ಹಳಿಗೆ ಮರಳಲಿ ಬದುಕು

| ಪದ್ಮಶ್ರೀ ಎಸ್​ ರಾವ್, ಆಪ್ತ ಸಮಾಲೋಚಕರು, ಸೈಕೋಥೆರಪಿಸ್ಟ್

ಚಿಕ್ಕ ಪುಟ್ಟ ಸಂಗತಿಗಳಿಗೆ ಅತಿಯಾಗಿ ಮನಸ್ಸನ್ನು ಕೆಡಿಸಿಕೊಂಡು ಮನೆಯವರ ಮನಸ್ಥಿತಿಯನ್ನೂ ಹಾಳುಮಾಡುವ ಮಹಿಳೆಯರು ಸಾಕಷ್ಟಿದ್ದಾರೆ. ಸಮಸ್ಯೆಗಳು ಬೆಟ್ಟದಷ್ಟಿರಬಹುದು. ಆದರೆ, ನಕಾರಾತ್ಮಕ ಭಾವನೆ, ಒತ್ತಡಗಳಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ಸಮಸ್ಯೆ ನಿರ್ವಹಿಸಲು ಬೇಕಿರುವುದು ವಿದ್ಯೆಯಲ್ಲ, ದುಡ್ಡಲ್ಲ, ಜೀವನಕೌಶಲ ಮಾತ್ರ. ಅದನ್ನು ರೂಪಿಸಿಕೊಳ್ಳಲು ಸಹಾಯ ಪಡೆದುಕೊಳ್ಳುವುದು ಜಾಣತನ.

