ಹಾಸನದಿಂದ ಸ್ಪರ್ಧಿಸುತ್ತಾರಾ ದೇವೇಗೌಡ?


ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಮ್ಮ ತವರು ಕ್ಷೇತ್ರ ಹಾಸನದಿಂದಲೇ ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎನ್ನುವ ಚರ್ಚೆ ಸೋಮವಾರ ದಿಢೀರ್ ಮುನ್ನಲೆಗೆ ಬಂದಿದ್ದು, ಹಲವು ಹೊಸ ಲೆಕ್ಕಾಚಾರಗಳಿಗೆ ದಾರಿ ಮಾಡಿಕೊಟ್ಟಿದೆ.

ಈಗಾಗಲೇ ಗೌಡರು ಹಾಸನ ಕ್ಷೇತ್ರಕ್ಕೆ ತಮ್ಮ ಉತ್ತರಾಧಿಕಾರಿಯಾಗಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಹೆಸರು ಘೋಷಿಸಿದ್ದಾರೆ. ಅಲ್ಲದೆ ಬಿರುಸಿನ ಪ್ರಚಾರ ಕಾರ್ಯವೂ ಆರಂಭವಾಗಿದೆ.

ಹೀಗಿರುವಾಗ ದೇವೇಗೌಡರು ತವರಿನಿಂದಲೇ ಸ್ಪರ್ಧಿಸುತ್ತಾರೆ ಎನ್ನುವ ವಿಚಾರ ತಟ್ಟನೆ ಚರ್ಚೆಯ ಅಂಗಳಕ್ಕೆ ಬಂದಿರುವುದು ಅಚ್ಚರಿ ಮೂಡಿಸಿದೆ. ಗೌಡರ ಹೆಸರು ಮುನ್ನಲೆಗೆ ಬಂದಿರುವ ಸಂಬಂಧ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಯ ಕೆಲವು ಮಾದರಿ ಇಲ್ಲಿವೆ.

ಎ.ಮಂಜು ಭೀತಿ: ದೇವೇಗೌಡರು ಹಾಸನ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಒಪ್ಪಿಸುವ ಕಾರ್ಯದಲ್ಲಿ ಜಿಲ್ಲೆಯ ಹಲವು ಜೆಡಿಎಸ್ ಮುಖಂಡರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇದಕ್ಕೆ ಬಿಜೆಪಿ ಸೇರಿರುವ ಮಾಜಿ ಸಚಿವ ಎ.ಮಂಜು, ಪ್ರಜ್ವಲ್ಗೆ ಎದುರಾಳಿಯಾಗಿ ಕಣಕ್ಕಿಳಿಯುತ್ತಿರುವುದು ಕಾರಣವಾಗಿದೆ.

ಕಳೆದ ಚುನಾವಣೆಯಲ್ಲಿ ಗೌಡರ ಮುನ್ನಡೆಯನ್ನು 1 ಲಕ್ಷ ಮತಗಳಿಗೆ ಇಳಿಸಿದ್ದ ಎ.ಮಂಜು ಎದುರು ಪ್ರಜ್ವಲ್ ಗೆಲುವು ಕಷ್ಟವಾಗುತ್ತದೆ. ಆದ್ದರಿಂದ ಗೌಡರು ಸ್ಪರ್ಧಿಸಿ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಕೆಲವರು ನೀಡಿರುವ ಸಲಹೆಗೆ ಗೌಡರು ಒಪ್ಪಿದ್ದಾರೆ. ಹೀಗಾಗಿ ಗೌಡರೇ ಈ ಬಾರಿ ಕಣಕ್ಕಿಳಿಯುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ.

ಎ.ಮಂಜು ರಾಜಕೀಯ ಭವಿಷ್ಯ ಅತಂತ್ರಗೊಳಿಸುವ ವ್ಯೆಹ: ದೇವೇಗೌಡ ಕುಟುಂಬಕ್ಕೆ ಎ.ಮಂಜು ವಿರುದ್ಧ ರಾಜಕೀಯ ಹಗೆತನವಿದೆ. ಪ್ರಜ್ವಲ್ ಬದಲಿಗೆ ಗೌಡರು ಕಣಕ್ಕಿಳಿದರೆ ಕ್ಷೇತ್ರದ ಫಲಿತಾಂಶ ಸುಲಭವಾಗಿ ಜೆಡಿಎಸ್ ಪರವಾಗಲಿದೆ. ಗೌಡರ ಕುಟುಂಬದ ವಿರುದ್ಧ ತೊಡೆ ತಟ್ಟಿರುವ ಎ.ಮಂಜು, ಈ ಚುನಾವಣೆಯಲ್ಲಿ ಸೋಲುಂಡರೆ ಅವರ ರಾಜಕೀಯ ಭವಿಷ್ಯ ಡೋಲಾಯಮಾನವಾಗುತ್ತದೆ. ತಮ್ಮ ಎದುರಾಳಿಗಳನ್ನು ಮಟ್ಟಹಾಕಲು ಗೌಡರ ಕುಟುಂಬ ಯಾವ ನಿರ್ಧಾರವನ್ನಾದರೂ ಕೈಗೊಳ್ಳಬಹುದು ಎನ್ನುವುದು ಈ ಹಿಂದಿನ ಅನುಭವ ಸಾಕ್ಷಿ ಒದಗಿಸುತ್ತವೆ. ಎ.ಮಂಜು, ಬಿಜೆಪಿ ಸೇರುವುದು ಐದು ದಶಕದ ರಾಜಕೀಯ ನೋಡಿರುವ ದೇವೇಗೌಡರು ಊಹಿಸಲು ಸಾಧ್ಯವಾಗದ ನಿರ್ಧಾರವೇನಲ್ಲ. ಎ.ಮಂಜು ಅತ್ತ ಕಾಂಗ್ರೆಸ್ ತೊರೆಯುವಂತೆ ಮಾಡಿ ಅತಂತ್ರವಾಗಿಸುವ ಕಾರ್ಯತಂತ್ರ ಇದ್ದರೂ ಇರಬಹುದು.

