ಹಾಡಹಗಲೇ ದೇವಾಲಯದಲ್ಲಿ ಕಳ್ಳತನ

ತರೀಕೆರೆ: ಪಟ್ಟಣದ ಎಂ.ಜಿ.ರಸ್ತೆಯಲ್ಲಿನ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನದಲ್ಲಿ ಶುಕ್ರವಾರ ಹಾಡಹಗಲೇ ಕಳ್ಳತನ ನಡೆದಿದ್ದು ದೇವರಿಗೆ ತೊಡೆಸಿದ್ದ ಅಂದಾಜು 65 ಸಾವಿರ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳ್ಳರು ದೋಚಿದ್ದಾರೆ. ವಿಠಲ ರುಕ್ಮಾಯಿ ದೇಗುಲದಲ್ಲಿ ಶ್ರಾವಣ ಮಾಸದ ನಿಮಿತ್ತ ಶುಕ್ರವಾರ ಮಧ್ಯಾಹ್ನದವರೆಗೂ ಪೂಜಾ ಕಾರ್ಯಗಳನ್ನು ನೆರವೇರಿಸಿದ ಅರ್ಚಕ ಶಶಿಧರ ಭಟ್ ಗರ್ಭಗುಡಿಗೆ ಮಾತ್ರ ಬೀಗ ಹಾಕಿ ಹೊರ ಬಾಗಿಲಿಗೆ ಬೀಗ ಹಾಕದೆ ಹಾಗೇ ಬಿಟ್ಟುಹೋಗಿದ್ದರು.

ಅರ್ಚಕರ ಚಲನವಲನದ ಮೇಲೆ ದೃಷ್ಟಿಯಿಟ್ಟ ಕಳ್ಳರು ಅರ್ಚಕ ಮನೆ ಕಡೆ ಹೊರಡುತ್ತಿದ್ದಂತೆ ದೇಗುಲದ ಒಳಪ್ರವೇಶಿದ್ದಾರಲ್ಲದೆ ಗರ್ಭಗುಡಿಯ ಬೀಗ ಮುರಿದು ಶ್ರೀ ದುರ್ಗಾಂಬಾ ಮತ್ತು ಶ್ರೀ ರುಕ್ಮಾಯಿ ದೇವಿಗೆ ತೊಡಿಸಿದ್ದ ತಲಾ 4 ಗ್ರಾಂ ತೂಕದ ಚಿನ್ನದ ಎರಡು ತಾಳಿಯ ಜತೆಗೆ ಶ್ರೀ ದುರ್ಗಾಂಬಾ ದೇವಿಗೆ ತೊಡಿಸಿದ್ದ ಒಂದೂವರೆ ಕೆಜಿ ತೂಕದ ಬೆಳ್ಳಿ ಮುಖವಾಡ ದೋಚಿದ್ದಾರೆ.

ಸಂಜೆ 7ಕ್ಕೆ ಪೂಜೆ ನೆರವೇರಿಸಲೆಂದು ಮತ್ತೆ ದೇಗುಲದ ಬಾಗಿಲು ತೆರೆದಾಗ ಅರ್ಚಕರಿಗೆ ಕಳ್ಳರು ಗರ್ಭಗುಡಿ ಬೀಗ ಒಡೆದು ಚಿನ್ನಾಭರಣ ದೋಚಿರುವುದು ಗೊತ್ತಾಗಿದೆ. ಕೂಡಲೆ ಪಟ್ಟಣದ ಪೊಲೀಸರಿಗೆ ಮಾಹಿತಿ ನೀಡಿದರು ಎನ್ನಲಾಗಿದೆ. ರಾತ್ರಿ 9 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿ ಅರ್ಚಕರಿಂದ ಮಾಹಿತಿ ಸಂಗ್ರಹಿಸಿದರು. ಶನಿವಾರ ಬೆಳಗ್ಗೆ ಚಿಕ್ಕಮಗಳೂರಿಂದ ಆಗಮಿಸಿದ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಹೆಚ್ಚಿನ ಪರಿಶೀಲನೆ ನಡೆಸಿತು.

Leave a Reply

Your email address will not be published. Required fields are marked *