ಹಾನಗಲ್ಲಿನಲ್ಲಿ ಹಗಲುಗಳ್ಳರ ಬಂಧನ

ಹಾನಗಲ್ಲ: ಹಾಡಹಗಲೇ ಮನೆಗಳ್ಳತನ ಮಾಡುತ್ತಿದ್ದ ನಾಲ್ವರು ಕಳ್ಳರ ತಂಡವನ್ನು ಹಾನಗಲ್ಲ ಪೊಲೀಸರು ಮಂಗಳವಾರ ಬಂಧಿಸಿ, ಮೂರು ಪ್ರಕರಣಕ್ಕೆ ಸಂಬಂಧಿಸಿದಂತೆ 12.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಪಟ್ಟಣದ ನವನಗರ ಬಡಾವಣೆಯ ಮಂಜು ಪರಮೇಶ್ವರಪ್ಪ ಗೌಳಿ(28) ಸೇರಿ ಮೂವರನ್ನು ಬಂಧಿಸಿದ್ದಾರೆ. ಅವರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ಇನ್ನೊಬ್ಬ ಆರೋಪಿ ಇಮ್ರಾನ್ ಮಕ್ಬುಲ್​ಸಾಬ ಬ್ಯಾಡಗಿ (25) ತಲೆಮರೆಸಿಕೊಂಡಿದ್ದಾನೆ. ಮಂಜು ಗೌಳಿ ತನ್ನ ಬಡಾವಣೆಯ ಅಪ್ರಾಪ್ತ ವಯಸ್ಸಿನ ಬಾಲಕರಿಗೆ ಮತ್ತು ಬರಿಸುವ ವಸ್ತುಗಳ (ಗಾಂಜಾ) ಚಟ ಹಿಡಿಸಿ, ಅವರನ್ನು ಕಳ್ಳತನಕ್ಕೆ ಬಳಸಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಇಬ್ಬರು ಬಾಲಕರು ಹಾಗೂ ಇಮ್ರಾನ್ ಸೇರಿ ಪಟ್ಟಣದ ರೇಣುಕಾ ಬಡಾವಣೆಯ ಎನ್.ಬಿ. ಬಣಕಾರ, ವಿರಾಟನಗರದ ಕೃಷ್ಣಾರೆಡ್ಡಿ ಹೇಮರೆಡ್ಡಿ ಲಿಂಗಾರೆಡ್ಡಿ, ಗಂಗಾನಗರದ ರಾಮಚಂದ್ರ ಹೆಗಡೆ ಎಂಬುವರ ಮನೆಗಳನ್ನು ಹಾಡಹಗಲೇ ಕಳ್ಳತನ ಮಾಡಿದ್ದರು. ಡಿಸೆಂಬರ್, ಜನವರಿ ಹಾಗೂ ಫೆಬ್ರವರಿಯಲ್ಲಿ ನಡೆದಿದ್ದ ಮೂರು ಪ್ರಕರಣಗಳನ್ನು ಇದೀಗ ಪೊಲೀಸರು ಭೇದಿಸಿದ್ದಾರೆ. ತನಿಖೆಗಾಗಿ ಸಿಪಿಐ ನಂಜಪ್ಪ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಎಸ್​ಪಿ ಕೆ. ಪರಶುರಾಮ ಹಾಗೂ ಹೆಚ್ಚುವರಿ ಎಸ್​ಪಿ ಮಲ್ಲಿಕಾರ್ಜುನ ಬಾಲದಿಂಡಿ, ಡಿವೈಎಸ್​ಪಿ ವಿಜಯಕುಮಾರ ತಳವಾರ ಮತ್ತು ಸಿಪಿಐ ಎನ್.ನಂಜಪ್ಪ, ಪಿಎಸ್​ಐ ಆರ್.ವೀರೇಶ ಮಾರ್ಗದರ್ಶನದಲ್ಲಿ ಎಎಸ್​ಐ ಕನವಳ್ಳಿ, ಸಿಬ್ಬಂದಿ ಆನಂದ ದೊಡ್ಡಕುರುಬರ, ಪಿ.ಬಿ. ಹೊಸಮನಿ, ಈರಣ್ಣ ಲಂಗೋಟಿ, ಆನಂದ ಪಾಟೀಲ, ನಾಗೇಂದ್ರ ಹಾನಗಲ್ಲ, ಮಾರುತಿ ಹಾಲಭಾವಿ, ಎಸ್.ಎಸ್.ಕೂಸನೂರ, ಚನ್ನವೀರಸ್ವಾಮಿ ಹಿರೇಮಠ, ಕುಮಾರ್ ಹಿರೇಮಠ, ಪ್ರಶಾಂತ ಕಛವಿ, ರಾಘವೇಂದ್ರ ದೇವಗಿರಿ, ಮಹೇಶ ಹೊರಕೇರಿ, ರಮೇಶ ಲಮಾಣಿ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *