ಹಸಿರಿನಿಂದ ಕಂಗೊಳಿಸುತ್ತಿದೆ ಪೊಲೀಸ್ ಠಾಣೆ

ರೋಣ: ಪೊಲೀಸ್ ಎಂದರೆ ಕೇವಲ ಬಂದೋಬಸ್ತ್, ಕೊಲೆ, ದರೋಡೆ ಪ್ರಕರಣಗಳ ತನಿಖೆ ಈ ರೀತಿಯ ಕೆಲಸಗಳಲ್ಲಿಯೇ ಜೀವನ ಕಳೆದುಹೋಗುತ್ತದೆ. ಆದರೆ, ಈ ಎಲ್ಲ ಒತ್ತಡಗಳ ನಡುವೆ ಪಟ್ಟಣದ ಠಾಣೆಯ ಪೊಲೀಸರು ಸ್ವಲ್ಪ ಡಿಫರೆಂಟಾಗಿದ್ದಾರೆ. ಠಾಣೆಯ ಆವರಣದಲ್ಲಿ ಸುಂದರವಾದ ಉದ್ಯಾನ, ಆಟದ ಮೈದಾನ, ಗಿಡ, ಮರ ಬೆಳೆಸಿ ಇತರರಿಗೆ ಮಾದರಿಯಾಗಿದ್ದಾರೆ.

ರೋಣ ಠಾಣೆಗೆ ಭೇಟಿ ಕೊಟ್ಟರೆ ಸೀಜಾದ ವಾಹನಗಳು, ಅಪಘಾತದಲ್ಲಿ ನುಚ್ಚು ನೂರಾದ ವಾಹನಗಳ ಬದಲಾಗಿ ಹಸಿರಿನ ವಾತಾವರಣ ನಮ್ಮ ಕಣ್ಮುಂದೆ ನಿಲ್ಲುತ್ತದೆ. ಸ್ವತ ಇಲ್ಲಿನ ಸಿಬ್ಬಂದಿಯೇ ಶ್ರಮದಾನದ ಮೂಲಕ ಸುಂದರ ಉದ್ಯಾನ ನಿರ್ವಿುಸಿದ್ದಾರೆ.

ಸಿಪಿಐ ಎನ್. ಮಂಜುನಾಥಸ್ವಾಮಿ ಠಾಣೆ ಹಸಿರುಮಯವಾಗಲು ಕಾರಣೀಕರ್ತರು. ಅವರ ಆಸಕ್ತಿ ಹಾಗೂ ಇಲ್ಲಿನ ಠಾಣೆಯ ಪಿಎಸ್​ಐ ಎಲ್.ಕೆ. ಜೂಲಕಟ್ಟಿ ಹಾಗೂ ಇಲ್ಲಿನ ಸಿಬ್ಬಂದಿ ಸಹಕಾರದಿಂದ ಸುಂದರವಾದ ಹೂದೋಟ, ಗಿಡ, ಮರಗಳು ಕಂಗೊಳಿಸುತ್ತಿವೆ. ಸಿಬ್ಬಂದಿಗೆ ಎಷ್ಟೇ ಒತ್ತಡವಿದ್ದರೂ ತಮ್ಮ ಕರ್ತವ್ಯದ ನಡುವೆಯೂ ಶ್ರಮದಾನದ ಮೂಲಕ ಠಾಣೆಯನ್ನು ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.

ಠಾಣೆಯ ವ್ಯಾಪ್ತಿಯಲ್ಲಿ ಬರುವ ಐದು ಎಕರೆ ಪ್ರದೇಶದಲ್ಲಿ ಅರ್ಧ ಎಕರೆಯಲ್ಲಿ ಪಾರ್ಕ್ ನಿರ್ವಿುಸಿದ್ದಾರೆ. ಇದರಲ್ಲಿ ವಿವಿಧ ಜಾತಿಯ ಹೂವಿನ ಗಿಡಗಳು, ಅಲಂಕಾರ ಬಳ್ಳಿ, ನೆಲದ ಮೇಲೆ ಹುಲ್ಲಿನ ಹಾಸು ಇದೆ. ಇನ್ನು ಎರಡು ಎಕರೆಯಲ್ಲಿ ಮಾವು, ತೆಂಗು, ದಾಳಿಂಬೆ, ಬೇವು ಸೇರಿ ಇನ್ನಿತರ ಗಿಡಗಳು ಬೆಳದು ನಿಂತಿವೆ. ಒಂದು ಎಕರೆ ಪ್ರದೇಶದಲ್ಲಿ ಕ್ರಿಕೆಟ್ ಮೈದಾನ ನಿರ್ವಿುಸಿದ್ದು, ನಸುಕಿನ ಜಾವದಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಕ್ರಿಕೆಟ್ ಆಡುತ್ತಾರೆ.

ಠಾಣೆಯ ಹಚ್ಚು ಹಸಿರುಮಯಗೊಳ್ಳಲು ಬೇಕಾದ ಕೆಲ ಸಾಮಗ್ರಿಗಳನ್ನು ದಾನಿಗಳು ನೀಡಿದ್ದಾರೆ. ಇನ್ನೂ ಕೆಲವನ್ನು ಪೊಲೀಸರೆ ತಮ್ಮ ಸ್ವಂತ ಹಣ ವಿನಯೋಗಿಸಿ ಹಸಿರು ಕ್ರಾಂತಿ ಮಾಡಿದ್ದಾರೆ ಎಂದು ರೋಣ ಪಿಎಸ್​ಐ ಎಲ್.ಕೆ. ಜೂಲಕಟ್ಟಿ ಹೇಳುತ್ತಾರೆ. ಒಟ್ಟಾರೆ ರೋಣ ಸಿಪಿಐ ಎನ್. ಮಂಜುನಾಥಸ್ವಾಮಿಯವರ ಈ ಹಸಿರು ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ.

ನಮ್ಮ ಸಿಪಿಐ ಸಾಹೇಬ್ರ ಮಾರ್ಗದರ್ಶನ ಹಾಗೂ ಎಲ್ಲ ಸಿಬ್ಬಂದಿಯ ಪರಿಶ್ರಮದಿಂದಾಗಿ ನಮ್ಮ ಠಾಣೆ ಗಿಡ, ಮರ ಸೇರಿ ವಿವಿಧ ಬಗೆಯ ಹೂ ಗಿಡಗಳು ಹಾಗೂ ಹುಲ್ಲಿನ ನೆಲ ಹಾಸಿಗೆಯಿಂದ ಹಸಿರು ಮಯವಾಗಿದೆ. ಈ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಿಗುವ ನೆಮ್ಮದಿ ಬೇರಾವ ಠಾಣೆಯಲ್ಲಿ ಸಿಕ್ಕಿಲ್ಲ

| ಎಲ್.ಕೆ. ಜೂಲಕಟ್ಟಿ, ಪಿಎಸ್​ಐ

 

 

Leave a Reply

Your email address will not be published. Required fields are marked *