ಹಾವೇರಿಗೆ ಕೇಂದ್ರ ಸರ್ಕಾರದ ಪ್ರಶಸ್ತಿ ಗರಿ

ವಿಜಯವಾಣಿ ವಿಶೇಷ ಹಾವೇರಿ:ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು ಎಂಬ ನಾಣ್ಣುಡಿಯನ್ನು ಅಕ್ಷರಶಃ ‘ತಾಯಂದಿರ ಸಭೆ’ ಮೂಲಕ ಜಾರಿಗೆ ತಂದ ಎಂ.ಬಿ. ಅಂಬಿಗೇರ ಅವರು ಕೇಂದ್ರ ಸರ್ಕಾರದ ಪ್ರಶಸ್ತಿಗೆ ಭಾಜನರಾಗಿ ಜಿಲ್ಲೆಗೆ ಗರಿ ಮೂಡಿಸಿದ್ದಾರೆ.

ತಾಲೂಕಿನಲ್ಲಿ ಬಿಇಒ ಆಗಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಎಂ.ಬಿ. ಅಂಬಿಗೇರ ಅವರ ಸಾಧನೆ ಗುರುತಿಸಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ನಿಫಾ (ನ್ಯಾಶನಲ್ ಇನ್​ಸ್ಟಿಟ್ಯೂಟ್ ಆಫ್ ಎಜುಕೇಶನಲ್ ಪ್ಲಾನಿಂಗ್ ಅಡ್ಮಿನಿಸ್ಟ್ರೇಶನ್) ಸಂಸ್ಥೆಯು ನಾವೀನ್ಯತಾ ಚಟುವಟಿಕೆಗೆ ಕೊಡಮಾಡುವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಸದ್ಯ ಹಾವೇರಿಯ ಡಯಟ್​ನಲ್ಲಿ ಹಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಎಂ.ಬಿ. ಅಂಬಿಗೇರ ಅವರಿಗೆ ಇತ್ತೀಚೆಗೆ ದೆಹಲಿಯ ಪ್ರವಾಸಿ ಭಾರತೀಯ ಕೇಂದ್ರದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಲಾಖೆ ರಾಜ್ಯ ಸಚಿವ ಡಾ. ಸತ್ಯಪಾಲ್​ಸಿಂಗ್ ಮತ್ತಿತರರು ಈ ಪ್ರಶಸ್ತಿ ನೀಡಿ ಗೌರವಿಸಿದರು.

ತಾಯಂದಿರ ಸಭೆ ಮಹತ್ವ ತಿಳಿಸಿದ ಬಿಇಒ:ಹಾವೇರಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು, ಪರೀಕ್ಷೆ ಫಲಿತಾಂಶ ಸುಧಾರಿಸಲು ಶಿಕ್ಷಣ ಇಲಾಖೆಯು ಹಲವಾರು ಕ್ರಮ ಕೈಗೊಳ್ಳುತ್ತಿತ್ತು. ಅಧಿಕಾರಿಗಳು ನಾನಾ ಕಸರತ್ತು ಮಾಡುತ್ತಿದ್ದರು. 2013ರಲ್ಲಿ ಹಾವೇರಿ ಬಿಇಒ ಆಗಿ ಅಧಿಕಾರ ಸ್ವೀಕರಿಸಿದ ಎಂ.ಬಿ. ಅಂಬಿಗೇರ ಅವರು ಮಕ್ಕಳ ಸಂಖ್ಯೆ ಕ್ಷೀಣಕ್ಕೆ ಕಾರಣ ಹುಡುಕತೊಡಗಿದರು. ಕಡು ಬಡತನದಲ್ಲಿ ಹುಟ್ಟಿ ಬೆಳೆದ ಇವರಿಗೆ ತಾಯಿ ಅನಕ್ಷರಸ್ಥರಾಗಿದ್ದರೂ ತೋರಿದ ಮಾರ್ಗದರ್ಶನ ನೆನಪಿಗೆ ಬಂತು. ಕೂಡಲೇ ಸರ್ಕಾರಿ ಶಾಲೆಗಳಲ್ಲಿ ತಾಯಂದಿರ ಸಭೆ ನಡೆಸುವ ಯೋಜನೆ ರೂಪಿಸಿದರು.

