನು ಕರೆದೊಯ್ದರು. ಆತ ರೋಗಿಯ ಎರಡೂ ಕಾಲುಗಳಿಗೆ ಸಗಣಿಯಂತಹ ದ್ರವವನ್ನು ಬಳಿದು, ಮನೆಯಲ್ಲಿ ಮಲಗಿಸಲು ಸೂಚಿಸಿದ. ಮುಂದಿನ ಮೂರು ದಿನಗಳ ಕಾಲ ಮನೆಯಲ್ಲೇ ಮಲಗಿದ್ದ ರೋಗಿ, ನಿರ್ಜಲೀಕರಣದ ಪರಿಣಾಮ ಪ್ರಜ್ಞೆ ತಪ್ಪಿದ. ಆಗ ಆತನನ್ನು ನಮ್ಮ ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ಸಂಪೂರ್ಣ ತಪಾಸಣೆಗೊಳಪಡಿಸಿದಾಗ ಆತನ ಮೂತ್ರಪಿಂಡ ಸೇರಿದಂತೆ ಬಹುತೇಕ ಅಂಗಾಂಗಗಳು ವಿಫಲವಾಗಿದ್ದವು. ನಾವು ಸಂಪೂರ್ಣ ಪ್ರಯತ್ನ ನಡೆಸಿದ ಹೊರತಾಗಿಯೂ ಆತನನ್ನು ಉಳಿಸಿಕೊಳ್ಳಲಾಗಲಿಲ್ಲ. ಆ ಪುಟ್ಟ ಕುಟುಂಬ ತನ್ನ ಏಕೈಕ ಆಧಾರವನ್ನು ಕಳೆದುಕೊಂಡಿತು.

ಆತನಿಗಾಗಿದ್ದು ಸಾಧಾರಣ ಭೇದಿ. ಅದು ಖಂಡಿತವಾಗಿಯೂ ಮಾರಣಾಂತಿಕವಾಗಿರಲಿಲ್ಲ. ಆದರೂ ಆತನ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದೇಹಕ್ಕೆ ಅಗತ್ಯವಿದ್ದ ಲವಣಾಂಶಯುಕ್ತ ದ್ರವ ಪದಾರ್ಥಗಳನ್ನು ಒದಗಿಸಿದ್ದಿದ್ದರೆ ಅವನು ವಾಸಿಯಾಗುತ್ತಿದ್ದ. ಅದರ ಬದಲು ಕಾಲಿಗೆ ಲೇಪ ಹಾಕಿದರೆ ವಾಸಿಯಾಗುತ್ತಾನೆ ಎಂಬ ಕಲ್ಪನೆ ಅದು ಹೇಗೆ ಬಂತೋ ಗೊತ್ತಿಲ್ಲ….

ಅದರ ಬೆನ್ನಲ್ಲೇ ಮತ್ತೊಂದು ಸುದ್ದಿ ಗಮನಿಸಿದೆ. ಮೈಸೂರು ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳಿಗೆ ಜ್ವರ ಬಂದಿತ್ತು. ಸಾಧಾರಣ ವೈರಲ್ ಜ್ವರವದು. ತಮ್ಮ ಹಳ್ಳಿಯಲ್ಲೇ ಇದ್ದ ಕ್ಲಿನಿಕ್ ಒಂದಕ್ಕೆ ಮನೆಯವರು ಆಕೆಯನ್ನು ಕರೆದೊಯ್ದರು. ಜ್ವರ ವಾಸಿಯಾಗುತ್ತದೆ ಎಂದು ಹೇಳಿದ ವೈದ್ಯ ಚುಚ್ಚುಮದ್ದೊಂದನ್ನು ಆಕೆಗೆ ನೀಡಿದ. ಜ್ವರ ವಾಸಿಯಾಗುವ ಬದಲು ಚುಚ್ಚುಮದ್ದಿನ ಪಾರ್ಶ್ವ ಪರಿಣಾಮವಾಗಿ ಆಕೆಗೆ ಸೋಂಕು ತಗುಲಿತು. ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಮೈಸೂರಿಗೆ ಕರೆದುತರಲಾಯಿತು. ಆದರೆ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಳು. ಚಿಕಿತ್ಸೆ ನೀಡಿದಾತ ನಕಲಿ ವೈದ್ಯನೆಂದು ನಂತರದ ದಿನಗಳಲ್ಲಿ ತಿಳಿಯಿತು. ಪೊಲೀಸರು ದಾಳಿ ನಡೆಸಿದಾಗ ಜಿಲ್ಲೆಯಾದ್ಯಂತ ಸಾಕಷ್ಟು ನಕಲಿ ವೈದ್ಯರು ಪತ್ತೆಯಾದರು!

