ಹಾವು ಕಚ್ಚಿ ಕಂದಮ್ಮ ಮೃತ

ಹೊಳೆಹೊನ್ನೂರು: ಭದ್ರಾವತಿ ತಾಲೂಕು ಮೈದೊಳಲಿನಲ್ಲಿ ಎರಡು ವರ್ಷದ ಪ್ರಿಯಾಂಕ ಹಾವು ಕಚ್ಚಿ ಮೃತಪಟ್ಟಿದ್ದಾಳೆ. ಮೈದೊಳಲು ಗ್ರಾಮದ ಲೋಹಿತ್ ಮತ್ತು ಯಶಸ್ವಿನಿ ದಂಪತಿ ಪುತ್ರಿ ಪ್ರಿಯಾಂಕ ಮಿಡಿ ನಾಗರ ಹಾವಿಗೆ ಬಲಿಯಾದ ದುರ್ದೈವಿ.

ಗುರುವಾರ ಬೆಳಗ್ಗೆ ಮನೆಯಲ್ಲಿ ಆಟ ಆಡುವಾಗ ಹಾವು ಮಗುವಿನ ಎಡಗಾಲಿನ ಪಾದಕ್ಕೆ ಕಚ್ಚಿದೆ. ಮಗುವಿನ ಕಾಲಿನಲ್ಲಿ ರಕ್ತ ಬರುವುದನ್ನು ಕಂಡ ಮನೆಯವರು ಯಾವುದೋ ವಸ್ತು ತಾಗಿ ಗಾಯ ಆಗಿರಬಹುದೆಂದು ಸ್ಥಳೀಯ ಆಸ್ಪತ್ರೆಯಲ್ಲಿ ಗಾಯಕ್ಕೆ ಮುಲಾಮು ಹಚ್ಚಿಸಿಕೊಂಡು ಬಂದಿದ್ದಾರೆ. ಕೆಲ ಸಮಯದ ನಂತರ ಮಗುವಿನ ಆರೋಗ್ಯದಲ್ಲಿ ತೀವ್ರ ಏರುಪೇರಾಗಿರುವುದನ್ನು ಕಂಡ ಪಾಲಕರು ಮಗುವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಮಗು ಮೃತಪಟ್ಟಿತು. ಮಗುವನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗುವಿನ ಮೃತ ದೇಹದ ಅಂತಿಮ ದರ್ಶನ ಮಾಡಿದ ಎಲ್ಲರ ಕಣ್ಣುಗಳು ತೇವಗೊಂಡವು.

ಕಳೆದ ಕೆಲ ದಿನಗಳ ಹಿಂದೆ ಮನೆಯ ಮುಂದೆ ಮಿಡಿ ನಾಗರ ಕಾಣಿಸಿಕೊಂಡಿತ್ತು. ಮಗುವಿಗೆ ಹಾವು ಕಚ್ಚಿರುವುದು ದೃಢಪಟ್ಟ ಮೇಲೆ ಅಕ್ಕಪಕ್ಕದವರು ಮನೆಯಂಗಳ ಸೇರಿ ಮನೆಯಲ್ಲಿನ ಚೀಲ ಸಂದಿಯಲ್ಲಿ ತಡಕಾಡಿದಾಗ ನಾಗರಹಾವು ಪತ್ತೆಯಾಗಿದೆ. ಕಳೆದ ಕೆಲ ದಿನಗಳ ಹಿಂದೆ ಮನೆಯ ಮುಂದೆ ಕಾಣಿಸಿಕೊಂಡ ಹಾವು ಇದೆ ಎಂದು ಸ್ಥಳೀಯರು ಗುರುತು ಮಾಡಿ ಕೊಂದು ಹಾಕಿದರು.

Leave a Reply

Your email address will not be published. Required fields are marked *