Thursday, 13th December 2018  

Vijayavani

Breaking News

ಹಸುರೊಳಗೆ ಹೆಸರಿಲ್ಲದೆ ಬದುಕುವವರು…

Saturday, 23.12.2017, 3:02 AM       No Comments

 | ನರೇಂದ್ರ ರೈ ದೇರ್ಲ

ನೆಲದ ನಂಟು ಅನನ್ಯ. ಹಸಿರಿನಲ್ಲಿ ಬದುಕುವ ಅನುಭವ, ಅದು ಕೊಡುವ ಸುಖ ವಿಶಿಷ್ಟ. ನಿಶ್ಚಿಂತೆಯಿಂದ ಬದುಕಬೇಕಾದರೆ ಹಿಮಾಲಯವೊಂದೇ ಜಾಗವಲ್ಲ. ಸಂನ್ಯಾಸಿ-ಸಂತ ಆಗುವುದೊಂದೇ ದಾರಿಯಲ್ಲ. ಕೃಷಿಯನ್ನು ಆಶ್ರಮದಂತೆ ಬದುಕುವುದು ಕೂಡ ಒಂದು ಧ್ಯಾನವೇ. 

ಆ ಮನೆಯ ಜಗಲಿಯಲ್ಲಿ ಕೂತಾಗ ನನ್ನೊಳಗೆ ಯಾವ ಪ್ರಶ್ನೆಗಳೂ ಉಳಿದಿರಲಿಲ್ಲ. ಪ್ರಶ್ನೆಗಳೆಲ್ಲ ನನ್ನೊಳಗಡೆಯೇ ಇಂಗಲು ಕಾರಣ ಆ ಮನುಷ್ಯನ ಬದುಕಿನ ಸರಳತೆ. ಮಿತಿಯ ಕೃಷಿಯಲ್ಲಿ ಅವರಿಗಿದ್ದ ಅತಿ ಖುಷಿ. ಪುಟ್ಟ ಮನೆ. ಅದರ ಅರ್ಧದಷ್ಟು ಅಂಗಳ. ಮನೆಯ ಎರಡು ಬದಿಗೆ ಅಂಟಿಕೊಂಡ ಕೈತೋಟ. ಎಷ್ಟು ಸಾಧ್ಯವೋ ಅಷ್ಟೊಂದು ಬಗೆಬಗೆಯ ತರಕಾರಿ, ಸೊಪು್ಪಗಳು, ಕೀಳದೆ ಗಿಡದಲ್ಲೇ ಉಳಿದಿರುವ ಕಾಯಿಪಲ್ಲೆಗಳು. ಬಗೆಯದೇ ಉಳಿದ ಗಡ್ಡೆ ಗೆಣಸುಗಳು. ಆ ಮನೆಗೆ ಅಟ್ಟ ಇತ್ತು. ಜಗಲಿ ಇತ್ತು. ಹಂಡೆಯಲ್ಲಿ ಬಿಸಿನೀರು ಮಾಡಿ ಸ್ನಾನ ಮಾಡುವ ಪ್ರತ್ಯೇಕ ಪುಟ್ಟ ಬಚ್ಚಲು ಮನೆ. ಒಲೆಯ ಬೂದಿ ತೆಗೆದು ದಿನಾ ತುಂಬಲು ಒಂದು ಡಬ್ಬಿ. ಮನೆಗೆ ಬರುವ ಪ್ಲಾಸ್ಟಿಕ್ ಕಸಮಸಗಳ ವಿಲೇವಾರಿಗೆ ಗೋಡೆಯಲ್ಲಿ ನೇತುಬಿದ್ದ ಚೀಲ. ಬಟ್ಟೆ- ಪಾತ್ರೆ ತೊಳೆಯುವ ಜಾಗಕ್ಕೇ ಕಾಡಿನಿಂದ ಪೈಪ್ ಮೂಲಕ ಹರಿದು ಬರುವ ತಂಪು ತಂಪು ನೀರು. ಹೆಚ್ಚಾದ ನೀರು ಕೆಳಗಡೆ ಹರಿದು ಪುಟ್ಟ ತೋಟದ ಕಣಿ ತುಂಬುತ್ತದೆ. ಅಲ್ಲಿ ಕೆರೆಯಿಲ್ಲ, ಬೋರ್​ವೆಲ್ ಇಲ್ಲ. ಪಂಪು ಇಲ್ಲ. ಕರೆಂಟು ಇಲ್ಲ. ಮೊಬೈಲ್ ಬಳಸಲು ರೇಂಜು ಇಲ್ಲ. ಗುಡ್ಡದಿಂದ ಇಳಿದು ಬರಲು ಪುಟ್ಟ ಮಣ್ಣು ರಸ್ತೆ ಇದೆ. ಯಾರೇ ಬರುವುದಾದರೂ ಬೇರೆ ಬಳಸು ದಾರಿಯಿಲ್ಲ. ಆ ಹಸುರು ದಾರಿಗಾಗಿ ಡಾಂಬರು ರಸ್ತೆಯಿಂದ ಒಂದು ಮೈಲು ನಡೆಯಬೇಕು. ಅವರ ತುಂಡು ಭೂಮಿಗೆ ಒತ್ತಿಕೊಂಡೇ ಸರ್ಕಾರಿ ಕಾಡು. ಕಾಡಿಗೆ ಅಂಟಿಕೊಂಡಂತೆ ಆ ಮನೆ.