ಎರಡು ತಿಂಗಳ ಹಿಂದೆ 24ರ ವಯಸ್ಸಿನ ಹೆಣ್ಣುಮಗಳೊಬ್ಬಳು ಅಳುತ್ತ ತಲೆತಗ್ಗಿಸಿ ಏನೂ ಮಾತಾಡುವ ಸ್ಥಿತಿಯಲ್ಲಿಲ್ಲದೆ ಬಂದು ಕುಳಿತಳು. ಆಕೆಗೆ ಮದುವೆಯಾಗಿ 6 ವರ್ಷಗಳಾಗಿತ್ತು. ಎರಡು ಸಣ್ಣ ಮಕ್ಕಳು. ಮಗನಿಗೆ 5 ವರ್ಷ, ಮಗಳಿಗೆ 3 ವರ್ಷ. ಗಂಡ ದಿನವೂ ಮನೆಗೆ ಬರುವಾಗ ಮದ್ಯಪಾನ ಮಾಡಿ ಹೆಂಡತಿ, ಮಕ್ಕಳನ್ನು ಹೊಡೆಯುತ್ತಿದ್ದ. ತೌರುಮನೆಯಿಂದ ಹಣ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದ. ಇದರಿಂದ ಆಕೆ ಖಿನ್ನತೆಗೆ ಒಳಗಾಗಿ, ಪರಿಸ್ಥಿತಿಯನ್ನು ಎದುರಿಸುವ ಶಕ್ತಿಯನ್ನು ಕಳೆದುಕೊಂಡು ಆತ್ಮಹತ್ಯೆಯ ನಿರ್ಧಾರ ಮಾಡಿದ್ದಳು. ಅವಳಿಗೆ ಸಮಾಧಾನ ತುಂಬಿ, ವಿರಾಮ-ಆರಾಮ ವ್ಯಾಯಾಮಗಳನ್ನು ಮಾಡಿಸಿ, ಮನೋಲ್ಲಾಸ ಬರುವಂತೆ ಮಾಡಿ ಪುನಃ ವಾರದ ಬಳಿಕ ಬರಲು ಹೇಳಿ ಕಳುಹಿಸಿಕೊಡಲಾಯಿತು. ಮತ್ತೆ ಬಂದಾಗ ಆಕೆ ಪರಿಸ್ಥಿತಿಯನ್ನು ಎದುರಿಸುವ ಶಕ್ತಿಯನ್ನು ಸ್ವಲ್ಪಮಟ್ಟಿಗೆ ಗಳಿಸಿದ್ದಳು. ಈಗ ಸುಧಾರಣೆಯಾಗಿದ್ದು, ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದಾಳೆ. ಹೀಗೆ, ಅನೇಕರು, ಅನೇಕ ಕಾರಣಗಳಿಂದ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಸಮತೋಲನ ಮಾಡಲಾಗದೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಇನ್ನೊಂದು, ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಘಟನೆ. ಪತಿ ಸಂಶಯ ಪಡುತ್ತಾನೆ ಎಂದು ಚಿಕ್ಕ ಮಗುವನ್ನೂ ಕಟ್ಟಿಕೊಂಡು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು. ಈ ಎರಡೂ ಘಟನೆಗಳಲ್ಲಿ ಸಮಸ್ಯೆ ಬೇರೆ ಇರಬಹುದು, ಆದರೆ ಅಂತಿಮ ಮನಸ್ಥಿತಿ ಮಾತ್ರ ಒಂದೇ ರೀತಿಯಲ್ಲಿ ನಿರ್ಮಾಣ ಆಗಿರುವುದನ್ನು ಕಾಣಬಹುದು. ಆದರೆ, ಮೊದಲ ಪ್ರಕರಣದಲ್ಲಿ ಯಾರೋ ಸಮಯಕ್ಕೆ ಸರಿಯಾಗಿ ಆ ಮಹಿಳೆಯನ್ನು ಆಪ್ತಸಮಾಲೋಚನೆಗೆ ಕರೆತಂದರು. ಎರಡನೆಯದರಲ್ಲಿ ಆಕೆಗೆ ಯಾರ ಸಹಾಯವೂ ಸಿಗಲಿಲ್ಲ. ಯಾವುದೇ ವ್ಯಕ್ತಿ ಜೀವನದ ಯಾವುದೇ ಹಂತದಲ್ಲಿ ಒತ್ತಡಕ್ಕೆ ಒಳಗಾಗಬಹುದು. ಒತ್ತಡ ನಿಭಾಯಿಸಲಾಗದೆ ತೆಗೆದುಕೊಳ್ಳುವ ಒಂದು ನಕಾರಾತ್ಮಕ ನಡೆ ಆತ್ಮಹತ್ಯೆಯಾಗಿರಬಹುದು. ಜೀವನಕೌಶಲದ ಕೊರತೆಯಿಂದಲೂ ಅನೇಕರು ಆತ್ಮಹತ್ಯೆಯ ಮಾರ್ಗ ತುಳಿಯುತ್ತಾರೆ. ಭಾರತದಲ್ಲಿ ಪ್ರತಿ ಒಂದು ಲಕ್ಷ ಹೆಣ್ಣುಮಕ್ಕಳಲ್ಲಿ ಶೇ. 16.4 ಆತ್ಮಹತ್ಯೆಗಳು ಸಂಭವಿಸುತ್ತಿದೆ. 2016ರಲ್ಲಿ 2,30,314 ಆತ್ಮಹತ್ಯೆಗಳು ನಡೆದವು. ಪ್ರಪಂಚದಲ್ಲಿ ಒಟ್ಟು ಎಂಟು ಲಕ್ಷ ಆತ್ಮಹತ್ಯೆಗಳು ನಡೆದಿದ್ದು ಅದರಲ್ಲಿ 1.35 ಲಕ್ಷ ಜನ ಭಾರತದವರಾಗಿದ್ದಾರೆ ಎನ್ನುವುದು ಆತಂಕದ ವಿಚಾರ. ಆತ್ಮಹತ್ಯೆ ತಡೆಗಟ್ಟಲು ಸಕಾರಾತ್ಮಕ ಆಯಾಮಗಳನ್ನು ಅನುಸರಿಸಿದಲ್ಲಿ ಆತ್ಮವಿಶ್ವಾಸ ಹೆಚ್ಚುವುದು ಹಾಗೂ ಜೀವನವನ್ನು ಆನಂದದಿಂದ ನಿಭಾಯಿಸುವ ಶಕ್ತಿ ಹೊಂದಲು ಸುಲಭವಾಗುತ್ತದೆ. ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೀಗೆ ಹೇಳಿದ್ದಾನೆ, ‘ಸುಖ-ದುಃಖ ಎರಡನ್ನೂ ಸಮನಾಗಿ ನೋಡಿದವರು ಯೋಗಿಯಾಗುತ್ತಾರೆ’ ಎಂದು. ಅದರಂತೆ ಎಲ್ಲರೂ ನಡೆದುಕೊಂಡರೆ ಜೀವನವು ಸುಖ-ಶಾಂತಿಮಯವಾಗುವುದರಲ್ಲಿ ಸಂಶಯವಿಲ್ಲ.

ವೈಜ್ಞಾನಿಕ ಸತ್ಯ

ಖಿನ್ನತೆಯನ್ನು ಕಂಡೂ ಕಾಣದಂತೆ ಇರುವ ಅಥವಾ ಅದನ್ನೊಂದು ಪ್ರಮುಖ ಆರೋಗ್ಯ ತೊಂದರೆ ಎಂದು ಪರಿಗಣಿಸದೆ ಇರುವ ಮನೋಭಾವ ಇಂದಿಗೂ ನಮ್ಮ ಸಮಾಜದಲ್ಲಿದೆ. ಆದರೆ, ಖಿನ್ನತೆಯುಂಟಾದಾಗ ಮಿದುಳಿನಲ್ಲಿ ರಾಸಾಯನಿಕಗಳ ವ್ಯತ್ಯಯವಾಗುತ್ತಿರುತ್ತದೆ. ಇದರಿಂದ ಎಷ್ಟೇ ಪ್ರಯತ್ನಿಸಿದರೂ ಸುಧಾರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕೆಂಬ ಮನಸ್ಥಿತಿಯೂ ಇರುವುದಿಲ್ಲ. ಅಂಥ ಸಮಯದಲ್ಲಿ ಕುಟುಂಬ ಅವರ ಜತೆಗೆ ನಿಂತು ಅವರನ್ನು ಸಕಾರಾತ್ಮಕ ಮನಸ್ಥಿತಿಗೆ ಕರೆತರಬೇಕಿರುತ್ತದೆ. ಬದಲಾಗಿ, ಕುಟುಂಬವೇ ದೂಷಿಸುತ್ತ ಇದ್ದರೆ ಖಿನ್ನತೆ ಇನ್ನಷ್ಟು ಹೆಚ್ಚಾಗುತ್ತದೆ.

ಕಾರಣಗಳು ಅನೇಕ

ಕೆಲವು ಆತ್ಮಹತ್ಯೆಗಳು ಮೇಲ್ನೋಟಕ್ಕೆ ದಿಢೀರ್ ಮಾಡಿಕೊಂಡಂತೆ ಕಂಡರೂ ವೈಜ್ಞಾನಿಕವಾಗಿ ಅನೇಕ ಕಾರಣಗಳಿರುತ್ತವೆ. ಅವು,

