ಹಾಸನದಲ್ಲಿ ಬಿಡುವು ನೀಡಿದ ಮಳೆ

ಹಾಸನ: ಒಂದು ವಾರದಿಂದ ನಿರಂತರವಾಗಿ ಸುರಿದ ಮಳೆ ಮಂಗಳವಾರ ಬಿಡುವು ನೀಡಿತು.

ಬೆಳಗ್ಗೆ 6 ರಿಂದ 9ರ ವರೆಗೆ ಸೋನೆ ಮಳೆ ಸುರಿಯಿತಾದರೂ ನಂತರ ಸಂಪೂರ್ಣ ಮರೆಯಾಯಿತು. ಹಲವು ದಿನಗಳಿಂದ ಸುರಿಯುತ್ತಿರುವ ತೀವ್ರ ಮಳೆಯಿಂದ ರೋಸಿ ಹೋಗಿದ್ದ ಜನರು ಮಂಗಳವಾರ ನಿರಾಳರಾದರು.

ದಿನಪೂರ್ತಿ ಮಳೆ ಸುರಿಯಲಿಲ್ಲವಾದರೂ ಮೋಡ ಕವಿದ ವಾತಾವರಣವಿದ್ದು, ಮಳೆಯ ಮುನ್ಸೂಚನೆ ನೀಡಿದಂತಿತ್ತು. ಆದರೆ ತಡರಾತ್ರಿವರೆಗೆ ಮಳೆ ಬರಲಿಲ್ಲ. ಭಾರಿ ಮಳೆಯಿಂದ ನಗರದಲ್ಲಿ ಕಡಿಮೆಯಾಗಿದ್ದ ವಾಹನ ಸಂಚಾರ ಮಂಗಳವಾರ ಎಂದಿನಂತೆ ಕಂಡುಬಂತು. ಆಟೋ, ದ್ವಿಚಕ್ರ ವಾಹನಗಳು ಸಂಚರಿಸಿದವು. ಆದರೆ ಮೋಡವಿದ್ದ ಕಾರಣ ಮಳೆ ಭೀತಿಯಿಂದ ಜನಸಂಚಾರ ಕಡಿಮೆಯಿತ್ತು.

ಹೆಚ್ಚಿದ ಒಳಹರಿವು: ಮಡಿಕೇರಿ, ಸಕಲೇಶಪುರ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಿದೆ. ಜಲಾಶಯಕ್ಕೆ ಮಂಗಳವಾರ 29379 ಕ್ಯೂಸೆಕ್ಸ್ ನೀರು ಹರಿದು ಬಂದಿದೆ. ಗರಿಷ್ಠ ಮಟ್ಟ 2922 ಅಡಿ ಇದ್ದು, ಈಗ 2880.75 ಅಡಿ ತಲುಪಿದೆ. ಜಿಲ್ಲೆಯ ಎಲ್ಲ ಕೆರೆ ಕಟ್ಟೆಗಳು ತುಂಬಿವೆ.

ಕುಸಿದ ಮನೆ ಗೋಡೆ:ನಿರಂತರ ಮಳೆಯಿಂದಾಗಿ ತಾಲೂಕಿನ ಸಮುದ್ರವಳ್ಳಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಅಪಾರ ನಷ್ಟವುಂಟಾಗಿದೆ.

ಸೋಮವಾರ ರಾತ್ರಿ ಸುರಿದ ಮಳೆಗೆ ಕಮಲಮ್ಮ ಎಂಬುವರ ಮನೆಯ ಗೋಡೆ ಕುಸಿದಿದೆ. ಒಂದು ಮನೆಯ ಗೋಡೆ ಬಿದ್ದ ಪರಿಣಾಮ ಪಕ್ಕದ ಮನೆ ಗೋಡೆಯೂ ಸ್ವಲ್ಪ ಬಿದ್ದಿದೆ. ದಾರಿಯಲ್ಲಿ ಹೋಗುತ್ತಿದ್ದ ಬಾಲಕ ಗೋಡೆ ಬೀಳುವುದನ್ನು ಕಂಡು ಒಳಗಿದ್ದವರನ್ನು ಜೋರಾಗಿ ಕೂಗಿದ್ದಾನೆ. ಆತನ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮನೆಯಲ್ಲಿದ್ದ ಅಡುಗೆ ಪಾತ್ರೆ, ಬಟ್ಟೆ ಸೇರಿದಂತೆ ಸಾವಿರಾರು ರೂ. ನಷ್ಟವುಂಟಾಗಿದೆ.

ಹೋಬಳಿವಾರು ಮಳೆ ವಿವರ: ಮಂಗಳವಾರ ಬೆಳಗ್ಗೆ 9ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ ಸುರಿದ ಹೋಬಳಿವಾರು ಮಳೆ ವಿವರ ಇಂತಿದೆ.

ಹಿರಿಸಾವೆ 1.2 ಮಿಮೀ, ನುಗ್ಗೇಹಳ್ಳಿ 8.8, ಶ್ರವಣಬೆಳಗೊಳ 5.1, ಹಾಸನ 9.8, ದುದ್ದ 4.2, ಕಟ್ಟಾಯ 33, ಸಾಲಗಾಮೆ 5, ಶಾಂತಿಗ್ರಾಮ 20, ಹೊಳೆನರಸೀಪುರ 2.2, ಹಳೆಕೋಟೆ 16, ಹಳ್ಳಿ ಮೈಸೂರು 2.4, ಸಕಲೇಶಪುರ 258, ಬೆಳಗೋಡು 180, ಅರೇಹಳ್ಳಿ 180, ಬಿಕ್ಕೋಡು 46, ಹಳೇಬೀಡು 3.2, ಮಾರನಹಳ್ಳಿ 173.2, ಚನ್ನರಾಯಪಟ್ಟಣ 6.4, ಬಾಗೂರು 6, ಆಲೂರು 70.4, ಕೆಂಚಮ್ಮನ ಹೊಸಕೋಟೆ 113, ಕುಂದೂರು 58, ಪಾಳ್ಯ 94.6, ಅರಕಲಗೂಡು 19.2, ದೊಡ್ಡಮಗ್ಗೆ 19.2, ಕೊಣನೂರು 40, ಮಲ್ಲಿಪಟ್ಟಣ 38, ರಾಮನಾಥಪುರ 30.4, ಅರಸೀಕೆರೆ 1.5, ಗಂಡಸಿ 3.2, ಜಾವಗಲ್ 2.8, ಕಣಕಟ್ಟೆ 1, ಬೇಲೂರು 5.8, ಹಾನುಬಾಳು 400.2, ಹೆತ್ತೂರು 165.2, ಯಸಳೂರು 110, ಹೊಸೂರು 80, ಶುಕ್ರವಾರಸಂತೆ 171.6 ಹಾಗೂ ಬಾಳುಪೇಟೆ 168 ಮಿಮೀ ಮಳೆಯಾಗಿದೆ.

Leave a Reply

Your email address will not be published. Required fields are marked *