ಬೇಲಿಯಲ್ಲಿರುವ ಪುಟ್ಟ ತಡಲ ದಾಟಿ ಆ ಮನೆಯ ಅಂಗಳ ಹತ್ತುವವರೆಗೆ ಎರಡೂ ಬದಿಗಳಲ್ಲಿ ನೆರಳು ಮರಗಳು. ಆ ಮರಗಳು ಉದುರಿಸಿದ ತರಗೆಲೆಗಳನ್ನು ಹಾಗೆಯೇ ಗುಡಿಸಿ ಆ ಮರಗಳ ಬುಡಕ್ಕೆ ರಾಶಿ ಪುಡಿದಿದ್ದಾರೆ. ಹಾಗಂತ ಅವುಗಳು ಮತ್ತೆ ಗಾಳಿಗೆ ಹಾರು ದಾರಿಗೆ ಬೀಳಬಾರದು. ಅದಕ್ಕಾಗಿ ತೆಂಗಿನ ಕಾಯಿಯ ಚೆಪ್ಪನ್ನು ಸುತ್ತ ಅಟ್ಟಿಕಟ್ಟಿದ್ದಾರೆ. ಕಾರಣ ಆ ಸಾಲುಮರಗಳಿಗೆ ಅಂಟಿಕೊಂಡು ಕಾಳು ಮೆಣಸಿನ ಬಳ್ಳಿಗಳು ಸೊಂಪಾಗಿ ಹತ್ತಿವೆ. ಅವು ಹಬ್ಬಿಕೊಂಡು ಮರಗಳನ್ನು ತುಚ್ಚಿಕೊಂಡು ಏರಿದ ರೀತಿಗೆ ಬೆರಗಾಗಲೇ ಬೇಕು. ಕಾರಣ ಅಲ್ಲೂ ಒಂದು ಶಿಸ್ತು. ಆ ಮನೆಯ ಯಜಮಾನ ಮೆಣಸಿನ ಬಳ್ಳಿಗೂ ದಿನಾ ಕೈ ಹಿಡಿದು ದಾರಿ ತೋರಿಸುತ್ತಾರೆ.

