ಹಳಿಯಾಳ: ಜನತಾ ಕರ್ಫ್ಯೂ ಜಾರಿಯಿದ್ದರೂ ಪಟ್ಟಣದಲ್ಲಿ ಅನಗತ್ಯವಾಗಿ ಬೈಕ್ ಮೇಲೆ ಅಲೆದಾಡುತ್ತಿದ್ದವರಿಗೆ ಭಾನುವಾರ ಹಳಿಯಾಳ ಪೊಲೀಸರು ಬಿಸಿ ಮುಟ್ಟಿಸಿದ್ದು, ಬೈಕ್ಗಳನ್ನು ಸೀಜ್ ಮಾಡಿ ದಂಡ ವಿಧಿಸಿದ್ದಾರೆ.
10 ಗಂಟೆ ನಂತರ ಶಿವಾಜಿ ವೃತ್ತದಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು 50ಕ್ಕೂ ಹೆಚ್ಚು ಬೈಕ್ಗಳನ್ನು ಹಿಡಿದರು. ಅಲ್ಲದೆ, ಮಾಸ್ಕ್ ಧರಿಸದವರನ್ನು ಹಿಡಿದು ಬುದ್ದಿವಾದ ಹೇಳಿ ದಂಡ ಹಾಕಿದರು.
ಈ ವೇಳೆ ಪತ್ರಕರ್ತರೊಂದಿಗೆ ಸಿಪಿಐ ಡಾ. ಮೋತಿಲಾಲ ಪವಾರ ಮಾತನಾಡಿ, ಎರಡನೇ ಅಲೆ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು ಎಂದರು. ಅನಗತ್ಯವಾಗಿ ಸುತ್ತಾಡುವವರ ಬೈಕ್ಗಳನ್ನು ಸೀಜ್ ಮಾಡಿದರೆ ಪೊಲೀಸರಿಗೆ ನೂರಾರು ಪೋನ್ ಕಾಲ್ಗಳು ಬರುತ್ತವೆ. ಪೊಲೀಸರಿಗೆ ಸೇವೆ ಮಾಡಲು ಬಿಡಿ, ನಮ್ಮ ಕೆಲಸಕ್ಕೆ ಅಡ್ಡಿಪಡಿಸಬೇಡಿ ಎಂದು ಮನವಿ ಮಾಡಿದರು. ಪಿಎಸ್ಐ ಶಿವಾನಂದ ನಾವದಗಿ ಮಾತನಾಡಿ, ಕಳೆದ ಮೂರು ದಿನಗಳಿಂದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಈವರೆಗೆ ನೂರಕ್ಕೂ ಹೆಚ್ಚು ಬೈಕ್ ಹಿಡಿದು ದಂಡ ಹಾಕಿ, ಬೈಕ್ ಸವಾರರಿಗೆ ಬುದ್ದಿವಾದ ಹೇಳಿ ಕಳಿಸಿದ್ದೇವೆ. ಹೆಲ್ಮೆಟ್ ಧರಿಸದ ಹಾಗೂ ಮಾಸ್ಕ್ ಹಾಕದವರಿಂದ ಈವರೆಗೆ 15 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದರು. ಕ್ರೈಮ್ ಪಿಎಸ್ಐ ಎಸ್. ಹುಕ್ಕೇರಿ ಹಾಗೂ ಎಎಸ್ಐ ಮಹಾಬಲೇಶ್ವರ ಗಡೇರ್, ಯಲ್ಲಪ್ಪ ಮಾದರ, ಸೊಲ್ಲಾಪುರಿ ಹಾಗೂ ಸಿಬ್ಬಂದಿ ಇದ್ದರು.