 • ಶರೀರದಲ್ಲಿ ಹಾಮೋನ್ ಅಸಮತೋಲನ  
 • ರಾಸಾಯನಿಕಗಳ ಅಸಮತೋಲನ
 • ಶರೀರದ ಬೆಳವಣಿಗೆಗೆ ಬೇಕಾದಷ್ಟು ಪೌಷ್ಟಿಕಾಂಶ ಇಲ್ಲದಿದ್ದಲ್ಲಿ.
 • ನಿತ್ಯ ಜೀವನದಲ್ಲಿ ವ್ಯಾಯಾಮ ಅಥವಾ ದೇಹಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆ ಇಲ್ಲದಿದ್ದಲ್ಲಿ.
 • ಖಿನ್ನತೆಗೆ ಒಳಗಾಗಿದ್ದಲ್ಲಿ, ಕೀಳರಿಮೆಗೊಳಗಾಗಿದ್ದರೂ ಆತ್ಮಹತ್ಯೆಯ ಭಾವನೆ ಹೆಚ್ಚು.
 • ಸುಖ-ದುಃಖಗಳ ಸಮತೋಲನ ಬೆಳೆಸಿಕೊಳ್ಳದಿದ್ದಲ್ಲಿ ಈ ಭಾವನೆ ಹೆಚ್ಚು. ಏನೇ ದುಃಖ ಬಂದರೂ ಅದನ್ನು ಸಹಜವಾಗಿ ತೆಗೆದುಕೊಳ್ಳದೆ ಅದನ್ನೇ ಬೆಟ್ಟದಷ್ಟು ಮಾಡಿ ಈ ಜೀವನವೇ ಬೇಡ ಎಂಬ ಭಾವನೆಯನ್ನು ಬೆಳೆಸಿಕೊಳ್ಳುವುದು.
 • ಹಣಕಾಸು ವ್ಯವಹಾರಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸದಿರುವುದು.
 • ಕೌಟುಂಬಿಕ ಕಲಹಗಳು
 • ದಾಂಪತ್ಯದಲ್ಲಿ ಕಲಹ ಮತ್ತು ಭಿನ್ನಾಭಿಪ್ರಾಯಗಳು
 • ಕುಟುಂಬದಲ್ಲಿ ಆತ್ಮಹತ್ಯೆಯ ಇತಿಹಾಸವಿದ್ದಲ್ಲಿ ಅದು ಬೇರೆಯವರ ಮೇಲೂ ಪರಿಣಾಮ ಬೀರುತ್ತದೆ.
 • ಅತಿಯಾದ ಒತ್ತಡದ ಜೀವನ
 • ಅತ್ಯಂತ ಪ್ರೀತಿಪಾತ್ರರ ನಿಧನವಾದಲ್ಲಿ ಅಥವಾ ಅವರು ಬೇರೆಯಾದಲ್ಲಿ.
 • ತೀವ್ರ ಮಾನಸಿಕ ಅಸ್ವಸ್ಥತೆಗೊಳಗಾದಲ್ಲಿ ಆತ್ಮಹತ್ಯೆ ಸಂಭವಿಸುವ ಸಾಧ್ಯತೆ ಅಧಿಕ.
 • ಅತಿಯಾದ ಪಶ್ಚಾತ್ತಾಪ, ಭಯ.