ಕುಟುಂಬದ ಒತ್ತಡ: ದೇವೇಗೌಡರು ಈ ಬಾರಿ ಹಾಸನ ಕ್ಷೇತ್ರವನ್ನು ಮೊಮ್ಮಗನಿಗೆ ಧಾರೆ ಎರೆದು ತಾವು ಬೇರೆಡೆ ಸ್ಪರ್ಧಿಸುವ ಅಥವಾ ಚುನಾವಣೆಯಿಂದ ದೂರ ಉಳಿಯುವ ನಿರ್ಧಾರವನ್ನು ಕಾದಿಡಲು ಕುಟುಂಬದೊಳಗಿನ ಒತ್ತಡವೇ ಕಾರಣವಾಗಿದೆ.

ವಿಧಾನಸಭೆ ಚುನಾವಣೆಯಲ್ಲಿಯೇ ನಿಖಿಲ್ ಸ್ಪರ್ಧೆಗೆ ಅವಕಾಶ ನೀಡುವಂತೆ ಸಚಿವ ಎಚ್.ಡಿ.ರೇವಣ್ಣ ಅವರ ಕುಟುಂಬದಿಂದ ಗೌಡರ ಮೇಲೆ ಭಾರಿ ಒತ್ತಡವಿತ್ತು. ಅದನ್ನು ನಿಭಾಯಿಸುವ ಸಲುವಾಗಿ ಅವರು ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸುವ ಭರವಸೆ ನೀಡಿದ್ದರು. ಹೀಗಾಗಿ ಅವರು ರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸುವ ಅವಕಾಶಗಳಿರುವ ಸಮಯದಲ್ಲಿಯೂ ಕುಟುಂಬದ ಒತ್ತಡದ ಕಾರಣಕ್ಕಾಗಿ ಪ್ರಜ್ವಲ್ ಹೆಸರು ಘೋಷಣೆ ಮಾಡಿದರು.

ಮಂಡ್ಯದಿಂದ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕಣಕ್ಕಿಳಿಯುತ್ತಿರುವಾಗ, ಪ್ರಜ್ವಲ್ ಹಾಸನದಿಂದ ಸ್ಪರ್ಧಿಸಲು ಅವಕಾಶ ನೀಡದಿದ್ದರೆ ಕುಟುಂಬದೊಳಗೆ ಭಾರಿ ಕೋಲಾಹಲವೇರ್ಪಡುವ ಸಾಧ್ಯತೆಯಿದೆ. ಹೀಗಾಗಿ ಯಾರು ಏನೇ ಹೇಳಿದರೂ ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಖಚಿತ.

ಹೀಗೆ ನಡೆಯುತ್ತಿರುವ ತರಹೇವಾರಿ ಚರ್ಚೆಗಳಿಗೆ ಖುದ್ದು ಸಚಿವ ಎಚ್.ಡಿ.ರೇವಣ್ಣ ಇಂಧನ ಒದಗಿಸಿದ್ದಾರೆ. ಭಾನುವಾರ ಸಂಜೆ ಆಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ದೇವೇಗೌಡರನ್ನು ನಾನು, ಪ್ರಜ್ವಲ್ ಎಲ್ಲರೂ ಒತ್ತಾಯಿಸುತ್ತಿದ್ದೇವೆ. ಆದರೆ ದೇವೇಗೌಡರು ಎಲ್ಲಿ ನಿಲ್ಲುತ್ತಾರೆ ಎನ್ನುವುದನ್ನು ಕೂತು ಚರ್ಚಿಸಿ ಪಕ್ಷ ತೀರ್ಮಾನ ಮಾಡುತ್ತದೆ ಎಂದಿದ್ದರು.
ಪಕ್ಷ ತೀರ್ಮಾನಿಸುತ್ತದೆ ಹಾಗೂ ಹಾಸನದಿಂದ ಸ್ಪರ್ಧಿಸುವಂತೆ ಕೇಳುತ್ತಿದ್ದೇವೆ ಎನ್ನುವ ರೇವಣ್ಣ ಅವರ ಮಾತುಗಳು ಅನೇಕ ಅರ್ಥಗಳನ್ನು ಧ್ವನಿಸಿದ್ದು ಸೋಮವಾರವಿಡೀ ಪ್ರಜ್ವಲ್ ಮತ್ತೊಮ್ಮೆ ಅವಕಾಶ ವಂಚಿತರಾಗುತ್ತಾರೆ ಎನ್ನುವ ಮಾತುಗಳು ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡಲು ಕಾರಣವಾದವು.

