ಹಸಿರು ಮಾರ್ಗದಲ್ಲೂ ಶೀಘ್ರ 6 ಬೋಗಿ ರೈಲು

ಬೆಂಗಳೂರು: ನಮ್ಮ ಮೆಟ್ರೋ ಮೊದಲನೇ ಹಂತದ ನಾಯಂಡಹಳ್ಳಿ-ಬೈಯಪ್ಪನಹಳ್ಳಿ ನೇರಳೆ ಮಾರ್ಗದ ಬಳಿಕ ನಾಗಸಂದ್ರ-ಯಲಚೇನಹಳ್ಳಿ (ಉತ್ತರ-ದಕ್ಷಿಣ) ಹಸಿರು ಮಾರ್ಗವೂ ಮೊಟ್ಟ ಮೊದಲ 6 ಬೋಗಿ ರೈಲು ಸ್ವಾಗತಿಸಲು ಸಜ್ಜಾಗಿದೆ.

ಈ ಮಾರ್ಗದಲ್ಲೂ ಮುಖ್ಯಮಂತ್ರಿಯಿಂದಲೇ 6 ಬೋಗಿ ರೈಲು ಉದ್ಘಾಟಿಸಲು ಬಿಎಂಆರ್​ಸಿಎಲ್ ಸಿದ್ಧತೆ ನಡೆಸಿದೆ. ಸಂಕ್ರಾಂತಿ ವೇಳೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಪರೀಕ್ಷೆ ಮುಕ್ತಾಯಗೊಳ್ಳಲಿದೆ ಎಂದು ನಿಗಮದ ಕಾರ್ಯಾಚರಣೆ ವಿಭಾಗದ ಹಿರಿಯ ಅಧಿಕಾರಿ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

1,463 ಕೋಟಿ ರೂ. ವೆಚ್ಚದಲ್ಲಿ ಬಿಎಂಆರ್​ಸಿಎಲ್ 150 ಹೊಸ ಬೋಗಿಗಳನ್ನು ಬಿಇಎಂಎಲ್​ನಿಂದ ಖರೀದಿಸುತ್ತಿದೆ. ಹೊಸ ಬೋಗಿಗಳು ಬೈಯಪ್ಪನಹಳ್ಳಿ ಡಿಪೋಗೆ ಸರಬರಾಜಾಗುತ್ತಿದ್ದು, ಇಲ್ಲಿಯವರೆಗೂ ನೇರಳೆ ಮಾರ್ಗದಲ್ಲಿ 3 ಆರು ಬೋಗಿ ರೈಲು ಕಾರ್ಯಾ ಚರಣೆಯಾಗುತ್ತಿದೆ. ಹಸಿರು ಮಾರ್ಗಕ್ಕಾಗಿ 6 ಬೋಗಿಗಳ ಒಂದು ರೈಲು ಬೈಯಪ್ಪನಹಳ್ಳಿ ಡಿಪೋದಲ್ಲೇ ಸಜ್ಜಾಗಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ನಿರ್ಮಾಣ ಸಂದರ್ಭದಲ್ಲೇ ಹಸಿರು ಮಾರ್ಗ ಮತ್ತು ನೇರಳೆ ಮಾರ್ಗ ಸಂಪರ್ಕಕ್ಕೆ ಹಳಿ ನಿರ್ವಿುಸಲಾಗಿದೆ. ಇದೇ ಹಳಿ ಮುಖಾಂತರ 6 ಬೋಗಿ ರೈಲನ್ನು ಪೀಣ್ಯಕ್ಕೆ ಕೊಂಡೊಯ್ಯಲಾಗಿದೆ.

ಹೊಸ ಮಾರ್ಗದಲ್ಲಿ ಪರೀಕ್ಷೆ: ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗುವ ಮೊದಲು ರೈಲಿನ ಪರೀಕ್ಷೆ ನಡೆಸಲಾಗುತ್ತದೆ. ಹಸಿರು ಮಾರ್ಗದ ಹಳಿಗೆ ಮೊಟ್ಟ ಮೊದಲ ಬಾರಿಗೆ 6 ಬೋಗಿ ರೈಲು ಇಳಿದಿದೆ. ನೇರಳೆ ಮಾರ್ಗಕ್ಕೆ(18.10 ಕಿ.ಮೀ.) ಹೋಲಿಸಿದರೆ ಹಸಿರು ಮಾರ್ಗ(24.2 ಕಿ.ಮೀ) ಅತಿ ಉದ್ದದ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಹೆಚ್ಚಿನ ತಿರುವುಗಳಿದ್ದು, ಸೂಕ್ಷ್ಮವಾದ ಪರೀಕ್ಷೆ ಅಗತ್ಯ. ಪ್ರಸ್ತುತ ರಾತ್ರಿ ವೇಳೆ ನಾಗಸಂದ್ರದಿಂದ ಯಲಚೇನಹಳ್ಳಿಯವರೆಗೆ ಪೂರ್ಣ ಮಾರ್ಗದಲ್ಲಿ 6 ಬೋಗಿ ರೈಲು ಪರೀಕ್ಷಿಸಲಾಗುತ್ತಿದೆ. ರಾತ್ರಿ ವೇಳೆ ಪೀಣ್ಯ ಡಿಪೋದಲ್ಲಿ ರೈಲು ನಿಲುಗಡೆ ಮಾಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸೆಪ್ಟೆಂಬರ್ ಒಳಗಾಗಿ ನಮ್ಮ ಮೆಟ್ರೋದ ಎಲ್ಲ 50 ರೈಲುಗಳನ್ನು 6 ಬೋಗಿ ರೈಲಾಗಿ ಪರಿವರ್ತಿಸಲು ಬಿಎಂಆರ್​ಸಿಎಲ್ ಗಡುವು ಹಾಕಿಕೊಂಡಿದ್ದು, ಇದೇ ವೇಗದಲ್ಲಿ 6 ಬೋಗಿ ರೈಲು ಹಳಿಗಿಳಿದರೆ ನಿಗಮ ತನ್ನ ಗಡುವು ಮುಟ್ಟುವುದು ಅನುಮಾನವಾಗಿದೆ.

