ಹಾದಿ ತಪ್ಪಿದೆಯೇ ಜಿಲ್ಲೆಯ ಆಡಳಿತ…!

ಹಾವೇರಿ: ಜಿಲ್ಲಾಧಿಕಾರಿ ಗುರುವಾರ ಕರೆದಿದ್ದ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಗೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾದ ಪರಿಣಾಮ ಸಭೆಯನ್ನು ಮುಂದೂಡಿ, ಗೈರಾದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುವಂತೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ದೂರದ ಬೆಂಗಳೂರಿನವರಾಗಿದ್ದರಿಂದ ಆಡಳಿತ ವ್ಯವಸ್ಥೆಯ ಮೇಲೆ ಹಿಡಿತವೇ ಇಲ್ಲವಾಗಿದೆ ಎಂಬ ಆರೋಪ, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರಿಂದ ಕೇಳಿಬರುತ್ತಿತ್ತು. ಆದರೆ, ಇದೀಗ ಜಿಲ್ಲಾಧಿಕಾರಿಗೂ ಜಿಲ್ಲೆಯ ಆಡಳಿತದ ಮೇಲೆ ಹಿಡಿತವಿಲ್ಲ ಎಂಬುದು ಸಾಬೀತಾಗಿದೆ.

ಜಿಲ್ಲೆಯಲ್ಲಿನ ಹಿರಿಯ ಅಧಿಕಾರಿಗಳಿಗೆ ಮೂಗುದಾರ ಹಾಕಿ ಕೆಲಸ ಮಾಡಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರೇ ಜಿಲ್ಲೆಗೆ ಅಮವಾಸ್ಯೆ, ಹುಣ್ಣಿಮೆಗೊಮ್ಮೆ ಭೇಟಿ ನೀಡುತ್ತಾರೆ. ಇಂತಹ ಸಮಯದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳ ಮೇಲೆಯೇ ಆಡಳಿತ ನಿರ್ವಹಣೆ ಹೊಣೆ ಬಿದ್ದಿತ್ತು. ಆದರೆ, ಜಿಲ್ಲಾಧಿಕಾರಿ ಕರೆದ ಸಭೆಗೇ ಅನೇಕರು ಗೈರಾದರೆ, ಇನ್ನು ಕೆಲವರು ತಮ್ಮ ಪ್ರತಿನಿಧಿಗಳನ್ನು ಕಳಿಸಿದ್ದು, ಇಲ್ಲಿ ಯಾರ ಮಾತಿಗೂ ಮನ್ನಣೆ ಸಿಗುವುದಿಲ್ಲ ಎಂಬ ಆರೋಪಕ್ಕೆ ಸಾಕ್ಷಿಯಾಯಿತು.

ಇದುವರೆಗೆ ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಟಾಂಗ್ ಕೊಡುತ್ತಿದ್ದ ಜಿಲ್ಲಾಮಟ್ಟದ ಅಧಿಕಾರಿಗಳು ಇದೀಗ ಜಿಲ್ಲಾಧಿಕಾರಿ ಸಭೆಗೂ ಗೈರಾಗಿ ನಮ್ಮನ್ಯಾರೂ ಕೇಳೋರಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿನ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳಿಗೆ ಯಾವ ರೀತಿ ಸ್ಪಂದಿಸುತ್ತಿದ್ದಾರೆ ಎಂಬುದು ಪ್ರಶ್ನಾರ್ಹವಾಗಿದೆ.

ಶೋಕಾಸ್ ನೋಟಿಸ್: ಗುರುವಾರ ಬೆಳಗ್ಗೆ 11 ಗಂಟೆಗೆ ಸಭೆ ಆರಂಭಗೊಂಡಿತು. ಕೆಲ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರು. ಕೆಲವರು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಗೈರಾದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ, ಕ್ರಮವಹಿಸುವಂತೆ ಸಮಿತಿಯ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಗೋಪಾಲ ಲಮಾಣಿಯವರಿಗೆ ಸೂಚಿಸಿದರು.

ಸಿಇಒ ಸಹ ಗೈರು: ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸಮಿತಿಗೆ ಜಿಪಂ ಸಿಇಒ ಕೆ. ಲೀಲಾವತಿಯವರು ಉಪಾಧ್ಯಕ್ಷರಾಗಿದ್ದಾರೆ. ಇವರು ಸಹ ಸಭೆಗೆ ಗೈರಾಗಿದ್ದಾರೆ. ಇವರಿಗೂ ಜಿಲ್ಲಾಧಿಕಾರಿ ನೋಟಿಸ್ ಜಾರಿಗೊಳಿಸುತ್ತಾರೆಯೇ ಎಂಬ ಪ್ರಶ್ನೆ ಎದ್ದಿದೆ.

ಜಿಲ್ಲಾಧಿಕಾರಿಗಳು ಸಭೆಯನ್ನು ಜು. 17ಕ್ಕೆ ಮುಂದೂಡಲು ತಿಳಿಸಿದ್ದಾರೆ. ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸಭೆಗೆ 18 ಇಲಾಖೆಗಳ ಅಧಿಕಾರಿಗಳು ಹಾಜರಾಗಬೇಕಿತ್ತು. ಜಿಲ್ಲಾಧಿಕಾರಿಗಳು ಅಧ್ಯಕ್ಷರಾದರೆ, ಸಿಇಒ ಉಪಾಧ್ಯಕ್ಷರಾಗಿದ್ದಾರೆ. ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚನೆ ನೀಡಿರುವ ಕುರಿತು ಇನ್ನೊಮ್ಮೆ ಜಿಲ್ಲಾಧಿಕಾರಿಯೊಂದಿಗೆ ರ್ಚಚಿಸುತ್ತೇನೆ. ಮುಂದಿನ ಸಭೆಗೆ ಎಲ್ಲರೂ ಕಡ್ಡಾಯವಾಗಿ ಹಾಜರಾಗಲು ತಿಳಿಸುತ್ತೇನೆ.
| ಗೋಪಾಲ ಲಮಾಣಿ, ನೊಡಲ್ ಅಧಿಕಾರಿ

Leave a Reply

Your email address will not be published. Required fields are marked *