ಹಾವೇರಿ-ಹಾನಗಲ್ಲ ರಸ್ತೆಗೂ ಟೋಲ್!

ಪರಶುರಾಮ ಕೆರಿ ಹಾವೇರಿ

ಹಾವೇರಿ-ಹಾನಗಲ್ಲ ನಡುವೆ ಸಂಚರಿಸುವ ವಾಹನಗಳ ಮಾಲೀಕರ ಜೇಬಿಗೆ ಫೆ. 23ರಿಂದ ಮತ್ತಷ್ಟು ಹೊರೆ ಬೀಳಲಿದೆ.

ಸರ್ಕಾರ 2008ರ ಆಗಸ್ಟ್​ನಲ್ಲಿ ಘೊಷಿಸಿದಂತೆ ಹಾವೇರಿ-ಹಾನಗಲ್ಲ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಣೆಗೆ ತಾಲೂಕಿನ ಆಲದಕಟ್ಟಿ ಗ್ರಾಮದ ಬಳಿ ಟೋಲ್ ಪ್ಲಾಜಾ ಸಿದ್ಧವಾಗಿದೆ.

ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಕೆಶಿಪ್)ಅಡಿಯಲ್ಲಿ ಎರಡು ವರ್ಷಗಳ ಹಿಂದೆ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ (ಕೆಆರ್​ಡಿಸಿಎಲ್)ನಿರ್ವಣವಾಗಿರುವ ಹಾವೇರಿ-ಅಕ್ಕಿಆಲೂರು-ಹಾನಗಲ್ಲ ರಾಜ್ಯ ಹೆದ್ದಾರಿ-2 ರಸ್ತೆಯಲ್ಲಿ ಸಂಚರಿಸುವ ವಾಹನಗಳು ಫೆ. 23ರಿಂದ ಟೋಲ್ ಪಾವತಿಸುವುದು ಕಡ್ಡಾಯ. ಈ ರಸ್ತೆಯು 31.78 ಕಿಲೋ ಮೀಟರ್ ಉದ್ದವಿದೆ. ಆಲದಕಟ್ಟಿಯಲ್ಲಿ ಈಗಾಗಲೇ ನಾಲ್ಕು ಲೇನ್​ಗಳ ಟೋಲ್ ಪ್ಲಾಜಾ ನಿರ್ಮಾಣ ಮಾಡಲಾಗಿದ್ದು, ಮೈಸೂರಿನ ಮಿತ್ರಾ ಇನ್ಪ್ರಾ ಸೆಲ್ಯುಶನ್ಸ್ ಸಂಸ್ಥೆ ಟೋಲ್ ಸಂಗ್ರಹಣೆ ಗುತ್ತಿಗೆ ಪಡೆದುಕೊಂಡಿದೆ.