ತಡೆಯುವ ಕ್ರಮಗಳು

 • ಸೂಕ್ತ ಆಪ್ತಸಮಾಲೋಚನೆ 
 • ತಪಾಸಣೆಗೆ ಒಳಪಡಿಸಿ ಬೇಕಾದಲ್ಲಿ ಔಷಧ ನೀಡುವುದು. ಇದಕ್ಕೆ ಯಾವ ಹಿಂಜರಿಕೆಯೂ ಬೇಕಾಗಿಲ್ಲ. ಉತ್ತಮ ಮನಸ್ಥಿತಿ ಹೊಂದಲು ಔಷಧಗಳ ಸಹಾಯ ಕೆಲವೊಮ್ಮೆ ಅಗತ್ಯವಾಗಿರುತ್ತದೆ. ಮಾನಸಿಕ ಸಮಸ್ಯೆಗಳಿಗೆ ಮಾತ್ರೆ ತೆಗೆದುಕೊಂಡರೆ ಮೈ ತೂಕ ಹೆಚ್ಚುತ್ತದೆ ಎನ್ನುವ ಭಾವನೆ ಎಲ್ಲೆಡೆ ವ್ಯಾಪಕವಾಗಿದೆ. ಸೂಕ್ತ ವ್ಯಾಯಾಮದ ಮೂಲಕ ಈ ಸಮಸ್ಯೆಗಳನ್ನು ನೀಗಿಸಿಕೊಳ್ಳಬಹುದು.
 • ನಕಾರಾತ್ಮಕ ವಾತಾವರಣವನ್ನು ನಿಯಂತ್ರಿಸಲು ಮಾರ್ಗದರ್ಶನ.
 • ಹೆಚ್ಚು ವ್ಯಾಯಾಮ ಮಾಡುವುದು, ಉತ್ತಮ ದಿನಚರಿ ಪಾಲಿಸುವುದು.
 • ಆತ್ಮಹತ್ಯೆಗೆ ಬೇಕಾಗುವ ಯಾವುದೇ ವಸ್ತು, ಪದಾರ್ಥಗಳನ್ನು ಕಾಣದಂತೆ ಇಡುವುದು.
 • ಒಳ್ಳೆಯ ಹವ್ಯಾಸಗಳನ್ನು ಬೆಳೆಸಿ ಕೊಳ್ಳಲು ಉತ್ತೇಜನ ನೀಡುವುದು.
 • ಹೆಚ್ಚು ಸಂತೋಷವುಂಟುಮಾಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು.
 • ಹಣಕಾಸು ವ್ಯವಹಾರಗಳನ್ನು ನಿಭಾಯಿಸುವ ಶಕ್ತಿ ಹೊಂದುವುದು.
 • ಪರಸ್ಪರ ಸಂಬಂಧವನ್ನು ಚೆನ್ನಾಗಿ ಸುಧಾರಿಸುವ ಕೌಶಲ ಬೆಳೆಸಿಕೊಳ್ಳುವುದು ಇತ್ಯಾದಿ.

ಆತ್ಮಹತ್ಯೆ ತಡೆಗೆ ಸಹಾಯವಾಣಿ

ಇತ್ತೀಚೆಗೆ ಅನೇಕ ಸಹಾಯವಾಣಿಗಳೂ ಇದ್ದು, ಜನರು ಅಗತ್ಯವಿದ್ದಲ್ಲಿ ಇವುಗಳನ್ನು ಉಪಯೋಗಿಸಿಕೊಂಡು ಜೀವನವನ್ನು ಶಾಂತವಾಗಿ ನಡೆಸಲು ಪ್ರಯತ್ನಿಸಬಹುದು.

 • ಸಹಾಯ್ ಬೆಂಗಳೂರು 080-25497777.
 • ಸ್ಪಂದನ ಆತ್ಮಹತ್ಯೆ ತಡೆ ಕೇಂದ್ರದ ಹೆಲ್ಪ್ ಲೈನ್- 080-65000111, 6500222.
 • ವನಿತಾ ಸಹಾಯವಾಣಿ: 080-22943225, 9986387467.
 • ಮಂಗಳೂರು ಸುಶೆಗ್ ಚಾರಿಟೆಬಲ್ ಟ್ರಸ್ಟ್​ನ ಸಹಾಯವಾಣಿ (0824-2983444).
 • ಹಿಂದು ಸೇವಾ ಪ್ರತಿಷ್ಠಾನ ಬೆಂಗಳೂರಿನಲ್ಲಿ ಸ್ಥಾಪಿಸಿರುವ ಪ್ರಸನ್ನ ಆಪ್ತಸಲಹಾ ಕೇಂದ್ರದಲ್ಲಿ ಉಚಿತ ಕೌನ್ಸೆಲಿಂಗ್ ಕೂಡ ಲಭ್ಯ. ಸಂಪರ್ಕಕ್ಕೆ: ಬಸವನಗುಡಿ: 080-2242 5337, 9845200051 / 9591244573.

Leave a Reply

Your email address will not be published. Required fields are marked *