ಹಸಿರು ತಂತ್ರಜ್ಞಾನ ಇಂದಿನ ಅಗತ್ಯ

ಧಾರವಾಡ: ಕೃಷಿಯಲ್ಲೂ ಹಸಿರು ತಂತ್ರಜ್ಞಾನ ಅಳವಡಿಸಲು ವಿಜ್ಞಾನಿಗಳು ಚಿಂತಿಸಬೇಕು. ಸದ್ಯ ಕೃಷಿಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್, ವಿದ್ಯುತ್ ಬಳಕೆಯಾಗುತ್ತಿದೆ. ಇದರ ಬದಲು ಸೌರಶಕ್ತಿ ಪಂಪ್, ಸೌರ ವಿದ್ಯುತ್ ದೀಪ ಹೀಗೆ ಪರಿಸರ ಸ್ನೇಹಿ ತಂತ್ರಜ್ಞಾನ ಬಳಸಿ ಕೃಷಿ ಮಾಡುವ ವಿಧಾನವನ್ನು ಬಲಪಡಿಸಬೇಕು ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮಹಾ ನಿರ್ದೇಶಕ ಡಾ. ತ್ರಿಲೋಚನ ಮಹಾಪಾತ್ರ ಹೇಳಿದರು.

ನಗರದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಸೋಮವಾರ ನಡೆದ 32ನೇ ಘಟಿಕೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಈ ವರ್ಷದಲ್ಲಿ ಅನೇಕ ರಾಜ್ಯಗಳಲ್ಲಿ ಮುಂಗಾರು ಕ್ಷೀಣಿಸಿ ಬರಗಾಲ ಎದುರಾದ ಪರಿಣಾಮ ಆಹಾರ ಉತ್ಪಾದನೆ ಕಡಿಮೆ ಆಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಆದಾಗ್ಯೂ ದೇಶಕ್ಕೆ ಆಹಾರದ ಕೊರತೆ ಆಗುವಷ್ಟು ತೊಂದರೆ ಎದುರಾಗುವುದಿಲ್ಲ. ಮೊದಲಿದ್ದ ಪರಿಸ್ಥಿತಿ ಗಮನಿಸಿದರೆ, ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಂಡ ಕಾರಣ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದೇವೆ. ತೋಟಗಾರಿಕೆ ಬೆಳೆ ಪ್ರದೇಶ ಹೆಚ್ಚಿದ್ದು, ವಾರ್ಷಿಕ 315 ದಶ ಲಕ್ಷ ಟನ್ ಉತ್ಪಾದಿಸಲಾಗುತ್ತಿದೆ. ಜೊತೆಗೆ 176 ದಶಲಕ್ಷ ಟನ್ ಹಾಲು ಉತ್ಪಾದನೆ ಆಗುತ್ತಿದ್ದು, ಮೊದಲಿಗಿಂತ ನಾಲ್ಕೂವರೆ ಪಟ್ಟು ಹೆಚ್ಚಿದೆ. ಭಾರತದಲ್ಲಿ ಕ್ಷೀರ ಕ್ರಾಂತಿಯಂತೆ ಸಕ್ಕರೆ ಕ್ರಾಂತಿಯೂ ಆಗಿದೆ. ದೇಶಕ್ಕೆ ಬೇಕಿರುವ 35 ದಶಲಕ್ಷ ಟನ್ ಸಕ್ಕರೆಗಿಂತ ಹೆಚ್ಚು ಉತ್ಪಾದಿಸುವ ಕ್ಷಮತೆ ಹೊಂದಿದ್ದೇವೆ ಎಂದರು.