ಬುಡಗಳ ತರಗೆಲೆಗಳು ಒದ್ದೆಯಾಗಿವೆ. ಅರ್ಧ ಗಂಟೆ ಮುಂಚೆ ಯಜಮಾನರು ಅವುಗಳಿಗೆ ನೀರು ಎರೆದಿದ್ದಾರೆ. ಖಂಡಿತಾ ಅವರು ಪೈಪ್ ಮೂಲಕ ನೀರು ಹಿಡಿದಿದ್ದಲ್ಲ. ಕೊಡದಲ್ಲಿ ಎತ್ತಿಕೊಂಡು ಸುರಿದದ್ದು. ದಾರಿಯನ್ನು ಗುಡಿಸುವುದು, ತರಗೆಲೆಗಳನ್ನು ಒಪ್ಪವಾಗಿ ಬುಡ ಬುಡಗಳಿಗೆ ಹಾಕುವುದು, ಆನಂತರ ಕೊಡಪಾನದಲ್ಲಿ ನೀರು ಎರೆಯುವುದು ಪ್ರತಿದಿನ ಬೆಳಗ್ಗಿನ ಕೆಲಸವಾಗಿರಬೇಕು. ಹೌದು ಆ ದಾರಿ ಗುಡಿಸಲು ಅವರು ಬಳಸುವ ಅವರೇ ಮಾಡಿರಬಹುದಾದ ಆ ಪೊರಕೆಯನ್ನು ಆ ದಾರಿಯ ಮರವೊಂದಕ್ಕೆ ನೇತು ಹಾಕಿದ್ದಾರೆ.

ಅದು ಬಹಳ ಸರಳ ಪೊರಕೆ. ಆಳೆತ್ತರದ ಒಂದು ಬಿದಿರ ಹಿಡಿ. ಅದರ ತುದಿಗೆ ಸೊಪು್ಪ ಸವರಿದ ಕಾಡು ಪೊದರು. ಬಹುಶಃ ಬಿದಿರ ಹಡಿಯ ತುದಿಯ ಆ ಪೊದರ ಗುಚ್ಛವನ್ನು ವಾರಕ್ಕೊಮ್ಮೆ ಬದಲಾಯಿಸುತ್ತಿರಬೇಕು. ಅಂಥ ಪೊದರು ಅವರ ಜಮೀನಿನಲ್ಲಿ ತುಂಬ ಇದೆ. ಗುಡಿಸಲು ಬಗ್ಗ ಬೇಕಾಗಿಲ್ಲ. ದೇಹದಂಡನೆ ಇಲ್ಲವೇ ಇಲ್ಲ. ಸುಮ್ಮನೆ ಮರದಿಂದ ಇಳಿಸಿ ಗುಡಿಸಿ ನೋಡಿದೆ. ಖುಷಿಯಾಯಿತು.

ಇನ್ನೇನು ಅಂಗಳಕ್ಕೆ ಏರಬೇಕು ಅಥವಾ ಹತ್ತಬೇಕು ಎನ್ನುವಾಗ ಒಂದು ಸೊಗಸಾದ ಹಸಿರು ತೋರಣ. ಅದೂ ಕಾಳುಮೆಣಸಿನದ್ದೇ. ಗೇರುಮರಕ್ಕೆ ಅಂಟಿಕೊಂಡ ಮೆಣಸಿನ ಪೊದೆ. ಅದು ಭಾರವಾಗಿ ಕೆಳಗೆ ಕುಸಿಯಬಾರದು, ಮರದ ಗೆಲ್ಲು ಮುರಿಯಬಾರದೆಂದು ಆಚೆ ಈಚೆ ಎರಡು ಕಂಬಕೊಟ್ಟಿದ್ದಾರೆ. ಬಳ್ಳಿ ಆ ಕಂಬಗಳನ್ನೂ ಬಿಟ್ಟಿಲ್ಲ. ಕೆಳಮುಖವಾಗಿ ಇಳಿದು ಅಂಟಿಕೊಂಡಿದೆ. ಅಂಗಳದಲ್ಲಿರುವ ಗೇರು ಮರಗಳಿಗೆ ಎಂಥ ಫಲವೋ ಗೊತ್ತಿಲ್ಲ. ಎಲ್ಲ ಮನೆಗಳ ಗೋಡಂಬಿ ಮರಗಳಂತೆ ಆ ಮರವು ರಾಶಿ ರಾಶಿ ಹೂವು ಬಿಟ್ಟಿದೆ. ಹಣ್ಣಾದ ಮೇಲೆ ಅವೆಲ್ಲ ಅಂಗಳಕ್ಕೆ ಬೀಳುವಾಗ ಆಗುವ ಖುಷಿಯೇ ಬೇರೆ. ಆ ಮರದ ಮೇಲ್ಭಾಗದಲ್ಲಿ ಮಾತ್ರ ಗೇರು ಚಿಗುರು ಹೂವುಗಳು. ಬುಡದಂಟಿಗೆ ಅಂಟಿಕೊಂಡ ಮೆಣಸು. ಅದೇ ಆ ಮನೆಗೆ ತೋರಣ. ಆ ಎರಡು ಹಸಿರುಕಂಬಗಳ ನಡುವಿನಿಂದ ಮನುಷ್ಯ ತೂರಿ ಆ ಅಂಗಳಕ್ಕೆ ಹತ್ತಬೇಕು.

