ಹಾಲಿನ ದರ ಕಡಿತಕ್ಕೆ ಆಕ್ರೋಶ

ಮಂಡ್ಯ: ಮನ್‌ಮುಲ್ ಆಡಳಿತ ಮಂಡಳಿ ರೈತರಿಗೆ ಕೊಡುವ ಹಾಲಿನ ದರವನ್ನು ಕಡಿತ ಮಾಡಿರುವುದನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಗುರುವಾರ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಜಾನುವಾರುಗಳೊಂದಿಗೆ ಬೀದಿಗಿಳಿದ ಕಾರ್ಯಕರ್ತರು ಹಾಗೂ ರೈತರು, ಮನ್‌ಮುಲ್ ಮತ್ತು ಜಿಲ್ಲಾಡಳಿತ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆಯಿಂದ ಕೆಲವೊತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ನೆರೆಯ ಜಿಲ್ಲೆಯ ಹಾಲು ಒಕ್ಕೂಟಗಳಲ್ಲಿ ಉತ್ಪಾದಕರಿಗೆ ಹೆಚ್ಚಿನ ಹಣ ಕೊಡುತ್ತಿದ್ದಾರೆ. ಆದರೆ, ಮಂಡ್ಯದಲ್ಲಿ ಅತಿ ಕಡಿಮೆ ಬೆಲೆ ನೀಡಲಾಗುತ್ತಿದೆ. ಹೆಚ್ಚಿನ ಹಾಲು ಸಂಗ್ರಹವಾಗುತ್ತಿರುವ ಕಾರಣ ಹಾಲು ಮತ್ತು ಹಾಲಿನ ಉತ್ಪನ್ನಗಳು ಹೆಚ್ಚು ಮಾರಾಟವಾಗುತ್ತಿಲ್ಲ. ಒಕ್ಕೂಟದಲ್ಲೇ ಉಳಿಯುತ್ತಿರುವ ಕಾರಣ ನಷ್ಟ ಅನುಭವಿಸುವಂತಾಗಿದೆ ಎಂದು ಇಲ್ಲದ ನೆಪ ಹೇಳಿ ದರ ಕಡಿತಗೊಳಿಸಿರುವುದು ಖಂಡನೀಯ ಎಂದರು.

ಇನ್ನು ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯುವಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರ ಸಂಪೂರ್ಣ ವಿಲವಾಗಿದೆ. ನವೆಂಬರ್ ತಿಂಗಳಲ್ಲೇ ಜಿಲ್ಲೆಯಲ್ಲಿ ಭತ್ತ ಕಟಾವಾಗಿದೆ. ರೈತರ ಭತ್ತ ದಲ್ಲಾಳಿಗಳ ಪಾಲಾಗುತ್ತಿದೆ. ಇದಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತವೇ ಕಾರಣ ಎಂದು ಕಿಡಿಕಾರಿದ ಪ್ರತಿಭಟನಾಕಾರರು, ಆರು ತಿಂಗಳಲ್ಲಿ ಕಬ್ಬಿನ ಬಾಕಿ ಹಣ ಪಾವತಿ ಮಾಡಬೇಕು. ಇಲ್ಲದಿದ್ದಲ್ಲಿ ಸಕ್ಕರೆ ಜಪ್ತಿ ಮಾಡಲಾಗುವುದು ಎಂದು ಡಿಸಿ ಎಚ್ಚರಿಕೆ ಕೊಟ್ಟಿದ್ದರು. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಜಿಲ್ಲಾಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸುಧೀರ್‌ಕುಮಾರ್, ಸಿ.ನಾಗರಾಜು, ಇಂಡುವಾಳು ಬಸವರಾಜು, ಜಯರಾಮು, ಎಸ್.ರಮೇಶ್ ಇತರರಿದ್ದರು.