ಫೆ. 23ರಿಂದ ಆರಂಭ…
ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ, ಟ್ರ್ಯಾಕ್ಟರ್​ಗಳನ್ನು ಹೊರತುಪಡಿಸಿ ಹಾನಗಲ್ಲ-ಹಾವೇರಿ ರಸ್ತೆ ನಡುವೆ ಪ್ರಯಾಣಿಸುವ ಎಲ್ಲ ರೀತಿಯ ವಾಹನಗಳು ಶುಲ್ಕ ಪಾವತಿಸಬೇಕಿದೆ. ಕಾರು, ಜೀಪು, ವ್ಯಾನ್ ಇತ್ಯಾದಿ ಲಘು ವಾಹನಗಳಿಗೆ ಏಕ ಪ್ರಯಾಣಕ್ಕೆ 20 ರೂ. ನಿಗದಿ ಮಾಡಲಾಗಿದೆ. 24 ಗಂಟೆಗಳಲ್ಲಿ ಪುನರಾಗಮನಕ್ಕೆ 30 ರೂ. ಶುಲ್ಕ ನಿಗದಿಗೊಳಿಸಲಾಗಿದೆ. ಲಘು ವಾಣಿಜ್ಯ ವಾಹನ, ಲಘು ಗೂಡ್ಸ್ ವಾಹನ, ಮಿನಿಬಸ್​ಗೆ 35 ಹಾಗೂ ದ್ವಿಮುಖ ಸಂಚಾರಕ್ಕೆ 50 ರೂ., ಬಸ್, ವಾಣಿಜ್ಯ ವಾಹನಗಳಿಗೆ 70 ರೂ. ಹಾಗೂ ದ್ವಿಮುಖ ಸಂಚಾರಕ್ಕೆ 105 ರೂ., ಭಾರಿ ನಿರ್ಮಾಣ ಯಂತ್ರೋಪಕರಣ, ಅರ್ಥ್ ಮೂವಿಂಗ್ ಯಂತ್ರೋಪಕರಣ ಅಥವಾ ಮಲ್ಟಿ ಆಕ್ಸೆಲ್ ವಾಹನಗಳಿಗೆ ಏಕ ಸಂಚಾರಕ್ಕೆ 110 ಹಾಗೂ ದ್ವಿಮುಖ ಸಂಚಾರಕ್ಕೆ 165 ರೂ., ಭಾರಿ ಗಾತ್ರದ ವಾಹನಗಳಿಗೆ 135 ಹಾಗೂ ದ್ವಿಮುಖ ಸಂಚಾರಕ್ಕೆ 200 ರೂ. ಶುಲ್ಕ ನಿಗದಿಪಡಿಸಲಾಗಿದೆ. ಫೆ. 23ರಿಂದ ಈ ಎಲ್ಲ ವಾಹನಗಳು ಶುಲ್ಕ ಪಾವತಿಸಿಯೇ ಹಾನಗಲ್ಲ -ಹಾವೇರಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸಬೇಕಿದೆ.

ಟೋಲ್ ಬಳಿ ಚತುಶ್ಪಥ ರಸ್ತೆ…
ಟೋಲ್ ಸಂಗ್ರಹ, ಪ್ಲಾಜ್ ನಿರ್ಮಾಣ ಮತ್ತು ನಿರ್ವಹಣೆ ಜವಾಬ್ದಾರಿ ಗುತ್ತಿಗೆ ಪಡೆದ ಏಜೆನ್ಸಿಯೇ ಮಾಡಿಕೊಳ್ಳಬೇಕಿದೆ. ಟೋಲ್​ನಲ್ಲಿ ಟ್ರಾಫಿಕ್ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ 4 ಲೇನ್ ನಿರ್ವಿುಸಲಾಗಿದೆ. ಹೋಗುವ ವಾಹನಗಳಿಗೆ 2 ಲೈನ್, ಬರುವ ವಾಹನಗಳಿಗೆ 2 ಲೈನ್ ಮಾಡಲಾಗಿದೆ. ಫೆ. 17ರಿಂದ ಶುಲ್ಕ ಸಂಗ್ರಹಿಸಲು ಕೆಆರ್​ಡಿಸಿಎಲ್ ಆದೇಶಿದ್ದರೂ ಗುತ್ತಿಗೆದಾರರು ಫೆ. 23ರಿಂದ ಆರಂಭಿಸಲು ನಿರ್ಧರಿಸಿದ್ದಾರೆ. ಕಳೆದ ಎರಡು ದಿನಗಳಿಂದ ಪ್ರಾಯೋಗಿಕವಾಗಿ ಎಲ್ಲ ವಾಹನಗಳಿಗೆ ಹಣ ಪಡೆಯದೇ ರಸೀದಿ ನೀಡುತ್ತಿದ್ದಾರೆ. ಟೋಲ್​ನಲ್ಲಿ ಶೌಚಗೃಹ, ಕುಡಿಯುವ ನೀರು, ಟೋಲ್ ಪ್ಲಾಜಾಗೆ ನೆರಳಿನ ವ್ಯವಸ್ಥೆಯನ್ನು ಇನ್ನೂ ಕಲ್ಪಿಸಿಲ್ಲ. ಇದುವರೆಗೆ ಜಿಲ್ಲೆಯಲ್ಲಿ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಬಂಕಾಪುರ ಹಾಗೂ ಚಳಗೇರಿ ಬಳಿ ಟೋಲ್ ಕಟ್ಟುತ್ತಿದ್ದ ಜಿಲ್ಲೆಯ ವಾಹನಗಳ ಮಾಲೀಕರು ಇದೀಗ ಹಾವೇರಿ-ಹಾನಗಲ್ಲ ರಾಜ್ಯ ಹೆದ್ದಾರಿಗೂ ಟೋಲ್ ಕಟ್ಟಬೇಕಿದೆ. ಇದಕ್ಕೆ ವಿರೋಧ ವ್ಯಕ್ತವಾಗುವುದೋ ಅಥವಾ ಸರ್ಕಾರದ ಆದೇಶಕ್ಕೆ ಎಲ್ಲರೂ ಮನ್ನಣೆ ನೀಡುವರೋ ಎಂಬುದನ್ನು ಕಾಯ್ದು ನೋಡಬೇಕಿದೆ.