ಸರ್ಕಾರಿ ಶಾಲೆಗಳಿಗೆ ಬರೀ ಪಾಲಕರು ಸಭೆ ನಡೆಸಿ ಹೋದರೆ ಅದರ ಪ್ರಯೋಜನ ಅಷ್ಟಾಗಿ ದೊರೆಯುವುದಿಲ್ಲ. ಮಕ್ಕಳ ಮೊದಲ ಗುರುವಾಗಿರುವ ತಾಯಂದಿರನ್ನು ಶಾಲೆಗೆ ಕರೆಯಿಸಿ ಮಕ್ಕಳ ವಿದ್ಯಾಭ್ಯಾಸ, ಚಟುವಟಿಕೆ ಕುರಿತು ಮಾಹಿತಿ ನೀಡಲು ಮುಂದಾದರು. ಆರಂಭದಲ್ಲಿ ನಾಗನೂರ, ನಾಗೇಂದ್ರನಮಟ್ಟಿ, ಬಸಾಪುರ, ಇಜಾರಿಲಕಮಾಪುರದಲ್ಲಿ ಸಭೆ ಆಯೋಜಿಸಿದರು. ಹೆಚ್ಚೆಚ್ಚು ಪ್ರಮಾಣದಲ್ಲಿ ತಾಯಂದಿರನ್ನು ಸಭೆಗೆ ಕರೆಸಲು ಶಿಕ್ಷಕರಿಗೆ ಸೂಚಿಸಿದರು. ಕೆಲವು ಶಿಕ್ಷಕರು ಅರಿಷಿಣ-ಕುಂಕುಮ, ಉಡಿ ತುಂಬಿ ಸಭೆಗೆ ಸಾಂಪ್ರದಾಯಕವಾಗಿ ತಾಯಂದಿರನ್ನು ಆಹ್ವಾನಿಸಿದರು. ಇದು ಫಲ ಕೊಟ್ಟಿತು. ತಾಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲೂ ತಾಯಂದಿರ ಸಭೆಗಳು ಸಾಲುಸಾಲಾಗಿ ಜರುಗಿದವು.

ಹಾಜರಾತಿ ಹೆಚ್ಚಳ:ಸಭೆಗಳಲ್ಲಿ ಸ್ವತಃ ಬಿಇಒ ಅಂಬಿಗೇರ ಅವರೇ ಭಾಗಿಯಾದರು. ಕಡುಬಡತನದಲ್ಲೂ ಶಿಕ್ಷಣ ಪಡೆದು ಸಾಧನೆಗೈದವರ ಮಾಹಿತಿಯನ್ನು ತಾಯಂದಿರಿಗೆ ನೀಡಿದರು. ‘ಯಾವ ಮಗುವು ದಡ್ಡ ಅಲ್ಲ. ಒಬ್ಬೊಬ್ಬರಲ್ಲಿಯೂ ಒಂದೊಂದು ಪ್ರತಿಭೆ ಅಡಗಿರುತ್ತದೆ’ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಜೊತೆಗೆ, ಶಾಲಾ ಶಿಕ್ಷಕರ ಮೂಲಕ ಮಕ್ಕಳ ಪ್ರೋಗ್ರೇಸ್ ಕಾರ್ಡ್ ವಿವರಗಳನ್ನು ತಾಯಂದಿರಿಗೆ ರವಾನಿಸುವ ವ್ಯವಸ್ಥೆ ಮಾಡಿದರು. ಇದರಿಂದಾಗಿ, ಸಣ್ಣಪುಟ್ಟ ಕಾರಣಗಳಿಗೆ ಶಾಲೆ ತಪ್ಪಿಸುತ್ತಿದ್ದ ಮಕ್ಕಳ ಸಂಖ್ಯೆ ಕ್ಷೀಣವಾಯಿತು. ಗ್ರಾಮೀಣ ಭಾಗದಲ್ಲಿ ಜಾತ್ರೆ, ಹಬ್ಬಹರಿದಿನ ನೆಪದಲ್ಲಿ ಶಾಲೆಗೆ ಗೈರಾಗುತ್ತಿದ್ದ ಮಕ್ಕಳನ್ನು ತಾಯಂದಿರೇ ಖುದ್ದು ಶಾಲೆಗೆ ಕಳಿಸಲು ಆರಂಭಿಸಿದರು. ಪ್ರತಿ ತಿಂಗಳು ಶಿಕ್ಷಕರನ್ನು ಭೇಟಿ ಮಾಡಿ ತಮ್ಮ ಮಕ್ಕಳ ಬಗೆಗೆ ವಿಚಾರಿಸಲು ಆರಂಭಿಸಿದರು. ರಾತ್ರಿ ಮಕ್ಕಳ ಅಭ್ಯಾಸದ ಸಮಯದಲ್ಲಿ ಅನೇಕ ತಾಯಂದಿರ ಟಿವಿಗಳನ್ನು ಆಫ್ ಮಾಡಲು ಶುರು ಮಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಸುಧಾರಣೆ ಕಂಡಿತು. ಅಲ್ಲದೆ, ತಾಯಂದಿರ ಸಭೆಯಲ್ಲಿ ಶೌಚಗೃಹದ ಜಾಗೃತಿಯನ್ನು ಮೂಡಿಸಲಾಯಿತು. ಇದರ ಪರಿಣಾಮವಾಗಿ, ಅನೇಕರು ಬಯಲು ಬಹಿರ್ದೆಸೆ ತ್ಯಜಿಸಿದರು.