ಸದ್ಯ ದೇಶದಲ್ಲಿ ಮಳೆಯ ಶೇ. 30ರಷ್ಟು ನೀರನ್ನು ಮಾತ್ರ ಕೃಷಿಗೆ ಬಳಸುತ್ತಿದ್ದು, ಇದು ಶೇ. 70ಕ್ಕೆ ತಲುಪಬೇಕು. ಜೊತೆಗೆ ಇಸ್ರೇಲ್ ಮಾದರಿ ಆಹಾರ ಉತ್ಪಾದನೆ ವಿಧಾನ ಅನುಸರಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ 632 ಸ್ನಾತಕ ಪದವಿಗಳು, 321 ಸ್ನಾತಕೋತ್ತರ ಪದವಿಗಳು, 76 ಪಿಹೆಚ್​ಡಿ ಪದವಿಗಳನ್ನು ಹಾಗೂ 43 ಸ್ವರ್ಣ ಪದಕಗಳನ್ನು ವಿವಿ ಸಹ ಕುಲಾಧಿಪತಿ, ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಪ್ರದಾನ ಮಾಡಿದರು. ವಿಶ್ವವಿದ್ಯಾಲಯದ ಕುಲಪತಿ ಡಾ. ಮಹದೇವ ಚೆಟ್ಟಿ ವಾರ್ಷಿಕ ವರದಿ ವಾಚಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ, ಕುಲಸಚಿವ ಪಿ.ಯು. ಕೃಷ್ಣರಾಜ, ಸಂಶೋಧನಾ ನಿರ್ದೇಶಕ ಡಾ. ಎಚ್.ಎಲ್. ನದಾಫ್, ವಿಸ್ತರಣಾ ನಿರ್ದೇಶಕ ಎಚ್. ವೆಂಕಟೇಶ, ಆಡಳಿತ ಮಂಡಳಿ ಸದಸ್ಯರು, ವಿವಿಧ ನಿಖಾಯಗಳ ಡೀನ್, ಪಾಲಕರು, ಇತರರು ಇದ್ದರು.

ಚಿನ್ನದ ಪದಕ ಪಡೆದವರು: ಧಾರವಾಡ ಕೃಷಿ ವಿವಿ ಬಿಎಸ್​ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಸಿದ್ದು ಚಿಂದಿ 2 ಸ್ವರ್ಣ ಪದಕದೊಂದಿಗೆ ಬಂಗಾರದ ಹುಡುಗ ಬಿರುದಿಗೆ ಪಾತ್ರರಾದರು. ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಬಿಎಸ್​ಸಿ ಕೃಷಿ ವಿದ್ಯಾರ್ಥಿ ಅಜಯಕುಮಾರ 2 ಚಿನ್ನದ ಪದಕ, ಧಾರವಾಡ ಕೃವಿವಿಯ ನಿಖಿತಾ ಭೋವಿ, ವಿಜಯಪುರ ಕೃಷಿ ವಿದ್ಯಾಲಯದ ಹರೀಶ ಟಿ., ಶಿರಸಿಯ ಅರಣ್ಯ ಮಹಾವಿದ್ಯಾಲಯದ ವರುಣ ಅರಸ್ ಎಂ.ಎನ್., ಧಾರವಾಡದ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಅನುಷಾ ಕೆ.ಜೆ., ಅಶ್ವಿನಿ ಟಿ.ಎಸ್., ಹರ್ಷಿತಾ ವೈ.ಅರ್., ಟೀನು ಥಾಮಸ್, ಗಣೇಶ ಪ್ರಸಾದ, ವೈಷ್ಣವಿ ಸಂಗಮ್ ಚಿತ್ರಾ ದಾಸ್, ಅಪರ್ಣಾ ಗೋಕುಲ, ಜಯಶ್ರೀ ಎ., ಶಹಾನಾ ಬೇಗಂ, ವನಿತಾ ಟಿ, ಸೀಮಾ ಎಸ್.ದೊಡ್ಡಮನಿ, ವೇಣುಗೋಪಾಲ ವಿ, ನೀನು ಅಗಸ್ಟಿನ್, ಅಲ್​ಫೋನ್ಸಾ ಜೇಮ್್ಸ, ಪೋತನೂರು ಸಂತೋಷಕುಮಾರ, ದೇವಿಕಾ ಹಿರೇಮಠ, ಐಶ್ವರ್ಯ ಪಾಟೀಲ, ಪ್ರಿಯದರ್ಶಿನಿ ಸಾಹು, ಕೃಷ್ಣಕುಮಾರಿ, ರೌನಕ್ ಕೀರ್ತಿ ಅವರು ತಲಾ ಒಂದು ಪದಕ ಪಡೆದರು.

Leave a Reply

Your email address will not be published. Required fields are marked *