ಅದೇ ದಾರಿಯಲ್ಲಿ ನಡೆದು ಬಂದು ನಾನೀಗ ಜಗಲಿಯಲ್ಲಿ ಕೂತಿದ್ದೇನೆ. ಈ ಬಾರಿ ನಾನು ಕ್ಯಾಮರಾ ತೆಗೆಯಲಿಲ್ಲ. ಕಾಗದ ಪೆನ್ನು ಮುಟ್ಟಲಿಲ್ಲ. ಬರೀ ಹೀರಿದ್ದು. ಹಸಿರನ್ನಷ್ಟೆ ಹೀರಿದ್ದು. ಕೃಷಿಯನ್ನು ನೋಡಲಿದೆ. ಕೃಷಿಯಲ್ಲಿ ಬರೆಯಲಿದೆ. ಕೃಷಿಯಲ್ಲಿ ಹೊಸತು ಇದೆ ಎಂಬುದೆಲ್ಲ ಅವರಿಗೆ ಗೊತ್ತೇ ಇರಲಿಲ್ಲ. ಅವರಿಗದು ಕೇವಲ ಬದುಕು. ಒಂದು ಬದುಕನ್ನು ಬಗೆಯುವುದಾಗಲಿ ಬರೆಯುವುದಾಗಲೀ ಯಾಕೆ? ಯಾರಿಗೆ? ಎಂಬ ಪ್ರಶ್ನೆಗಳು ಅವರೊಳಗೆ ಇದ್ದಂತಿತ್ತು. ಈ ಕಾರಣಕ್ಕಾಗಿ ನಾನು ಈ ಬಾರಿ ಕೃಷಿಕನಾಗಿಯೇ ಆ ಜಗಲಿಯಲ್ಲಿ ಕೂತಿದ್ದೆ.

