ಹಳಿಯಾಳ ಪಟ್ಟಣದ ಸ್ವಚ್ಛತೆ, ಕೆರೆ ಅಭಿವೃದ್ಧಿಗೆ ಪಣ

ಹಳಿಯಾಳ:ಪಟ್ಟಣದ ಸ್ವಚ್ಛತೆ ಹಾಗೂ ಕೆರೆಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಇಲ್ಲಿಯ ವಿವಿಧ ಸಂಘಟನೆಗಳು ಕಾರ್ಯ ಯೋಜನೆಯನ್ನು ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಂಕಲ್ಪ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರು ಪಟ್ಟಣ ಹಾಗೂ ಕೆರೆಗಳ ಅಭಿವೃದ್ಧಿಗಾಗಿ ಶನಿವಾರ ವಿವಿಧ ಸಂಘ ಸಂಸ್ಥೆಗಳ ಸಭೆಯನ್ನು ಕರೆದ ಹಿನ್ನೆಲೆಯಲ್ಲಿ ಅಲ್ಲಿ ಮಂಡಿಸಬೇಕಾದ ವಿಷಯಗಳ ಬಗ್ಗೆ ರ್ಚಚಿಸಲು ಗುರುವಾರ ಪಟ್ಟಣದಲ್ಲಿ ಸಭೆ ನಡೆಯಿತು.

ಕೆರೆ ಅಭಿವೃದ್ಧಿ: ಗುತ್ತಿಗೆರೆ ಕೆರೆ ಹಾಗೂ ಕಿಲ್ಲಾ ಕೆರೆಯ ಬಳಿ ದೇಶ ವಿದೇಶಗಳ ಪಕ್ಷಿಗಳು ಪ್ರತಿ ವರ್ಷ ವಲಸೆ ಬರುತ್ತಿರುವುದರಿಂದ ಕೆರೆಯ ಮಧ್ಯದಲ್ಲಿ ನಡುಗಡ್ಡೆ ನಿರ್ವಿುಸಿ ಪಕ್ಷಿಗಳಿಗೆ ಆಶ್ರಯ ಹಾಗೂ ಆಹಾರ ಒದಗಿಸುವಂಥ ಸಸಿಗಳನ್ನು ನೆಡುವ ವಿಚಾರ ಪ್ರಸ್ತಾಪವಾಯಿತು. ಕೆರೆಗಳ ನಿರ್ವಹಣೆಗೆ ಸಮಿತಿಯ ರಚನೆ, ವಾಕಿಂಗ್ ಪಾಥ್​ನಲ್ಲಿ ಸಿಸಿಟಿವಿ ಅಳವಡಿಸುವ ಸಲಹೆಗಳು ಬಂದವು. ಮೋತಿಕೆರೆ ಹಾಗೂ ಡೌಗೇರಿ ಕೆರೆಯ ಅಭಿವೃದ್ಧಿ ಕಾಮಗಾರಿಯು ವಿಳಂಬವಾಗುತ್ತಿರುವುದನ್ನು ಸಚಿವರ ಗಮನಕ್ಕೆ ತರಲು ನಿರ್ಧರಿಸಲಾಯಿತು.

ಸ್ವಚ್ಛತೆ: ಪಟ್ಟಣ ಬೆಳೆಯುತ್ತಿರುವುದರಿಂದ ಒಣ ಕಸವನ್ನು ವೈಜ್ಞಾನಿಕ ಪದ್ಧತಿಯಲ್ಲಿ ಸಂಗ್ರಹಿಸಲು ವ್ಯಾಕ್ಯೂಮ್ ಕ್ಲೀನರ್ ವಾಹನಗಳನ್ನು ಪುರಸಭೆಗೆ ಮಂಜೂರು ಮಾಡಿಸಲು ಸಭೆಯಲ್ಲಿ ಸಲಹೆ ಬಂದವು. ಗಣೇಶ ಕಲ್ಯಾಣ ಮಂಟಪದಿಂದ ಹವಗಿಯ ಪದವಿ ಕಾಲೇಜ್​ವರೆಗೆ ಸೈಕಲ್ ಸಂಚಾರ ಮಾಡಲು ಸೈಕಲ್ ಪಾಥ್ ನಿರ್ವಿುಸಲು ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲು ಸಭೆ ತೀರ್ವನಿಸಿತು. ಸಭೆಯಲ್ಲಿ ರ್ಚಚಿಸಿದ ವಿಷಯಗಳನ್ನು ಆಧರಿಸಿ ಪಟ್ಟಣದ ಸ್ವಚ್ಛತೆ ಹಾಗೂ ಕೆರೆ ಅಭಿವೃದ್ಧಿಯ ಬಗ್ಗೆ ಮನವಿ ಪತ್ರ ಸಿದ್ಧಪಡಿಸಿ ಸಚಿವರಿಗೆ ಸಲ್ಲಿಸಲು ತೀರ್ವನಿಸಲಾಯಿತು.

ಸಭೆಯಲ್ಲಿ ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿ, ಸಿಂಹಕೂಟದ ಅಧ್ಯಕ್ಷ ಮಹಾಂತೇಶ ಹಿರೇಮಠ, ಜಯ ಕರ್ನಾಟಕ ಸಂಘದ ಅಧ್ಯಕ್ಷ ವಿಲಾಸ ಕಣಗಲಿ, ಪತಂಜಲಿ ಸಂಸ್ಥೆಯ ಕಮಲ ಸಿಕ್ವೇರಾ, ಮಂಜು ಕರಾಟೆ ಹಾಗೂ ಡಾನ್ಸ್ ಸ್ಕೂಲ್ ಮುಖ್ಯಸ್ಥರಾದ ಎಂ.ಮಂಜು, ಜೀಜಾಮಾತಾ ಮಹಿಳಾ ಸಂಘದ ಭಾರತಿ ಬಿರ್ಜೆ, ಪ್ರಮುಖರಾದ ಸೈಪ್, ಚಂದ್ರಕಾಂತ, ಪತ್ರಕರ್ತರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *