ಹಳಿ ತಪ್ಪಿದ ಮಾದ ಮಾನಸಿ

‘ಅಭಿನೇತ್ರಿ’ ಚಿತ್ರದ ಮೂಲಕ ಗುರುತಿಸಿಕೊಂಡಿದ್ದ ಸತೀಶ್ ಪ್ರಧಾನ್ ನಿರ್ದೇಶನದ ‘ಮಾದ ಮತ್ತು ಮಾನಸಿ’ಯಲ್ಲಿ ವಿಶೇಷವಾದ ಕಥೆಯೇನೂ ಇಲ್ಲ. ಸರಳವಾಗಿ ಹೇಳಬಹುದಾದ ಚಿತ್ರಕಥೆಯನ್ನು ಜಟಿಲಗೊಳಿಸಿದ್ದಾರೆ. ಮಾದನಿಗೆ (ಪ್ರಜ್ವಲ್), ಮಾನಸಿ (ಶ್ರುತಿ) ಮೇಲೆ ಪ್ರೀತಿ. ಆದರೆ ಮಾನಸಿಗೆ ಸಹಪಾಠಿ ದೀಪಕ್ ಮೇಲೆ ಒಲವು. ಹಾಗಾಗಿ, ದೀಪಕ್ ಮತ್ತು ಮಾನಸಿಯನ್ನು ಒಂದುಮಾಡುವ ಹೊಣೆ ಮಾದನ ಪಾಲಿಗೆ ಬರುತ್ತದೆ. ಹೀಗೆ ಶುರುವಾಗುವ ಪಯಣದಲ್ಲಿ ಜತೆಯಾಗುವ ಸಂಕಷ್ಟಗಳೇ ಚಿತ್ರದ ಜೀವಾಳ. ಒಂದರ ಮೇಲೊಂದು ಆಘಾತಗಳು ಮಾದನಿಗೆ ಎದುರಾಗುತ್ತಲೇ ಹೋಗುತ್ತವೆ. ಅಂತಿಮವಾಗಿ ಮಾನಸಿ-ದೀಪಕ್ ಜತೆಯಾಗುತ್ತಾರಾ? ಅಥವಾ ಮಾದನ ಮೇಲೆ ಮಾನಸಿಗೆ ಲವ್ ಆಗುತ್ತಾ? ಅನ್ನೋದೆ ಕಥಾಕೌತುಕ. ಚಿತ್ರದ ನಿರ್ವಣದ ಜತೆಗೆ ಸಂಗೀತ ನಿರ್ದೇಶನ ಕೂಡ ಮನೋಮೂರ್ತಿ ಅವರದ್ದೇ ಆಗಿರುವುದರಿಂದ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹಾಗಂತ ಎಲ್ಲ ಹಾಡುಗಳು ಮಧುರವಾಗಿದೆ ಎಂದಲ್ಲ! ಚಂದ್ರಶೇಖರ್ ಛಾಯಾಗ್ರಹಣಕ್ಕೆ ಒಂದಂಕ ಹೆಚ್ಚಿಗೆ ನೀಡಲೇಬೇಕು. ಆ ಮಟ್ಟಿಗೆ ಅವರ ಕೆಲಸ ತೆರೆಮೇಲೆ ಎದ್ದು ಕಾಣುತ್ತದೆ. ಪ್ರಜ್ವಲ್ ಮತ್ತು ಶ್ರುತಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಟ್ಟಾರೆ, ಹಳಿ ತಪ್ಪಿದ ಮಾದ ಮತ್ತು ಮಾನಸಿಯ ಲವ್ಸ್ಟೋರಿಗೆ ‘ವಿಜಯವಾಣಿ’ ಓದುಗ ವಿಮರ್ಶಕ ನೀಡಿದ ಸರಾಸರಿ ಅಂಕ 10ಕ್ಕೆ 5, ಸ್ಟಾರ್: **

ಚಿತ್ರ: ಮಾದ ಮತ್ತು ಮಾನಸಿ ನಿರ್ದೇಶನ: ಸತೀಶ್ ಪ್ರಧಾನ್ ನಿರ್ವಣ: ಮನೋಮೂರ್ತಿ ಪಾತ್ರವರ್ಗ: ಪ್ರಜ್ವಲ್ ದೇವರಾಜ್, ಶ್ರುತಿ ಹರಿಹರನ್, ರಂಗಾಯಣ ರಘು, ಶೋಭರಾಜ್, ಬುಲೆಟ್ ಪ್ರಕಾಶ್ ಮುಂತಾದವರು.