ಪ್ರಚಾರ ಮುಂದುವರಿಸಿದ ಪ್ರಜ್ವಲ್: ಸಾರ್ವಜನಿಕರ ನಡುವೆ ಇಷ್ಟೆಲ್ಲ ಚರ್ಚೆಗಳು ನಡೆಯುತ್ತಿದ್ದರೂ ಪ್ರಜ್ವಲ್ ರೇವಣ್ಣ ಮಾತ್ರ ತಮ್ಮ ಪ್ರಚಾರ ಕಾರ್ಯ ಮುಂದುವರಿಸಿದರು. ಚನ್ನರಾಯಪಟ್ಟಣ ಹಾಗೂ ಹಾಸನಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ಭೇಟಿ ಮಾಡಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಬೆಳಗ್ಗೆ 10.30ಕ್ಕೆ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಮು ಅವರ ಮನೆಗೆ ತೆರಳಿ ಬೆಂಬಲ ಯಾಚಿಸಲು ಮುಂದಾಗಿದ್ದರಾದರೂ ಬಿ.ಶಿವರಾಮು ಅವರು ಬೇಲೂರಿಗೆ ತೆರಳಿದ್ದರಿಂದ ಭೇಟಿ ಸಾಧ್ಯವಾಗಲಿಲ್ಲ.

ನಿರ್ಧಾರವಾಗದ ಗೌಡರ ನಡೆ: ಎಚ್.ಡಿ.ದೇವೇಗೌಡರು ತಮ್ಮ ಸ್ಪರ್ಧೆಯ ಬಗ್ಗೆ ಈವರೆಗೆ ಯಾವುದೇ ಗುಟ್ಟು ಬಿಟ್ಟುಕೊಡದಿರುವುದು ಅವರು ಆಯ್ಕೆ ಮಾಡಿಕೊಳ್ಳಲಿರುವ ಕ್ಷೇತ್ರದ ಬಗ್ಗೆ ಊಹಾಪೋಹಕ್ಕೆ ರೆಕ್ಕೆ ಮೂಡಲು ಕಾರಣವಾಗಿದೆ.

ತುಮಕೂರನ್ನು ಉಳಿಸಿಕೊಳ್ಳಲು ಅಲ್ಲಿನ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಹರಸಾಹಸ, ಬೆಂಗಳೂರು ಉತ್ತರದಲ್ಲಿ ಕೇಂದ್ರ ಸಚಿವ ಸದಾನಂದಗೌಡರೊಂದಿಗಿನ ಪಕ್ಷದ ಎಲ್ಲೆ ಮೀರಿದ ಸೌಹಾರ್ದತೆಗಳು ಗೌಡರ ಸ್ಪರ್ಧೆಗೆ ಅಡ್ಡಿಯಾಗುತ್ತವೆ ಎನ್ನಲಾಗುತ್ತಿದೆ. ಇತ್ತ ಎ.ಮಂಜು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಹಾಸನ ಕ್ಷೇತ್ರದಲ್ಲಿ ಮೊಮ್ಮಗನ ಗೆಲುವು ಕಷ್ಟವಾಗುತ್ತದೆ. ಹೆಚ್ಚು ಕಡಿಮೆಯಾದರೆ ಕ್ಷೇತ್ರ ಕೈಬಿಟ್ಟು ಹೋಗುತ್ತದೆ ಎನ್ನುವ ಕಾರಣಕ್ಕಾಗಿ ಅಂತಿಮವಾಗಿ ಗೌಡರು ಹಾಸನದಿಂದಲೇ ಸ್ಪರ್ಧಿಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿವೆ. ಇಷ್ಟಾದರೂ ಗೌಡರು ಮಾತ್ರ ತಮ್ಮ ನಡೆಯನ್ನು ನಿಗೂಢವಾಗಿ ಉಳಿಸಿ ಕುತೂಹಲ ಹೆಚ್ಚುವಂತೆ ಮಾಡಿದ್ದಾರೆ.