ಇವು ನಮ್ಮ ಸುತ್ತಲೂ ಬಹುತೇಕ ಪ್ರತಿದಿನ ಎನ್ನುವಂತೆ ನಡೆಯುತ್ತಿರುವ ವಿದ್ಯಮಾನಗಳು. ತಮ್ಮದಲ್ಲದ ತಪ್ಪಿಗೆ, ಕೆಲವೊಮ್ಮೆ ಮಾಹಿತಿಯ ಕೊರತೆಯಿಂದಾಗಿ, ಅಜ್ಞಾನದಿಂದಾಗಿ ಎಷ್ಟೋ ಜನ ಪ್ರಾಣ ತೆರುತ್ತಾರೆ. ಆಧುನಿಕ ತಂತ್ರಜ್ಞಾನದ ಲಭ್ಯತೆ ಇರುವ ಇಂದಿನ ದಿನಗಳಲ್ಲೂ ಜನ ಉಳಿಸಬಹುದಾದ ಜೀವ ಕಳೆದುಕೊಳ್ಳುತ್ತಾರೆ.

ವೈದ್ಯರು ಖಂಡಿತವಾಗಿಯೂ ದೇವರಲ್ಲ. ಯಾರ ಜೀವಿತಾವಧಿಯನ್ನಾಗಲೀ, ಹಣೆಬರಹವನ್ನಾಗಲೀ ಬರೆಯಲು ಅವರಿಂದ ಸಾಧ್ಯವಿಲ್ಲ. ಆದರೆ ವೈದ್ಯರು ರೋಗಿಗಳ ಜೀವನ ಗುಣಮಟ್ಟವನ್ನು ಹೆಚ್ಚಿಸಬಹುದು. ಬದುಕಿರುವಷ್ಟೂ ದಿನ ಚೆನ್ನಾಗಿ ಜೀವಿಸುವಂತೆ ಮಾಡಬಹುದು. ವೈದ್ಯಕೀಯದ ಉದ್ದೇಶವೂ ಅದೇ ಅಲ್ಲವೇ… ಆದರೆ ಕಣ್ಣ ಮುಂದೆ ಇಂತಹ ಘಟನೆಗಳಾಗುವಾಗ ಹೇಗೆ ಪ್ರತಿಕ್ರಿಯಿಸಬೇಕು?

ನಮ್ಮಲ್ಲಿ ಹೇಗೆ ಹತ್ತು ಹಲವು ಧರ್ಮ, ಪಂಥ, ಜಾತಿ, ಮತಗಳಿವೆಯೋ ಹಾಗೆಯೇ ವಿವಿಧ ವೈದ್ಯಕೀಯ ಪದ್ಧತಿಗಳಿವೆ. ಅಲೋಪಥಿ, ಆಯುರ್ವೆದ, ಹೋಮಿಯೋಪಥಿ, ಯುನಾನಿ, ನಾಟಿವೈದ್ಯ ಹೀಗೇ ಹಲವಾರು ಪದ್ಧತಿಗಳನ್ನು ತಮ್ಮ ಆಯ್ಕೆ/ಅವಶ್ಯಕತೆಗಳಿಗನುಸಾರ ಜನ ಅನುಸರಿಸುತ್ತಾರೆ. ಇಲ್ಲಿ ಯಾವುದೇ ಪದ್ಧತಿಯನ್ನು ಶ್ರೇಷ್ಠವೆನ್ನುವ, ಇನ್ನೊಂದನ್ನು ನಿಕೃಷ್ಟ ಎನ್ನುವ ವಾದ ನನ್ನದಲ್ಲ. ಆದರೆ ತಿಳಿಯದೆ ನೀಡುವ ಔಷಧಿಗಳೇ ಪ್ರಾಣಕ್ಕೆ ಎರವಾಗುವ ಅದೆಷ್ಟೋ ಪ್ರಸಂಗಗಳು ನಮ್ಮ ಮುಂದಿವೆ. ‘ಅರ್ಹತೆ ಹೊಂದಿದ್ದೇನೆ’ ಎನ್ನುವ ನಕಲಿ ವೈದ್ಯರು ಪ್ರತಿಯೊಂದು ವೈದ್ಯ ಪದ್ಧತಿಯಲ್ಲೂ, ಇದ್ದಾರೆ!