ಪ್ರತಿ ಭಾನುವಾರ ಇನ್ನು 7 ಗಂಟೆಯಿಂದಲೇ ಮೆಟ್ರೋ

ಇಂದಿನಿಂದ(ಜ.13) ಪ್ರತಿ ಭಾನುವಾರ ಬೆಳಗ್ಗೆ 7ರಿಂದಲೇ ಮೆಟ್ರೋ ರೈಲು ಸೇವೆ ಆರಂಭವಾಗಲಿದೆ. ಪ್ರಸ್ತುತ ಸೋಮವಾರದಿಂದ ಶನಿವಾರದವರೆಗೆ ನಿತ್ಯ ಬೆಳಗ್ಗೆ 5 ರಿಂದಲೇ ಮೆಟ್ರೋ ಆರಂಭವಾಗುತ್ತಿದೆ. ಆದರೆ ಭಾನುವಾರ ಬೆಳಗ್ಗೆ 8 ರಿಂದ ರೈಲು ಸೇವೆ ಆರಂಭವಾಗುತ್ತಿತ್ತು. ಪ್ರಯಾಣಿಕರ ಆಗ್ರಹದ ಹಿನ್ನೆಲೆಯಲ್ಲಿ ಜ.13ರಿಂದ ಭಾನುವಾರದಂದು ಒಂದು ಗಂಟೆ ಮುಂಚಿತವಾಗಿ ಮೆಟ್ರೋ ಆರಂಭಿಸಲು ನಿಗಮ ನಿರ್ಧರಿಸಿದೆ. ವಾರದ ದಿನಗಳಲ್ಲಿ ಬೆಳಗ್ಗೆ 5 ರಿಂದ ರಾತ್ರಿ 11ರವರೆಗೆ ನಿರಂತರವಾಗಿ ಮೆಟ್ರೋ ಸಂಚರಿಸುವ ಹಿನ್ನೆಲೆಯಲ್ಲಿ ರಾತ್ರಿ 12ರ ನಂತರ ರೈಲುಗಳ ನಿರ್ವಹಣೆ ಮಾಡಲಾಗುತ್ತಿದೆ. ಈ ಕಾರಣದಿಂದಾಗಿಯೇ ಭಾನುವಾರ ಬೆಳಗ್ಗೆ 5ರ ಬದಲಾಗಿ 8ರಿಂದ ರೈಲು ಆರಂಭಿಸಲಾಗುತ್ತಿತ್ತು. ಇದರಿಂದಾಗಿ ದೂರದ ಊರುಗಳಿಂದ ಬರುವ ಪ್ರಯಾಣಿಕರು ಮೆಟ್ರೋ ಸೇವೆಯಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದರು.

ದಟ್ಟಣೆ ಅವಧಿ ಪ್ರಯಾಣಿಕರ ಸಂಖ್ಯೆ

ನೇರಳೆ ಮಾರ್ಗ: 19,500 (ಪ್ರತಿ ಗಂಟೆಗೆ)

ಹಸಿರು ಮಾರ್ಗ: 10 ಸಾವಿರ(ಪ್ರತಿ ಗಂಟೆಗೆ)

ವಿಶೇಷತೆಗಳು

  • ಮೊದಲ ಬೋಗಿ ಮಹಿಳೆಯರಿಗೆ ಮೀಸಲು
  • ಒಂದೇ ಬಾರಿ 2,004 ಪ್ರಯಾಣಿಕರ ಪ್ರಯಾಣ ಸಾಮರ್ಥ್ಯ
  • 3 ಬೋಗಿ ರೈಲಿಗೆ ಹೋಲಿಸಿದರೆ ಶೇ.15 ಅಧಿಕ ಇಂಧನ ಉಳಿತಾಯ
  • ತಾಪಮಾನಕ್ಕೆ ಹೊಂದಿಕೊಳ್ಳುವಂತೆ ಸ್ವಯಂಚಾಲಿತ ಎಸಿ ವ್ಯವಸ್ಥೆ
  • ಅತ್ಯಾಧುನಿಕ ಎಲ್​ಸಿಡಿ ಪರದೆ, ಏಕಕಾಲದಲ್ಲಿ ಜಾಹೀರಾತು ಹಾಗೂ ಪ್ರಯಾಣಿಕರಿಗೆ ಮಾಹಿತಿ

Leave a Reply

Your email address will not be published. Required fields are marked *