ಹಾಲುಣಿಸಲು ಪ್ರತ್ಯೇಕ ಕೊಠಡಿ

ಧಾರವಾಡ: ಬಸ್ ನಿಲ್ದಾಣಗಳಲ್ಲಿ ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆ ಅಪರೂಪ. ಆದರೆ, ನಗರದ ವಾಕರಸಾ ಸಂಸ್ಥೆಯ ಹೊಸ ಬಸ್ ನಿಲ್ದಾಣದಲ್ಲಿ ಮಗುವಿನ ಆರೈಕೆ ಕೊಠಡಿ ತೆರೆಯಲಾಗಿದೆ. ತಾಯಂದಿರು ಮಕ್ಕಳಿಗೆ ಹಾಲುಣಿಸಲೆಂದೇ ಪ್ರತ್ಯೇಕ ಕೊಠಡಿ ತೆರೆದಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ದೂರದ ಊರುಗಳಿಗೆ ತೆರಳುವ ತಾಯಂದಿರಿಗೆ ಮಕ್ಕಳ ಆರೈಕೆಯದ್ದೇ ದೊಡ್ಡ ಸವಾಲು. ಮಕ್ಕಳ ಬಟ್ಟೆ ಬದಲಾಯಿಸುವುದು, ಹಾಲುಣಿಸಲು ಮುಜುಗರ ಪಡುತ್ತಾರೆ. ಅಂಥವರಿಗಾಗಿ ಬಸ್ ನಿಲ್ದಾಣದಲ್ಲಿ ಹವಾನಿಯಂತ್ರಿತ ಪ್ರತ್ಯೇಕ ಕೊಠಡಿ ತೆರೆಯಲಾಗಿದೆ. ಇದು ಜಿಲ್ಲೆಯಲ್ಲೇ ಮೊದಲ ಪ್ರಯತ್ನ.

ಮಕ್ಕಳ ಆರೈಕೆ ಕೇಂದ್ರವನ್ನು ಜಿಪಂ ಸಿಇಒ ಆರ್. ಸ್ನೇಹಲ್ ಶನಿವಾರ ಉದ್ಘಾಟಿಸಿದರು. ಮಾನವೀಯ ನೆಲೆಗಟ್ಟಿನಲ್ಲಿ ಇಂಥ ವಿನೂತನ ವ್ಯವಸ್ಥೆ ಮಾಡಿರುವ ಸಾರಿಗೆ ಸಂಸ್ಥೆಯ ಕ್ರಮವನ್ನು ಶ್ಲಾಘಿಸಿದರು.

ಮುಖ್ಯ ಕಾರ್ವಿುಕ ಮತ್ತು ಕಲ್ಯಾಣ ಅಧಿಕಾರಿ ಎಸ್.ಕೆ. ಹಳ್ಳಿ, ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗಬಾನ್, ವಿಭಾಗೀಯ ಸಂಚಾರ ಅಧಿಕಾರಿ ಶಶಿಧರ ಚನ್ನಪ್ಪಗೌಡರ, ಡಿಎಂಇ ರಾಧಾಕೃಷ್ಣನ್, ಕಾರ್ವಿುಕ ಕಲ್ಯಾಣಾಧಿಕಾರಿ ಶಶಿಧರ ಕುಂಬಾರ, ಕಾನೂನು ಅಧಿಕಾರಿ ಶಾರದಾ ಸಿ., ಸಹಾಯಕ ಆಡಳಿತಾಧಿಕಾರಿ ಕೆ.ಎಂ. ಶಿವಪ್ರಸಾದ, ನಿಲ್ದಾಣ ಅಧಿಕಾರಿ ಎಸ್.ಆರ್. ಅದರಗುಂಚಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.