ರಾಜ್ಯ ಸರ್ಕಾರ ಖಾಸಗಿ ವೈದ್ಯಕೀಯ ನಿಯಂತ್ರಣ ಕಾಯ್ದೆ ಜಾರಿಗೆ ತಂದಿದೆ. ಈ ಕುರಿತಾಗಿ ಹಲವಾರು ವಾದ-ವಿವಾದಗಳು, ಹೋರಾಟಗಳು ನಡೆದಿವೆ. ಆದರೆ ಸರ್ಕಾರ ಅಗತ್ಯವಾಗಿ ಮಾಡಬೇಕಾಗಿರುವುದು ಇಂತಹ ನಕಲಿಗಳ ತಡೆ. ಶಸ್ತ್ರಚಿಕಿತ್ಸೆ ನಡೆಸುವಾಗ ಕೆಲವೊಮ್ಮೆ ರೋಗಿಗಳ ಪ್ರಾಣವೇ ಹೋಗುವಂಥ ಸಂದರ್ಭಗಳು ತಜ್ಞ ವೈದ್ಯರುಗಳಿಗೇ ಎದುರಾಗುತ್ತವೆ. ಹೀಗಿರುವಾಗ ಒಂದಿಷ್ಟೂ ವೈದ್ಯಕೀಯ ಅಧ್ಯಯನ ಮಾಡಿರದ, ಔಷಧಗಳ ಬಗ್ಗೆ ತಿಳಿದಿರದ, ರೋಗಲಕ್ಷಣಗಳನ್ನು ಗುರುತಿಸಲಾಗದ ನಕಲಿಗಳು ಏನು ತಾನೇ ಮಾಡಬಲ್ಲರು?

ಪ್ರಾಣ ಅತ್ಯಂತ ಅಮೂಲ್ಯ. ಇಂದು ನಮ್ಮ ಜತೆ ಸಂತಸದಿಂದಿರುವ ವ್ಯಕ್ತಿ ಮರುಕ್ಷಣ ಇಲ್ಲವೆಂದಾದಾಗ ಆಗುವ ನೋವಿಗೆ ಪಾರವೇ ಇಲ್ಲ. ಆದರೂ ಹಣ ಮಾಡುವ ಏಕೈಕ ಉದ್ದೇಶದಿಂದ ವೈದ್ಯರೆಂಬ ಹಣೆಪಟ್ಟಿಯಡಿ ಪ್ರಾಣದೊಡನೆ ಚೆಲ್ಲಾಟವಾಡುವವರೂ ಇದ್ದಾರಲ್ಲ!

ವೈದ್ಯಕೀಯ ಕ್ಷೇತ್ರದಲ್ಲಿ ಇಂದು ತಾಂತ್ರಿಕತೆ ಸಾಕಷ್ಟು ಮುಂದುವರಿದಿದೆ. ಎಂತಹ ಸಮಸ್ಯೆಯಾದರೂ ಪರಿಹಾರ ಹುಡುಕುವ ಅವಕಾಶಗಳು ನಮ್ಮ ಮುಂದಿವೆ.