ಗೋಡೆಯ ಮೇಲಿನ ಆಣಿಯಲ್ಲಿ ಒಂದು ಕಾಗದ. ಅದರ ಮೇಲೆ ಒಂದು ರೇಖಾಚಿತ್ರ ನೇತಾಡುತ್ತಿತ್ತು. ಹತ್ತಿರ ಹೋಗಿ ನೋಡಿದೆ. ಅವರು ಅದನ್ನು ಕಿತ್ತು ತೆಗೆದು ಜಗಲಿಯ ಮೇಲೆ ಹರಡಿ ಕತೆ ಹೇಳಿದರು. ಆ ಮನುಷ್ಯ ಊರು ಬಿಟು, ಕೃಷಿ ಬಿಟ್ಟು, ತೋಟಬಿಟ್ಟು ಪೇಟೆಗೆ ಹೋಗುವುದು ತಿಂಗಳಿಗೆ ಒಂದೇ ಬಾರಿಯಂತೆ. ಹಾಗೆ ಹೋದಾಗ ಪೇಟೆಯಿಂದ ಏನೇನು ತರಬೇಕೆಂದು ಪೇಟೆಗೆ ಹೋಗಿ ಬಂದ ಮರುದಿನದಿಂದ ಬರೆದಿಡುತ್ತಾರೆ. ಹಳ್ಳಿಯಿಂದ ಪೇಟೆಗೆ ಹೋಗುವಾಗ ಸಾಮಗ್ರಿಗಳ ಪಟ್ಟಿಮಾಡಿಕೊಂಡು ಹೋಗುವವರು ನೂರಾರುಮಂದಿ ಗ್ರಾಮಗಳಲ್ಲಿದ್ದಾರೆ. ಆದರೆ ಇವರು ಅವರಿಗಿಂತ ಹೆಚ್ಚು. ಇವರು ಪಟ್ಟಿಯ ಜತೆಗೆ ಪೇಟೆಯ ಯಾವ ಮೂಲೆಯಿಂದ ಆರಂಭಿಸಿ ಯಾವ ತುದಿಯಲ್ಲಿ ಖರೀದಿ ಮುಗಿಸಬೇಕೆಂದು ರೇಖಾಚಿತ್ರದಲ್ಲಿ ಬರೆಯುತ್ತಾರೆ. ಅವರದು ದ್ವಿಚಕ್ರ ವಾಹನ. ಅದರಲ್ಲಿ ಐದಾರು ಚೀಲ ಬಾಕ್ಸ್​ಗಳಿವೆ. ಎಲ್ಲವೂ ಅವುಗಳಲ್ಲಿ ತುಂಬುತ್ತವೆ. ಖರೀದಿಯ ಆದಿ ಮತ್ತು ಖರೀದಿಯ ಅಂತ್ಯ ಆ ಮಾರ್ಗ ನಕ್ಷೆಯ ಪ್ರಕಾರವೇ ನಡೆಯುತ್ತದೆ. ಯಾವುದೂ ಬಿಟ್ಟು ಹೋಗುವುದಿಲ್ಲ. ಒಮ್ಮೆ ಹೋದಕಡೆ ಮತ್ತೆ ಹೋಗಲಿಕ್ಕಿಲ್ಲ.

ಯಾವುದೇ ಕಾರಣಕ್ಕೆ ಪೇಟೆಯಲ್ಲಿ ಖರೀದಿಗಾಗಿ, ವಸ್ತುಗಳಿಗಾಗಿ ಮತ್ತೆ ಮತ್ತೆ ತಿರುಗಾಡಬಾರದು. ಸಮಯ ಅದಕ್ಕಾಗಿ ಹಾಳಾಗಬಾರದು ಎಂಬ ದೂರದೃಷ್ಟಿ ಅವರದು. ನನ್ನ ಕುತೂಹಲ ಅವರಿಗೆ ಅರ್ಥವಾಗಿರಬೇಕು. ನಿಟ್ಟುಸಿರು ಬಿಟ್ಟು ಅವರು ನಿಧಾನವಾಗಿ ಹೇಳಿದ ಮಾತು ‘ತಿಂಗಳಿಗಲ್ಲ; ಮುಂದೆ ಎರಡು ತಿಂಗಳಿಗೊಮ್ಮೆ ಮಾತ್ರ ಪೇಟೆಗೆ ಹೋಗಬೇಕು. ನನಗೆ ನಗರ ಉಸಿರುಕಟ್ಟಿಡುತ್ತದೆ. ಮುಟ್ಟಿದ ತಕ್ಷಣ ವಾಪಾಸಾಗುವ ಅಂತ ಅನ್ನಿಸುತ್ತದೆ. ಬೇಡವೇ ಬೇಡ. ಆದಷ್ಟು ಪಟ್ಟಣದ ಸಹವಾಸ ಕಡಿಮೆ ಮಾಡಲೇ ಬೇಕು’.