ರಾಜ್ಯಾದ್ಯಂತ ವಿಸ್ತರಣೆ:ಹಾವೇರಿ ತಾಲೂಕಿನಲ್ಲಿ ಆರಂಭಗೊಂಡ ಈ ತಾಯಂದಿರ ಸಭೆಯ ಅಭಿಯಾನವು ಆಂದೋಲನವಾಗಿ ರೂಪಗೊಂಡಿದೆ. ಈಗ ಜಿಲ್ಲೆ ಮಾತ್ರವಲ್ಲದೆ, ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಈ ಅಭಿಯಾನ ಆರಂಭಗೊಂಡಿದೆ. ಅಂಬಿಗೇರ ಅವರ ಈ ಸಾಧನೆಯನ್ನು ದೇಶಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ರಾಷ್ಟ್ರೀಯ ನಾವೀನ್ಯತಾ ಪುರಸ್ಕಾರ ನೀಡುವ ಜೊತೆಗೆ ತಾಯಂದಿರ ಸಭೆಯ ಪರಿಕಲ್ಪನೆಯನ್ನು ತನ್ನ ವಾರ್ಷಿಕ ವರದಿಯ ಪುಸ್ತಕದಲ್ಲಿಯೂ ಪ್ರಕಟಪಡಿಸಿದೆ.

ಅಂಬಿಗೇರ ಅವರು ಬಿಇಒ ಆಗಿದ್ದ ಸಮಯದಲ್ಲಿ ತಾಯಂದಿರ ಸಭೆಯನ್ನು ಆರಂಭಿಸಿದರು. ಅದು ಸಾಕಷ್ಟು ಫಲವನ್ನು ನೀಡಿದೆ. ಈ ವಿಚಾರವು ದೆಹಲಿಯವರೆಗೂ ತಲುಪಿ ಮಾನವ ಸಂಪನ್ಮೂಲ ಇಲಾಖೆಯವರು ಅದರ ಮಾಹಿತಿಯನ್ನು ಪಡೆದಿದ್ದರು. ಇದೀಗ ಅವರಿಗೆ ಪುರಸ್ಕಾರ ನೀಡಿ ಗೌರವಿಸಿರುವುದು ಸಂತಸವಾಗಿದೆ. ತಾಯಂದಿರ ಸಭೆಯ ಪರಿಕಲ್ಪನೆಯು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಾಕಷ್ಟು ಪೂರಕವಾಗಿದೆ. ನಾವು ಜಿಲ್ಲೆಯಲ್ಲಿ ತಾಯಂದಿರ ಸಭೆಯನ್ನು ಕಡ್ಡಾಯಗೊಳಿಸಿದ್ದೇವೆ.

| ಅಂದಾನೆಪ್ಪ ವಡಗೇರಿ, ಡಿಡಿಪಿಐ, ಹಾವೇರಿ

ಒಂದು ಮಗುವನ್ನು ನಿಸ್ವಾರ್ಥದಿಂದ ಪ್ರೀತಿಸುವವಳು ತಾಯಿ. ಅಂತಹ ತಾಯಿ ಶಿಕ್ಷಿತಳಾದರೆ ಮಗುವನ್ನು ಶಿಕ್ಷಣದಿಂದ ವಂಚಿತವಾಗಲು ಬಿಡುವುದಿಲ್ಲ. ಅನಕ್ಷರಸ್ಥ ತಾಯಿಗೂ ಶಿಕ್ಷಣದ ಮಹತ್ವ ತಿಳಿದರೆ ಅವರ ಮಕ್ಕಳ ಭವಿಷ್ಯ ಕತ್ತಲಾಗಲು ಬಿಡುವುದಿಲ್ಲ. ಅದೇ ಉದ್ದೇಶದಿಂದ ತಾಯಂದಿರ ಸಭೆಯನ್ನು ಆರಂಭಿಸಲಾಯಿತು. ಈ ಯೋಜನೆಯ ಶ್ರೇಯಸ್ಸು ಎಲ್ಲ ತಾಯಂದಿರಿಗೆ, ಶಿಕ್ಷಕರಿಗೆ, ಉಸ್ತುವಾರಿ ಅಧಿಕಾರಿಗಳಿಗೆ ಸಲ್ಲಬೇಕು.

| ಎಂ.ಬಿ. ಅಂಬಿಗೇರ, ಡಯಟ್ ಹಿರಿಯ ಉಪನ್ಯಾಸಕರು ಹಾವೇರಿ