ಹಳ್ಳಿಸೊಗಡಿನ ಜಾತ್ರೆ ನೆನಪಿಸಿದ ಕರಗ

ಬೆಂಗಳೂರು: ನಗರದಲ್ಲಿ ನಡೆದ ಹೂವಿನ ಕರಗ ಶಕ್ಱುತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜನರ ಸಂಖ್ಯೆ ಕಡಿಮೆ ಇತ್ತಾದರೂ ಪೌರ್ಣಿಮೆಯ ಬೆಳದಿಂಗಳಲ್ಲಿ ಶನಿವಾರ ಬೆಳಗ್ಗೆವರೆಗೆ ಮಹೋತ್ಸವ ಕಳೆಗಟ್ಟಿತು. ಲೋಕಸಭಾ ಚುನಾವಣೆ ಸೇರಿ ಸಾಲುಸಾಲು ರಜೆ ಬಂದಿದ್ದರಿಂದ ಈ ಬಾರಿ ಕರಗ ಮಹೋತ್ಸವದಲ್ಲಿ ಜನರ ಸಂಖ್ಯೆ ಕಡಿಮೆಯಾಗಿತ್ತು. ದೇವಸ್ಥಾನ ಮುಂಭಾಗ ಜನದಟ್ಟಣೆ ಕಂಡುಬಂದಿತ್ತಾದರೂ, ಬಿಬಿಎಂಪಿ ಕಡೆಯಿಂದ ದೇವಸ್ಥಾನಕ್ಕೆ ಸಾಗುವ ಮುಖ್ಯರಸ್ತೆ ಬಿಕೋ ಎನ್ನುತಿತ್ತು.

ಧರ್ಮರಾಯಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳು ದೀಪಾಲಂಕಾರ ಗಳಿಂದ ಕಂಗೊಳಿಸಿದವು. ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ಮನರಂಜನೆ ಗಾಗಿ ಇದ್ದ ಸಣ್ಣ ಜಾಯಿಂಟ್​ವ್ಹೀಲ್, ಆಟಿಕೆಗಳನ್ನು ಮಾರುವ ಬೀದಿಬದಿ ಅಂಗಡಿಗಳು, ಬಾಯಿರುಚಿ ತಣಿಸಲು ಇದ್ದ ಆಹಾರದ ಮಳಿಗೆಗಳು ಹಳ್ಳಿಸೊಗಡಿನ ಜಾತ್ರೆಯನ್ನು ನೆನಪಿಸಿತು.

ವಾಹನದಟ್ಟಣೆ: ಪುರಭವನದಿಂದ ಕೃ.ರಾ. ಮಾರುಕಟ್ಟೆ ಕಡೆ ಹೋಗುವ ರಸ್ತೆಬದಿಯಲ್ಲಿ ಬೈಕ್ ರ್ಪಾಂಗ್​ಗೆ ಅವಕಾಶ ಕಲ್ಪಿಸಲಾಗಿತ್ತು. ಈ ಕಾರಣದಿಂದಲೇ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಕೆಲವರು ದಾಸಪ್ಪ ಆಸ್ಪತ್ರೆಯ ಆವರಣದಲ್ಲಿ ಹಾಗೂ ಮತ್ತೆ ಕೆಲವರು ಟೌನ್​ಹಾಲ್ ಮುಂಭಾಗ ರ್ಪಾಂಗ್ ಮಾಡಿದ್ದರು.

ತಂಪು ಗಾಳಿಯಲ್ಲಿ ಸಂಭ್ರಮದ ಹಬ್ಬ: ನಗರದಲ್ಲಿ ಆಗಾಗ ಮಳೆ ಸುರಿಯುತ್ತಿರುವುದರಿಂದ ಕೊಂಚ ತಂಪು ವಾತಾವರಣ ಕಂಡುಬರುತ್ತಿದೆ. ಇದು ಕರಗದಲ್ಲಿ ಪಾಲ್ಗೊಂಡಿದ್ದ ಭಕ್ತರ ಉತ್ಸಾಹವನ್ನು

ಇಮ್ಮಡಿಗೊಳಿಸಿತು. ತಡರಾತ್ರಿ 2 ಗಂಟೆ ಹೊತ್ತಿಗೆ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಶ್ರೀ ಧರ್ಮರಾಯಸ್ವಾಮಿ ಹಾಗೂ ದ್ರೌಪದಿದೇವಿಯ ಮಹಾ ರಥೋತ್ಸವ ಹೊರಡುವ ವೇಳೆಗೆ ತಿಗಳರಪೇಟೆ, ನಗರ್ತಪೇಟೆ ಮತ್ತಿತರ ಬೀದಿಗಳಲ್ಲಿ ನಿಧಾನವಾಗಿ ಜನ ಸೇರತೊಡಗಿದರು. ಹಲವರು ಮರ, ಮಹಡಿಗಳನ್ನೇರಿ ಕರಗ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಕರಗ ನೋಡಲು ಮುಗಿಬಿದ್ದ ಭಕ್ತರು

ದೇವಸ್ಥಾನದಲ್ಲಿ ಧಾರ್ವಿುಕ ಆಚರಣೆಗಳು ನೆರವೇರಿದ ಬಳಿಕ ಎನ್. ಮನು ಅವರು ಕರಗವನ್ನು ಹೊತ್ತು ಹೊರಬಂದಾಗ ಒಂದೇ ಬಾರಿಗೆ ಜನರ ಬಾಯಲ್ಲಿ ‘ಗೋವಿಂದ… ಗೋವಿಂದ…’ ಘೋಷಣೆಗಳು ಕೇಳಿಬಂದವು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಕರಗದ ವೈಭವನ್ನು ತಮ್ಮ ಮೊಬೈಲ್​ಗಳಲ್ಲಿ ಸೆರೆಹಿಡಿದರು. ಕೈಯಲ್ಲಿ ಖಡ್ಗ ಹಿಡಿದು ಕರಗ ರಕ್ಷಣೆಗೆ ನಿಂತಿದ್ದ ವೀರಕಕುಮಾರರು ಜನರ ಗುಂಪು ಚದುರಿಸಿಕೊಂಡು ಕರಗಕ್ಕೆ ದಾರಿ ಮಾಡಿಕೊಡುತ್ತ ಸಾಗಿದರು. ದೇವಾಲಯ ಹಾಗೂ ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಗರ ಸಂಚಾರಕ್ಕೆ ಹೊರಟ ‘ಹೂವಿನ ಕರಗ’ಕ್ಕೆ ರಸ್ತೆಯುದ್ದಕ್ಕೂ ನೆರೆದಿದ್ದ ಭಕ್ತರು ಮಲ್ಲಿಗೆ ಹೂವಿನ ಮಳೆಗರೆದರು. ಕರಗದೊಂದಿಗೆ ಉತ್ಸವ ಮೂರ್ತಿಗಳ ಮೆರವಣಿಗೆಯೂ ಸಾಗಿತು. ಈ ವೇಳೆ ನಾನಾ ಭಾಗಗಳಿಂದ ಆಗಮಿಸಿದ್ದ ತೇರು ಹಾಗೂ ಪಲ್ಲಕ್ಕಿ ರಥಗಳು ದೇವಾಲಯದ ಸುತ್ತಮುತ್ತಲ ಬೀದಿಗಳನ್ನು ಸೇರಿ ಭಕ್ತರಿಗೆ ದರ್ಶನ ನೀಡಿದವು. ಬೆಳಗ್ಗೆ 8.30ಕ್ಕೆ ದೇವಸ್ಥಾನಕ್ಕೆ ಮರಳಿದವು.

11 ದಿನಗಳ ಕರಗಕ್ಕೆ ಇಂದು ತೆರೆ

ವಹ್ನಿಕುಲ ಕ್ಷತ್ರೀಯ ಸಮುದಾಯ ನಡೆಸುವ 11 ದಿನಗಳ ಕರಗ ಮಹೋತ್ಸವಕ್ಕೆ ಭಾನುವಾರ (ಏ.21) ತೆರೆಬೀಳಲಿದೆ. ಉತ್ಸವದ 9ನೇ ದಿನವಾದ ಶುಕ್ರವಾರ ರಾತ್ರಿ ಹೂವಿನ ಕರಗ ಶಕ್ತ್ಯುತ್ಸವ ನಡೆಯಿತು. ಶನಿವಾರ ಭಾರತ ಕಥಾ ಪ್ರವಚನ ಮತ್ತು ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಗಾವು ಶಾಂತಿ ನಡೆಯಿತು. ಭಾನುವಾರ ಸಂಜೆ ವಸಂತೋತ್ಸವ, ದೇವತಾ ಉತ್ಸವ ನಡೆಯಲಿದ್ದು, ನಂತರ ಧ್ವಜಾವರೋಹಣ ಮೂಲಕ ಉತ್ಸವಕ್ಕೆ ತೆರೆಬೀಳಲಿದೆ.

Leave a Reply

Your email address will not be published. Required fields are marked *