ತಡೆಯಲಾಗಲಿಲ್ಲ. ನಾನು ಅವರಿಗೆ ಕೇಳಬಾರದ ಪ್ರಶ್ನೆ ಕೇಳಿದೆ. ‘ಸರ್ ಈ ಇಲ್ಲಿ ಹಸಿರು ಕಟ್ಟಿದ ಕತೆ ಹೇಳಿ?’ ನನ್ನ ಮುಖವನ್ನೇ ಮತ್ತೆ ಮತ್ತೆ ನೋಡಿದ ಅವರು-‘ಇದು ಕಟ್ಟಿದ್ದಲ್ಲ ಹುಟ್ಟಿದ್ದು. ಇದು ನಿಮ್ಮ ಕಾವ್ಯದ ಹಾಗೆ. ಹಸಿರು ಮತ್ತು ಕಾವ್ಯ ಎರಡೂ ಒಂದೇ. ಕಟ್ಟಲು ಸಾಧ್ಯವಿಲ್ಲ. ಯಾವುದು ಹುಟ್ಟುತ್ತದೋ ಅದನ್ನು ಹೀಗೆಯೇ ಎಂದು ವಿವರಿಸುವುದು ಹೇಗೆ? ಇಲ್ಲಿ ನಾನು ಬಿತ್ತಿದ್ದೇನೆ, ನಾನು ನೆಟ್ಟಿದ್ದೇನೆ ಎಂಬುದೆಲ್ಲ ಬರೀ ಸುಳ್ಳು. ಅದನ್ನೆಲ್ಲ ಈ ನೆಲಕ್ಕೆ ನಾನು ಕಲಿಸಿದ್ದೇನೆ, ನಾನು ಮಾಡುತ್ತೇನೆ ಎಂಬುದೆಲ್ಲ ಬೊಗಳೆ. ಎಲ್ಲವೂ ಅದಕ್ಕೆ ಗೊತ್ತಿದೆ. ಇದನ್ನೆಲ್ಲ ನಾವು ನೋಡಿ ಖುಷಿ ಪಡಬೇಕು’. ‘ನೀವು ನನ್ನನ್ನು ಬಗೆಯಬೇಡಿ, ಬರೆಯಬೇಡಿ. ನೀವು ಬರೆಯುವುದರಿಂದ ನನಗೆ ಸುಖ ಸಿಗುವುದಿಲ್ಲ. ನನಗೆ ನೆಲ ಸಂಬಂಧವೇ ಪರಮ ಸುಖ. ಕೃಷಿಯಲ್ಲಿ ಸಾಧನೆಯೆಂದರೆ ಏನು? ಅದು ಮನುಷ್ಯನಿಂದ ನೆಲಕ್ಕೆ ಸಿಗುವುದಾದರೂ ಹೇಗೆ? ನೀವು ನಿಮ್ಮಷ್ಟಕ್ಕೆ ಒಬ್ಬಂಟಿಯಾಗಿ ಈ ತುಂಡುಭೂಮಿಗೊಮ್ಮೆ ಸುತ್ತು ಬನ್ನಿ. ನೆಲದ ಮೌನಕ್ಕೆ ಕಿವಿಯಾಗಿ. ನನ್ನ ಬಹುಪಾಲು ಗಿಡಗಳು ತಾವೇ ಹಣ ಉದುರಿಸುವುದಿಲ್ಲ. ಕೃಷಿಯಲ್ಲೂ ಬರೀ ದುಡ್ಡು ದುಡ್ಡು ಎಂಬ ಭ್ರಮೆಯಿದೆ. ಸ್ವಲ್ಪ ಬೇರಿಗಿಳಿದು ನೋಡಿ…’