ಕ್ಲೈಮ್ಯಾಕ್ಸ್ ನೀರಸ

ತಮ್ಮ ಪಾತ್ರಗಳಿಗೆ ಪ್ರಜ್ವಲ್ ಮತ್ತು ಶ್ರುತಿ ಹರಿಹರನ್ ನ್ಯಾಯ ಒದಗಿಸಿದ್ದಾರೆ. ರಂಗಾಯಣ ರಘು ಉತ್ತಮ ಅಭಿನಯ ನೀಡಿದ್ದಾರೆ. ಎರಡು ಹಾಡುಗಳು ಉತ್ತಮವಾಗಿ ಮೂಡಿಬಂದಿದ್ದು, ಮನಸ್ಸಿನಲ್ಲಿ ಉಳಿಯುತ್ತವೆ. ಸಾಹಸಮಯ ಹೊಡೆದಾಟದ ದೃಶ್ಯ ಚೆನ್ನಾಗಿವೆ. ಆದರೆ ಕ್ಲೈಮ್ಯಾಕ್ಸ್ ನೀರಸ ಎನಿಸುತ್ತದೆ.

|ಶೇಖರ್ ಉಪ್ಪಳ್ಳಿ, ಚಿಕ್ಕಮಗಳೂರು

10 ಕ್ಕೆ 5


ಡಬಲ್ ಮೀನಿಂಗ್ ಆಭಾಸ

ಸಾಹಸ ಸನ್ನಿವೇಶಗಳು ಕಿಕ್ ಕೊಡುತ್ತವೆ. ಆದರೆ ಡಬ್ಬಲ್ ಮೀನಿಂಗ್ ಡೈಲಾಗ್ ಆಭಾಸ ಉಂಟು ಮಾಡುತ್ತವೆ. ಪಡ್ಡೆಗಳಿಗೆ ಇಷ್ಟವಾಗಬಹುದೇನೋ? ಆದರೆ, ಸರಳವಲ್ಲದ ಚಿತ್ರಕಥೆಯಿಂದಾಗಿ ಪ್ರೇಕ್ಷಕರ ಮೊದಲಾರ್ಧದಲ್ಲೇ ನಿದ್ದೆಗೆ ಜಾರುತ್ತಾನೆ.

| ಸಿ.ಆರ್. ಜಯಂತ್. ಮೈಸೂರು

10 ಕ್ಕೆ 4


ಹಿತ ನೀಡುವ ಛಾಯಾಗ್ರಹಣ

ಭಾವನಾತ್ಮಕ ಸನ್ನಿವೇಶಗಳು ಚೆನ್ನಾಗಿ ಮೂಡಿಬಂದಿವೆ. ಕ್ಯಾಮರಾ ಕೆಲಸ ಕಣ್ಣಿಗೆ ಹಿತ ನೀಡುವಂತಿದೆ. ಆದರೆ ನೀರಸ ನಿರೂಪಣೆ ಯಿಂದಾಗಿ ಅಲ್ಲಲ್ಲಿ ಬೋರ್ ಹೊಡೆಯುತ್ತದೆ.

| ತುಕಾರಾಮ ನಿಕ್ಕಂ ಬೆಳಗಾವಿ

10 ಕ್ಕೆ 6


ಜಾಳಾದ ನಿರೂಪಣೆ

ಸರಳ ಪ್ರೇಮಕಥೆಗೆ ನಿರ್ದೇಶಕರು ಅನಗತ್ಯ ಟ್ವಿಸ್ಟ್ ನೀಡಲು ಹೋಗಿ ಚಿತ್ರಕಥೆಯನ್ನು ಜಾಳುಜಾಳಾಗಿಸಿದ್ದಾರೆ. ಒಂದು ಗಟ್ಟಿ ನಿರೂಪಣೆ ಇಲ್ಲದೆ ‘ಮಾದ ಮತ್ತು ಮಾನಸಿ’ ನಲುಗುತ್ತದೆ. ಪ್ರಜ್ವಲ್ ಮತ್ತು ಶ್ರುತಿ ಉತ್ತಮವಾಗಿ ನಟಿಸಿದ್ದಾರೆ. ಸಂಗೀತ ಪರವಾಗಿಲ್ಲ ಎನಿಸಿದರೂ, ಹಿನ್ನೆಲೆ ಸಂಗೀತದ ಅಬ್ಬರ ಜಾಸ್ತಿಯಾಯಿತು.

