ಸಿನಿಮಾ

ಹಾರಂಗಿ ಎಡದಂಡೆ ಕಾಲುವೆ ಪುನಶ್ಚೇತನ

ಕುಶಾಲನಗರ: ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಎಡದಂಡೆ ಕಾಲುವೆಯ ಪುನಶ್ಚೇತನ ಕಾಮಗಾರಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ಒಂದೆರಡು ದಿನಗಳಲ್ಲಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿ ಇರುವ 0 ಯಿಂದ 6.875 ಕಿ.ಮೀ ವರೆಗಿನ ಕಾಲುವೆ ಲೈನಿಂಗ್ ಕಾಮಗಾರಿ ಆರಂಭಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗದ ಅಭಿಯಂತರ ಪುಟ್ಟಸ್ವಾಮಿ ಮಾಹಿತಿ ನೀಡಿದ್ದಾರೆ.
ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಯ ಅಂದಾಜು 1.5 ಲಕ್ಷ ಹೆಕ್ಟೇರ್ ಜಮೀನು ಮಾಲೀಕರು ಇದೆ ನೀರನ್ನು ನಂಬಿಕೊಂಡು ಬೇಸಾಯ ಮಾಡುತ್ತಿದ್ದಾರೆ. ಈ 3 ಜಿಲ್ಲೆಯ ಒಟ್ಟು 153 ಕಿ.ಮೀ. ದೂರದವರೆಗೂ ಹಾರಂಗಿ ಎಡದಂಡೆ ಕಾಲುವೆ ನೀರು ಹರಿಯುತ್ತದೆ. ಕೊಡಗು ಜಿಲ್ಲೆಯಲ್ಲಿ 27 ಕಿಮೀ ಇದೆ. ಇಷ್ಟು ದೊಡ್ಡ ಕಾಲುವೆ ನಿರ್ವಹಣೆಯಿಲ್ಲದೆ ಗಿಡಗಂಟಿಗಳಿಂದ ತುಂಬಿಹೋಗಿತ್ತು. ಅದರಿಂದ ಕಾಲುವೆ ಸಂಪೂರ್ಣ ಹಾಳಾಗಿದ್ದು ಅದರ ನಿರ್ವಹಣೆ ಅತ್ಯಂತ ಅವಶ್ಯವಿರುವವವುದಾಗಿ ರಾಜ್ಯದ ನಂ.1 ಪತ್ರಿಕೆ ವಿಜಯವಾಣಿ 2022 ರಲ್ಲಿ ಸುದ್ದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಾಲುವೆ ಪರಿಶೀಲನೆ ನಡೆಸಿ 149 ಕೋಟಿ ರೂ. ಅಂದಾಜು ವೆಚ್ಚದ ಯೋಜನಾ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು.
ನಿರ್ಗಮಿತ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕೂಲಂಕುಷವಾಗಿ ಪರಿಶೀಲನೆ ನಡೆಸಿ ಹಾರಂಗಿ ಜಲಾಶಯದ ಎಡದಂಡೆಯ ರಿಮಾಡೆಲಿಂಗ್ ಕಾಮಗಾರಿಯ ಒಟ್ಟು 49.75 ಕೋಟಿ ರೂ. ವೆಚ್ಚದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಇದೀಗ ಟೆಂಡರ್ ಅನ್ನು ಆಂದ್ರಪ್ರದೇಶ ಮೂಲದ ಕಂಪನಿಗೆ ವಹಿಸಲಾಗಿದ್ದು, ಶೀಘ್ರವೇ ಕಾಮಗಾರಿಗೆ ಭೂಮಿಪೂಜೆ ನಡೆಯಲಿದೆ ಎಂದು ಪುಟ್ಟಸ್ವಾಮಿ ತಿಳಿಸಿದ್ದಾರೆ.
ಮೊದಲ 14 ಕಿಮೀ ಕಾಲುವೆ ಅತ್ಯಂತ ಶಿಥಿಲಾವಸ್ಥೆಯಲ್ಲಿದೆ. ಮುಂದಿನ ದಿನಗಳಲ್ಲಿ ಮಡಿಕೇರಿ ಕ್ಷೇತ್ರದ ನೂತನ ಶಾಸಕರಾದ ಡಾ.ಮಂಥರ್ ಗೌಡ ಅವರನ್ನು ಸದ್ಯದಲ್ಲೇ ಭೇಟಿಯಾಗಿ ಉಳಿದ 7 ಕಿಮೀ ಕಾಲುವೆ ಲೈನಿಂಗ್ ಕಾಮಗಾರಿಯ ಅವಶ್ಯಕತೆ ಬಗ್ಗೆ ವಿವರಿಸಿ ಹೊಸ ಸರ್ಕಾರದಿಂದ ಆದಷ್ಟು ಬೇಗ ಅನುದಾನ ತರುವ ಪ್ರಯತ್ನ ಮಾಡುತ್ತೇವೆ ಎಂದು ಪುಟ್ಟಸ್ವಾಮಿ ತಿಳಿಸಿದರು.

2022 ರಲ್ಲಿ ಯೋಜನಾ ವರದಿ ಸಿದ್ಧಪಡಿಸಿ ಸಂಪುಟ ಸಭೆಯಲ್ಲಿ ಅನುಮೋಡನೆಗಾಗಿ ಪ್ರಯತ್ನ ಪಟ್ಟು 6.875 ಕಿಮೀ ವರೆಗಿನ ಲೈನಿಂಗ್ ಕಾಮಗಾರಿಗೆ ಅನುಮೋದನೆ ದೊರೆತ್ತಿದೆ. ಇನ್ನು 7 ಕಿಮೀ ಶೀಘ್ರವಾಗಿ ಕಾಮಗಾರಿ ನಡೆಸಿದರೆ ಮಾತ್ರ ರೈತರಿಗೆ ಅನುಕೂಲವಾಗಲಿದೆ. ಶಾಸಕರಿಗೆ ಮನವರಿಕೆ ಮಾಡಿ ಉಳಿಕೆಯಾಗುವ ಕಾಲುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ರೈತರ ಹಿತಾಸಕ್ತಿಗಾಗಿ ನಮ್ಮ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ವಿಜಯವಾಣಿ ವರದಿಯಿಂದ ನಮ್ಮ ಈ ಭಾಗದ ರೈತರಿಗೆ ಸಹಾಯವಾಗಿದೆ. ಪತ್ರಿಕೆಗೆ ಅಭಿನಂದನೆಗಳು.
ಪುಟ್ಟಸ್ವಾಮಿ, ಎಇಇ, ಕಾವೇರಿ ನೀರಾವರಿ ನಿಗಮ.

Latest Posts

ಲೈಫ್‌ಸ್ಟೈಲ್