ಆ ತೋಟ ಬಿಟ್ಟು ಬರುವಾಗ ಕೊನೆಗೇ ಅವರು ಹೇಳಿದ ಆ ಮಾತು ಮತ್ತೆ ಮತ್ತೆ ಕಾಡುತ್ತದೆ. ‘‘ಊರು, ಸಂಬಂಧ, ಸಮುದಾಯದೊಂದಿಗೇ ಇದ್ದಾಗ ‘ಕಾರಣ-ಪರಿಣಾಮಗಳಿಗೆ’ ಮತ್ತೆ ಮತ್ತೆ ನಾವು ಉತ್ತರವಾಗಲೇಬೇಕು. ಅದು ನೋವು, ದುಃಖಗಳಿಗೆ ಕಾರಣವಾಗುತ್ತದೆ. ನನ್ನಿಂದ ಬೇರೆಯವರಿಗೆ ದುಃಖ, ನೋವು ಆಗದಂತೆ ಬದುಕಲು ಇರುವ ಮತ್ತು ತಡಕಾಲದಲ್ಲಿ ಸಂತ-ಸಂನ್ಯಾಸಿಯಾಗದೆ ಮನುಷ್ಯರಂತೆ ಬದುಕಲು ಇರುವ ಜಾಗ ಅಂದರೆ ಕೃಷಿ. ನಿಶ್ಚಿಂತೆಯಿಂದ ಬದುಕಬೇಕಾದರೆ ಹಿಮಾಲಯವೊಂದೇ ಜಾಗವಲ್ಲ. ಸಂನ್ಯಾಸಿ-ಸಂತ ಆಗುವುದೊಂದೇ ದಾರಿಯಲ್ಲ. ಕೃಷಿಯನ್ನು ಆಶ್ರಮದಂತೆ ಬದುಕುವುದು ಕೂಡ ಒಂದು ಧ್ಯಾನವೇ…’

ತನ್ನ ಹೆಸರು, ಊರು, ವಿಳಾಸ ಬರೆಯಬೇಡಿ ಎಂದು ಅವರು ನನಗೆ ಹೇಳೇ ಇಲ್ಲ. ಕನಿಷ್ಠ ನೈತಿಕತೆಯ ಪ್ರಕಾರ ಈ ಹಸಿರು ಸಂತನ ಮನೆಗೆ ನಾನು ಯಾರಿಗೂ ದಾರಿ ತೋರಿಸಲಾರೆ. ಹಸಿರೊಳಗೆ ಹೆಸರಿಲ್ಲದೆ ಬದುಕುವ, ಲೋಕದ ಕಾರಣ- ಪರಿಣಾಮಗಳಿಗೆ ಒಳಗಾಗದೆ ಧ್ಯಾನಸ್ಥನಾಗುವ, ಅದನ್ನೇ ಪರಮ ಸುಖವೆಂದು ಪರಿಭಾವಿಸುವ ಹಕ್ಕು ಮತ್ತು ಅವಕಾಶ ಈ ನೆಲದ ಎಲ್ಲರಿಗೂ ಇದೆ. ಅಂದ ಹಾಗೆ ನಾನು ಅವರ ಕೃಷಿ- ತೋಟವನ್ನು ಪೂರ್ಣವಾಗಿ ಪರಿಚಯಿಸಲೇ ಇಲ್ಲ. ಕಾರಣ ಅದಕ್ಕಿಂತ ಶ್ರೇಷ್ಠ ಅನ್ನಿಸಿದ್ದು ನನಗೆ ಅವರ ಮನಸ್ಸು ಮತ್ತು ತಪಸ್ಸು.

(ಲೇಖಕರು ಕನ್ನಡ ಪ್ರಾಧ್ಯಾಪಕರು ಮತ್ತು ಪರಿಸರಾಸಕ್ತ ಕೃಷಿಕರು)

Leave a Reply

Your email address will not be published. Required fields are marked *

Back To Top