ಹಳ್ಳ ಹಿಡಿದ ಕೆರೆ ತುಂಬಿಸುವ ಯೋಜನೆ

ಲಕ್ಷ್ಮೇಶ್ವರ: ತಾಲೂಕಿನ ಬಾಲೇಹೊಸೂರ ಗ್ರಾಮದಲ್ಲಿನ ಎರಡು ಕೆರೆಗಳಿಗೆ ಸಮೀಪದ ವರದಾ ನದಿಯಿಂದ ನೀರು ತುಂಬಿಸುವ ಸಣ್ಣ ನೀರಾವರಿ ಇಲಾಖೆಯ 9.45 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷಿ ಯೋಜನೆ ಒಂದೂವರೆ ವರ್ಷದಿಂದಲೂ ಕುಂಟುತ್ತಾ ಸಾಗಿ ಗ್ರಹಣ ಹಿಡಿದಂತಾಗಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2017ರ ಡಿ. 25ರಂದು ಈ ಯೋಜನೆಗೆ ಚಾಲನೆ ನೀಡಿದ್ದರು. ಆದರೆ, ಒಂದೂವರೆ ವರ್ಷದಿಂದಲೂ ಈ ಕಾಮಗಾರಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನಡೆದಿದೆ. ಗುತ್ತಿಗೆ ಪಡೆದಿರುವ ಮಂಗಳೂರಿನ ಓಷಿಯನ್ ಕನ್ಸ್​ಟ್ರಕ್ಷನ್ ಕಂಪನಿ ಗುತ್ತಿಗೆದಾರರು ಸಮರ್ಪಕವಾಗಿ ಕಾಮಗಾರಿ ನಿರ್ವಹಿಸಿದ್ದರೆ ಈ ಮಳೆಗಾಲದಲ್ಲಾದರೂ ಕೆರೆಗಳು ತುಂಬುತ್ತಿದ್ದವು. ಆದರೆ, ಗುತ್ತಿಗೆದಾರರ ನಿರ್ಲಕ್ಷ್ಯೋ ಅಥವಾ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನವೋ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ನದಿ ಪಾತ್ರದಲ್ಲಿ ನಿರ್ವಿುಸಿರುವ ಮೇಲ್ಮಟ್ಟದ ಜಲಾಗಾರ ಕಾಮಗಾರಿಯೂ ಅರ್ಧಕ್ಕೆ ನಿಂತಿದೆ. ರೈತರ ಜಮೀನುಗಳಲ್ಲಿ ಒಟ್ಟು 11 ಕಿಮೀಯಷ್ಟು ಪೈಪ್​ಲೈನ್​ಗಾಗಿ ಅಗೆದಿರುವ ಅರ್ಧಮರ್ಧ ಕಾಲುವೆಗಳು, ಅಳವಡಿಸಬೇಕಾದ ಪೈಪ್​ಗಳು ಇಲ್ಲದಿರುವುದು ಕಾಮಗಾರಿ ಕುಂಟುತ್ತಾ ಸಾಗಿರುವುದಕ್ಕೆ ಸಾಕ್ಷಿಯಾಗಿದೆ. ಇದರಿಂದ ರೈತರಿಗೆ ಉಳುಮೆ ಮಾಡಲು ಆಗದಂಥ ಸ್ಥಿತಿಯಿದೆ.

ತಮ್ಮೂರ ಕೆರೆಗೆ ನದಿ ನೀರು ಹರಿದು ಬರುತ್ತದೆ ಎಂಬ ಆಶಾಭಾವದಿಂದ ಗ್ರಾಮದ ಜನರು ದಿಂಗಾಲೇಶ್ವರ ಶ್ರೀಗಳ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಎರಡೂ ಕೆರೆಗಳ ಹೂಳೆತ್ತುವ ಕಾರ್ಯ ಕೈಗೊಂಡಿದ್ದಾರೆ. ಆದರೆ, ಸರ್ಕಾರ ಕೆರೆ ತುಂಬಿಸಲು ನೀರಿನಂತೆ ಹಣ ವಿನಿಯೋಗಿಸುತ್ತಿದ್ದರೂ ಸಂಬಂಧಪಟ್ಟವರ ಅಸಡ್ಡೆ ಮತ್ತು ಅನಾದರದಿಂದಾಗಿ ಯೋಜನೆ ಸಂಪೂರ್ಣ ಹಳ್ಳ ಹಿಡಿದಂತಾಗಿದೆ.

ಈ ಯೋಜನಾ ವ್ಯಾಪ್ತಿಯಲ್ಲಿ ತಮ್ಮನ್ನೂ ಸೇರಿ ಗ್ರಾಮದ ಅನೇಕ ರೈತರು ದಿಂಗಾಲೇಶ್ವರ ಶ್ರೀಗಳ ಮಾತಿಗೆ ಕಟ್ಟುಬಿದ್ದು ಯೋಜನೆ ಕಾರ್ಯಗತಗೊಳ್ಳಲು ಒಪ್ಪಿಗೆ ನೀಡಿದ್ದೆವು. ಆದರೆ, ಇಲಾಖೆಯ ಇಂಜಿನಿಯರ್ ಮತ್ತು ಗುತ್ತಿಗೆದಾರರು ಜಮೀನು ಹಾಳುಗೆಡವಿದ್ದಲ್ಲದೆ, ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ. ಆದ್ದರಿಂದ ರೈತರಿಗೆ ಯಾವುದೇ ತೊಂದರೆ ಮಾಡದಂತೆ ಮೂರ್ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಮತ್ತು ಇದರಿಂದ ರೈತರಿಗಾದ ನಷ್ಟ ಭರಿಸಬೇಕು.
| ಮಲ್ಲಯ್ಯ ಸಣ್ಣಯ್ಯನವರ, ಮರಡೂರ ಗ್ರಾಮದ ರೈತ

ಬಾಲೇಹೊಸೂರ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಕೆಲ ತಾಂತ್ರಿಕ ತೊಂದರೆಯಿಂದ ಕುಂಠಿತವಾಗಿದೆ. ಕಾಮಗಾರಿ ವೇಗ ಹೆಚ್ಚಿಸಿ ಆದಷ್ಟು ಬೇಗ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಈ ಬಗ್ಗೆ ನಿಗಾ ವಹಿಸಲಾಗುವುದು.
| ಗಣಪತಸಿಂಗ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್

Leave a Reply

Your email address will not be published. Required fields are marked *