ಸ್ಥಳೀಯ ವಾಹನಗಳಿಗೆ ರಿಯಾಯಿತಿ
ಟೋಲ್ ಪ್ಲಾಜಾದ ಸಮೀಪದ ದೇವಿಹೊಸೂರ, ಹೊಸಳ್ಳಿ, ಆಲದಕಟ್ಟಿ ಗ್ರಾಮಗಳ ಸ್ವಂತ ವಾಹನಗಳಿಗೆ(ವೈಟ್​ಬೋರ್ಡ್) ರಿಯಾಯಿತಿ ನೀಡಲಾಗಿದ್ದು, ತಿಂಗಳಿಗೆ 200 ರೂ.ಗಳ ಶುಲ್ಕ ನಿಗದಿಪಡಿಸಲಾಗಿದೆ. ಇನ್ನುಳಿದಂತೆ ವಾಣಿಜ್ಯ ವಾಹನಗಳಿಗೆ ಯಾವುದೇ ರಿಯಾಯಿತಿ ನೀಡಿಲ್ಲ. ಟಂಟಂ, ಟ್ರ್ಯಾಕ್ಟರ್​ಗಳಿಗೆ ಉಚಿತ ಪ್ರವೇಶದ ಅವಕಾಶ ಕಲ್ಪಿಸಲಾಗಿದೆ ಎಂದು ಮಿತ್ರಾ ಇನ್ಪ್ರಾ ಸೆಲ್ಯುಶನ್​ನ ವ್ಯವಸ್ಥಾಪಕ ನಿಶ್ಚಿತಕುಮಾರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಹಾವೇರಿ-ಹಾನಗಲ್ಲ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸಲು 3 ವರ್ಷಗಳ ಅವಧಿಗೆ ಗುತ್ತಿಗೆ ಪಡೆಯಲಾಗಿದೆ. ಸರ್ಕಾರದ ಆದೇಶದಂತೆ ವಾಹನಗಳಿಂದ ಶುಲ್ಕ ನಿಗದಿಗೊಳಿಸಲಾಗಿದೆ. ಟೋಲ್ ಬಳಿಯ ಕೆಲ ಗ್ರಾಮಗಳ ವಾಹನಗಳಿಗೆ ರಿಯಾಯಿತಿ ಸೌಲಭ್ಯ ಕಲ್ಪಿಸಲಾಗಿದೆ. ಟೋಲ್​ಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇನ್ನುಳಿದ ಮೂಲ ಸೌಲಭ್ಯಗಳಾದ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಕಲ್ಪಿಸುತ್ತೇವೆ.
| ನಿಶ್ಚಿತಕುಮಾರ್, ಯೋಜನಾ ವ್ಯವಸ್ಥಾಪಕರು, ಮಿತ್ರಾ ಇನ್ಪ್ರಾ ಸೆಲ್ಯುಶನ್