| ಗೋವಿಂದ ರಾಜು ಬೆಂಗಳೂರು

10 ಕ್ಕೆ 4


ಹಾಡುಗಳು ಚೆನ್ನಾಗಿವೆ

ಕಥೆಯಲ್ಲಿ ಹೊಸತನವಿಲ್ಲದಿದ್ದರೂ, ಮನೋಮೂರ್ತಿ ಅವರ ಸಂಗೀತದ ಹಾಡುಗಳು ಕಿವಿಗೆ ಇಂಪು ನೀಡುತ್ತವೆ. ಚಂದ್ರಶೇಖರ್ ಅವರ ಛಾಯಾಗ್ರಹಣ ಇಷ್ಟವಾಗುತ್ತದೆ.

ಗಣೇಶ್ ಮಂಗಳೂರು

10 ಕ್ಕೆ 7


ನಿರೀಕ್ಷೆ ಇಟ್ಟರೆ ನಿರಾಸೆ ಖಚಿತ

ಹಳಸಲು ಪ್ರೇಮಕಥೆ ಹೊಂದಿರುವ ಈ ಚಿತ್ರದಲ್ಲಿ ಸಂಭಾಷಣೆ ಕೂಡ ಆಕರ್ಷಣೀಯವಾಗಿಲ್ಲ. ಸಂಗೀತ ಸಂಯೋಜನೆ ಉತ್ತಮವಾಗಿದ್ದು, ಒಂದೆರಡು ಹಾಡುಗಳು ಕೇಳುವಂತಿವೆ. ಶ್ರುತಿ ಹರಿಹರನ್ ಗ್ಲಾಮರ್ನಿಂದ ಸೆಳೆಯುತ್ತಾರೆ. ಒಂದು ಸಲ ಕಷ್ಟಪಟ್ಟು ನೋಡಬಹುದು. ನಿರೀಕ್ಷೆ ಇಟ್ಟುಕೊಂಡು ಹೋದರೆ ನಿರಾಶೆ ಖಚಿತ.

ವಿನೋದ ಕುಂದಗೋಳ, ಹುಬ್ಬಳ್ಳಿ

10 ಕ್ಕೆ 5


ಚಿತ್ರ-ವಿಚಿತ್ರ ತಿರುವು

ಚಿತ್ರದ ಕಥೆಯಲ್ಲಿ ವಿಶೇಷತೆ ಇಲ್ಲ. ಇಡೀ ಸಿನಿಮಾ ಚಿತ್ರ-ವಿಚಿತ್ರ ತಿರುವುಗಳಿಂದ ಕೂಡಿದೆ. ಸಾಹಸ ದೃಶ್ಯಗಳು ಚೆನ್ನಾಗಿವೆ. ಆದರೆ ಕಥೆಗೆ ಅದು ಪೂರಕವಾಗಿಲ್ಲ.

| ಪ್ರಕಾಶ ಮೆಟಗಾರ ವಿಜಯಪುರ

10 ಕ್ಕೆ 6


ಸಾಧಾರಣ ಸಿನಿಮಾ

ಚಿತ್ರದ ಕಥೆ ಪರವಾಗಿಲ್ಲ ಎನ್ನುವಂತಿದೆ. ಸಾಹಸ ದೃಶ್ಯಗಳು ಚೆನ್ನಾಗಿವೆ. ಸಂಗೀತ ಹೇಳಿಕೊಳ್ಳುವಷ್ಟೇನೂ ಚೆನ್ನಾಗಿಲ್ಲ. ಲವ್ಸ್ಟೋರಿ ಇರುವುದರಿಂದ ಯುವಕರಿಗೆ ಇಷ್ಟವಾಗಬಹುದು.

| ಗುರುಮೂರ್ತಿ ಕಲ್ಕುಂಟೆ ಚಿತ್ರದುರ್ಗ

10 ಕ್ಕೆ 5

Leave a Reply

Your email address will not be published. Required fields are marked *