ಆತ 25ರ ಯುವಕ. ಸೇನೆಗೆ ಸೇರಬೇಕೆಂಬ ಮಹತ್ತರ ಹಂಬಲ ಹೊಂದಿದ್ದ ವಿದ್ಯಾವಂತ. ಎಲ್ಲ ಪರೀಕ್ಷೆಗಳಲ್ಲೂ ಉತ್ತೀರ್ಣನಾಗಿದ್ದ ಆತ, ಇನ್ನೈದು ತಿಂಗಳಲ್ಲಿ 10 ಕಿ.ಮೀ. ಓಟದಲ್ಲಿ ತನ್ನ ಸಾಮರ್ಥ್ಯ ತೋರಬೇಕಿತ್ತು. ಆ ಸಂದರ್ಭದಲ್ಲಿ ಆದ ಸಣ್ಣ ಅಪಘಾತದಿಂದ ಆತನ ಕಾಲಿನ ಲಿಗಮೆಂಟ್ ತುಂಡರಿಸಲ್ಪಟ್ಟಿತು. 5 ತಿಂಗಳೊಳಗೆ ಆತ ದೈಹಿಕವಾಗಿ ಮೊದಲಿದ್ದ ಸ್ಥಿತಿ ತಲುಪಲೇಬೇಕಿತ್ತು. ಆತನ ಶಸ್ತ್ರಚಿಕಿತ್ಸೆಯನ್ನು ಪೂರೈಸಿ, ಬಳಿಕ ರಿಹ್ಯಾಬಿಲಿಟೇಷನ್​ಗೆ ಒಳಪಡಿಸಿದೆವು. ನಾಲ್ಕೂವರೆ ತಿಂಗಳ ಬಳಿಕ ಆತ 10 ಕಿ.ಮೀ. ಓಡಿದ್ದಷ್ಟೇ ಅಲ್ಲ, ಓಡೋಡುತ್ತ ಬಂದು ಸಿಹಿ ಹಂಚಿದ! ಇದು ಭಾರತೀಯ ವೈದ್ಯಲೋಕ ಸಾಧಿಸಿರುವ ವೇಗ, ಪ್ರಗತಿಗೆ ಒಂದು ಉದಾಹರಣೆ. ಇಂತಹ ಅನುಭವಗಳು, ಕತೆಗಳು, ಸನ್ನಿವೇಶಗಳು ಪ್ರತಿದಿನವೂ ಎದುರಾಗುತ್ತವೆ. ಹೇಳುತ್ತ ಹೋದರೆ ವೈದ್ಯಕೀಯ ಲೋಕದಲ್ಲಿ ಇಂಥ ಸಾವಿರ ಕತೆಗಳಿವೆ. ಎಲ್ಲ ವೈದ್ಯರ ಆಸೆ, ಗುರಿ ತಮ್ಮ ರೋಗಿಗಳ ಆರೋಗ್ಯ ಸುಧಾರಣೆಯಷ್ಟೇ!

ವೈದ್ಯರ ತಪ್ಪಿನಿಂದ ರೋಗಿಯ ಪ್ರಾಣಕ್ಕೆ ತೊಂದರೆ ಸಂಭವಿಸುವ ಸಾಧ್ಯತೆಗಳು ಅತ್ಯಪರೂಪವಾದರೆ, ನಕಲಿಗಳ ಔಷಧಿಯಿಂದ ಅದೆಷ್ಟು ಪ್ರಾಣಗಳು ಹೋಗುತ್ತವೆಯೋ! ಕೆಪಿಎಂಇ ಕಾಯ್ದೆಯಡಿ ಬರಿಯ ಅಲೋಪಥಿ ಅಷ್ಟೇ ಅಲ್ಲ, ಎಲ್ಲ ಚಿಕಿತ್ಸಾ ಪದ್ಧತಿಗಳನ್ನೂ ತರಬೇಕಾದ

ಅನಿವಾರ್ಯತೆ ಇದೆ. ವೈದ್ಯರುಗಳ ಅಸಲಿಯತ್ತು, ಅರ್ಹತೆಯನ್ನು ಪರೀಕ್ಷಿಸಬೇಕಾದುದು, ತಿಳಿಯಬೇಕಾದುದು ಇಂದಿನ ಅವಶ್ಯಕತೆ. ಇದರಲ್ಲಿ ಸಾರ್ವಜನಿಕರ ಸಹಕಾರ, ಪಾಲ್ಗೊಳ್ಳುವಿಕೆಯೂ ಅಷ್ಟೇ ಮುಖ್ಯ. ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವ ಕ್ಟಛಿಡಛ್ಞಿಠಿಜಿಟ್ಞ ಜಿಠ ಚಿಛಿಠಿಠಿಛ್ಟಿ ಠಿಜಚ್ಞ c್ಟ ಎಂಬ ಮಾತಿನಂತೆ, ತಪ್ಪಾದ ಬಳಿಕ ತಲೆ ಚಚ್ಚಿಕೊಳ್ಳುವುದಕ್ಕಿಂತಲೂ ತಪ್ಪಾಗದಂತೆ ನೋಡಿಕೊಳ್ಳುವುದರಲ್ಲಿ ಸಮಾಜದ ಒಳಿತು ಅಡಗಿದೆ.

(ಲೇಖಕರು ತಜ್ಞವೈದ್ಯರು, ಸಾಮಾಜಿಕ ಕಾರ್ಯಕರ್ತರು)

Leave a Reply

Your email address will not be published. Required fields are marked *