More

  ಹಾವೇರಿಗೆ ಪ್ರತ್ಯೇಕ ಕೆಸಿಸಿ ಬ್ಯಾಂಕ್ ನೀಡಲು ಕೋರಿಕೆ

  ಸವಣೂರ: ಹಾವೇರಿ ಜಿಲ್ಲೆಗೆ ಪ್ರತ್ಯೇಕ ಕೆಸಿಸಿ ಬ್ಯಾಂಕ್ ನೀಡಲು ಒತ್ತಾಯಿಸಿ ಕೇಂದ್ರ ಹಣಕಾಸು ಸಚಿವರಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ಗೃಹ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

  ತಾಲೂಕಿನ ಗುಂಡೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

  ರಾಜ್ಯದಲ್ಲಿ ಸಹಕಾರ ರಂಗವನ್ನು ಬೆಳೆಸುವ ಇಚ್ಚಾಶಕ್ತಿ ನಮ್ಮ ಸರ್ಕಾರಕ್ಕೆ ಇದೆ. ಆದ್ದರಿಂದ, ಕೋವಿಡ್ ಸಂದರ್ಭದಲ್ಲಿ ಸಹಕಾರ ಇಲಾಖೆಯ ಮೂಲಕ ಸುಮಾರು 432 ಕೋಟಿ ರೂ.ಗಳನ್ನು ನೀಡಲಾಗಿದೆ. ನರ್ಬಾರ್ಡ್​ನಿಂದ 500 ಕೋಟಿ ರೂ.ಗಳ ಸಾಲ ಪಡೆಯಲು ಸಹಕಾರ ರಂಗಕ್ಕೆ ಸರ್ಕಾರ ಸಹಕಾರ ನೀಡುತ್ತಿದೆ. ಸರ್ಕಾರ ವಿವಿಧ ಯೋಜನೆಗಳೊಂದಿಗೆ ಕೆಸಿಸಿ, ಡಿಸಿಸಿ ಬ್ಯಾಂಕ್ ಅಭಿವೃದ್ಧಿಪಡಿಸಲಾಗುವುದು ಎಂದರು.

  ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಬಾಪುಗೌಡ ಪಾಟೀಲ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಸಹಕಾರಿ ಸಚಿವರಾದ ಸಂದರ್ಭದಲ್ಲಿ ರೈತರ 400 ಕೋಟಿ ರೂ. ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಿದ್ದಾರೆ. ಸಾಲ ಮರು ಪಾವತಿಸಲು ರೈತರಿಗೆ ಮಾ. 25ರ ಗಡುವು ನೀಡಲಾಗಿದೆ. ಆದ್ದರಿಂದ ಇನ್ನಷ್ಟು ಕಾಲಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

  ಗುಂಡೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ವೀರಣ್ಣ ಗಾಣಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

  ಶಿರಹಟ್ಟಿ ಸಂಸ್ಥಾನಮಠದ ಜಗದ್ಗುರು ಶ್ರೀ ಫಕೀರ ಸಿದ್ಧ್ದಾಮ ಸ್ವಾಮೀಜಿ, ಬಾಲೇಹೊಸೂರ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಮಂತ್ರವಾಡಿ ಗ್ರಾಮದ ಶ್ರೀ ಸಿದ್ಧ್ದಾಮೇಶ್ವರ ಸ್ವಾಮೀಜಿ ಹಾಗೂ ಸವಣೂರಿನ ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

  ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ, ನಿವೃತ್ತ ಕಾರ್ಯದರ್ಶಿ ಚನ್ನಬಸಪ್ಪ ಅರಗೋಳ ಹಾಗೂ ಸಹಕಾರಿ ರಂಗದ ಧುರೀಣರನ್ನು ಸನ್ಮಾನಿಸಲಾಯಿತು.

  ಧಾರವಾಡ ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ವೈ. ಪಾಟೀಲ, ಸವಣೂರ ಪುರಸಭೆ ಅಧ್ಯಕ್ಷೆ ಶೈಲಾ ಮುದಿಗೌಡ್ರ, ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಪ್ರಮುಖರಾದ ಶಂಕರಗೌಡ ಪಾಟೀಲ, ಎಂ. ಜಾವೀದ, ಡಾ. ಎಚ್.ಐ. ತಿಮ್ಮಾಪೂರ, ತೆಗ್ಗಿಹಳ್ಳಿ ಗ್ರಾಪಂ ಅಧ್ಯಕ್ಷ ಗಿರೀಶಗೌಡ ಪಾಟೀಲ, ಮಂತ್ರೋಡಿ ಗ್ರಾಪಂ ಅಧ್ಯಕ್ಷೆ ಕಾಳವ್ವ ಬಡಿಗೇರ ಇದ್ದರು. ಶಿಕ್ಷಕರಾದ ವಿದ್ಯಾಧರ ಕುತನಿ, ನಾಗರಾಜ ಹೊಸಮನಿ ನಿರ್ವಹಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts