ಹಳಿ ಮೇಲೆ ಕಚ್ಚಾ ಬಾಂಬ್

ನವದೆಹಲಿ: ಮುಷ್ಕರಕ್ಕೆ ರಾಷ್ಟ್ರವ್ಯಾಪಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಗೋವಾ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಕೇರಳದಲ್ಲಿ ಹರತಾಳ ತೀವ್ರವಾಗಿ ನಡೆದಿದೆ. ಈ ಮಧ್ಯೆ, ಪಶ್ಚಿಮ ಬಂಗಾಳದಲ್ಲಿ ರೈಲು ಹಳಿ ಮೇಲೆ ಕಚ್ಚಾ ಬಾಂಬ್ ಇರಿಸಿದ್ದರಿಂದ ರೈಲು ಸಂಚಾರ ವ್ಯತ್ಯಯಗೊಂಡಿತ್ತು. ಹಲವು ರಾಜ್ಯಗಳಲ್ಲಿ ಬಸ್ ಸಂಚಾರ, ಬ್ಯಾಂಕಿಂಗ್ ಸೇವೆ ವ್ಯತ್ಯಯವಾಗಿದ್ದವು. ಶಿಕ್ಷಣ ಸಂಸ್ಥೆ, ಅಂಚೆ ಕಚೇರಿಗಳು ಮುಚ್ಚಿದ್ದವು. ಆದರೆ, ಕೆಲ ರಾಜ್ಯಗಳಲ್ಲಿ ಬಸ್ ಸಂಚಾರ ಎಂದಿನಂತೆ ಇತ್ತು. ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಿದವು. ದೆಹಲಿಯಲ್ಲಿ ಮಂಡಿ ಹೌಸ್​ನಿಂದ ಸಂಸತ್ ಭವನದವರೆಗೆ ಬೃಹತ್ ರ‍್ಯಾಲಿ ನಡೆಯಿತು.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಹಬ್ರಾ ರೈಲು ನಿಲ್ದಾಣದಲ್ಲಿ ಹಳಿ ಮೇಲೆ ಇರಿಸಿದ್ದ ಐದು ಜೀವಂತ ಕಚ್ಚಾ ಬಾಂಬ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕಾರಣ ಸೀಲ್ದಾ-ಬೋಂಗೌನ್ ಮಧ್ಯೆ ರೈಲು ಸಂಚಾರ ಹಲವು ತಾಸು ವಿಳಂಬವಾಯಿತು. ಹೌರಾದಲ್ಲಿ ಬಸ್​ಗಳ ಮೇಲೆ ಕಲ್ಲುತೂರಾಟ ನಡೆಸಿದ್ದರಿಂದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ದಕ್ಷಿಣ ಕೋಲ್ಕತದಲ್ಲಿ ರಸ್ತೆ ತಡೆ ನಡೆಸಿ ಸಂಚಾರಕ್ಕೆ ಅಡಚಣೆ ಮಾಡಿದ ಆರೋಪ ಮೇಲೆ ಸಿಪಿಐ ಶಾಸಕರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೇರಳದಲ್ಲಿ ಎರಡನೇ ದಿನ ಕೂಡ ರೈಲು ತಡೆ ಚಳವಳಿ ಅನೇಕ ಕಡೆ ನಡೆಯಿತು. ತಿರುವನಂತಪುರದ ಸಿಬಿಐ ಪ್ರಧಾನಶಾಖೆಗೆ ನುಗ್ಗಿದ ಪ್ರತಿಭಟನಾಕಾರರು ದಾಂಧಲೆ ನಡೆಸಿದರು. ಏಜೆನ್ಸೀಸ್

ದೇಶವ್ಯಾಪಿ ನಡೆದ ಕಾರ್ವಿುಕರ ಮುಷ್ಕರ ಕಾಂಗ್ರೆಸ್ ಪ್ರೇರಿತವಲ್ಲ. ಕಾರ್ವಿುಕರ ಹೋರಾಟ, ಬೇಡಿಕೆ ನ್ಯಾಯಯುತವಾಗಿದೆ. ಮುಷ್ಕರದಲ್ಲಿ ಬಿಜೆಪಿ ಬೆಂಬಲಿತ ಕೆಲವು ಸಂಘಟನೆಗಳನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ವಿುಕ ಸಂಘಟನೆಗಳು ಸಕ್ರಿಯವಾಗಿ ಭಾಗವಹಿಸಿವೆ. ಕೇಂದ್ರ ಸರ್ಕಾರ ಕೂಡಲೇ ಕಾರ್ವಿುಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮ ವಹಿಸಬೇಕು.

| ಸಿದ್ದರಾಮಯ್ಯ ಮಾಜಿ ಸಿಎಂ