ಹಲ್ಲೆ ಮಾಡಿದ ಸ್ನೇಹಿತನ ಕೊಂದವರ ಸೆರೆ: ಹನುಮಂತನಗರದಲ್ಲಿ ನಡೆದಿದ್ದ ಭರತ್ ಕೊಲೆ ಪ್ರಕರಣ

<<ಬಿಯರ್ ಶೀಷೆಯಲ್ಲಿ ಹಲ್ಲೆ ಮಾಡಿದ್ದಕ್ಕೆ ಪ್ರತೀಕಾರ>>

ಬೆಂಗಳೂರು: ರಸ್ತೆ ನಡುವೆ ತಡೆದು ಬಣ್ಣ ಎರಚಿ ಬಿಯರ್ ಶೀಷೆಯಲ್ಲಿ ಹಲ್ಲೆ ಮಾಡಿದ್ದ ಭರತ್ ಅಲಿಯಾಸ್ ಡಾಲಿಯನ್ನು ಕೊಂದ ಇಬ್ಬರು ಆರೋಪಿಗಳನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರ ಮತ್ತಿಕೆರೆಯ ವಿನೋದ್ ಸಾಗರ್ ಅಲಿಯಾಸ್ ವಿನು (20) ಮತ್ತು ದೊಡ್ಡಬಸ್ತಿ ಬಳಿಯ ಮಾರುತಿನಗರದ ಆಕಾಶ್ ಅಲಿಯಾಸ್ ಕೆಂಚ (22) ಬಂಧಿತರು. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಕೊಟ್ಟಿದ್ದ ನಾಗರಾಜು ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಮೂವರು ಸೇರಿ ಏ.12ರ ರಾತ್ರಿ 8.40ರಲ್ಲಿ ಶ್ರೀನಗರದ ಕಾಳಿದಾಸ ಲೇಔಟ್ 1ನೇ ಮುಖ್ಯರಸ್ತೆ ನಿವಾಸಿ ಭರತ್(20)ನನ್ನು ಡ್ರಾ್ಯಗರ್​ನಿಂದ ಇರಿದು ಕೊಲೆ ಮಾಡಿದ್ದರು ಎಂದು ದಕ್ಷಿಣ ವಿಭಾಗ ಡಿಸಿಪಿ ಕೆ. ಅಣ್ಣಾಮಲೈ ತಿಳಿಸಿದ್ದಾರೆ.

ಏ.7ರ ರಾತ್ರಿ 9.30ರಲ್ಲಿ ಕಾಳಿದಾಸ ಸರ್ಕಲ್​ನಲ್ಲಿ ಭರತ್ ತನ್ನ ಸ್ನೇಹಿತ ಪ್ರಮೋದ್ ಅಲಿಯಾಸ್ ಪೆಟ್ರೋಲ್ ಜತೆಗೆ ಬಿಯರ್ ಕುಡಿಯುತ್ತಿದ್ದ. ಇದೇ ಮಾರ್ಗವಾಗಿ ಬೈಕ್​ನಲ್ಲಿ ವಿನೋದ್ ಮತ್ತು ಆಕಾಶ್ ತೆರಳುತ್ತಿದ್ದರು. ಸ್ನೇಹಿತರಾದ ಹಿನ್ನೆಲೆಯಲ್ಲಿ ಪ್ರಮೋದ್, ಬೈಕ್ ತಡೆದು ಏನೋ ನನ್ನ ನೋಡಿದ್ದರೂ ನೋಡದೆ ಹೋಗುತ್ತಿದ್ದೀರಾ ಎಂದು ಪ್ರಶ್ನಿಸಿ ಬಣ್ಣ ಎರಚಿ ರೇಗಿಸಿದ್ದ. ಕುಪಿತಗೊಂಡ ವಿನೋದ್ ಮತ್ತು ಆಕಾಶ್ ಏರು ಧ್ವನಿಯಲ್ಲಿ ಮಾತನಾಡಿದಾಗ ಮಾತಿಗೆ ಮಾತು ಬೆಳೆದಿದೆ. ಜತೆಯಲ್ಲಿದ್ದ ಭರತ್ ಬಿಯರ್ ಬಾಟಲ್​ನಲ್ಲಿ ವಿನೋದ್ ತಲೆಗೆ ಹಲ್ಲೆ ಮಾಡಿದ್ದ. ನಂತರ ಎಲ್ಲರೂ ಅಲ್ಲಿಂದ ತೆರಳಿದ್ದರು.

ಹಲ್ಲೆಗೊಳಗಾದ ವಿನೋದ್ ಮತ್ತು ಆಕಾಶ್ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿ ನಾಗರಾಜ್ ಬಳಿ ಡ್ರಾ್ಯಗರ್ ಪಡೆದಿದ್ದರು. ಕಳೆದ ಶುಕ್ರವಾರ (ಏ.12) ಚಾಮರಾಜಪೇಟೆಯ ಬಾರ್​ನಲ್ಲಿ ಮದ್ಯ ಸೇವಿಸಿ ಕಾಳಿದಾಸ ಸರ್ಕಲ್​ಗೆ ಬಂದಿದ್ದರು. ರಾತ್ರಿ 8.40ರಲ್ಲಿ ಮನೆ ಬಳಿಯ ಬಾರ್​ನಲ್ಲಿ ಭರತ್ ಕುಡಿದು ಮನೆಗೆ ತೆರಳುತ್ತಿದ್ದಾಗ ಹಿಂಬಾಲಿಸಿದ ಬಂದ ಆರೋಪಿಗಳು ಆತನ ಮೇಲೆ ಎರಗಿ ಡ್ರಾ್ಯಗರ್​ನಿಂದ ಎದೆ, ಕಿಬ್ಬೊಟ್ಟೆಗೆ ಚುಚ್ಚಿ ತಲೆಗೆ ಹಲ್ಲೆ ಮಾಡಿದ್ದರು. ಭರತ್ ರಕ್ತಸ್ರಾವದಲ್ಲೇ ಮನೆ ಬಾಗಿಲಿಗೆ ಹೋಗಿ ಕುಸಿದು ಬಿದ್ದು ಮೃತಪಟ್ಟಿದ್ದ. ಹನುಮಂತನಗರ ಠಾಣಾಧಿಕಾರಿ ಸಿ.ವಿ. ರವಿ ತಂಡ ಆರೋಪಿಗಳ ಬೆನ್ನತ್ತಿ ಬಂಧಿಸಿದೆ.

ಐದು ತಿಂಗಳು ಜೈಲಿನಲ್ಲಿದ್ದ

ಕಳೆದ ಅಕ್ಟೋಬರ್​ನಲ್ಲಿ ಚಾಮರಾಜಪೇಟೆ ಪೊಲೀಸರು ದರೋಡೆಗೆ ಸಂಚು ಪ್ರಕರಣದಲ್ಲಿ ಭರತ್ ಸೇರಿ ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಕೋರ್ಟ್ನಲ್ಲಿ ನಾಲ್ವರಿಗೂ ಜಾಮೀನು ಸಿಕ್ಕಿ ಮೂವರು ಬಿಡುಗಡೆಯಾಗಿದ್ದರು. ಆದರೆ, ಭರತ್​ಗೆ ಶ್ಯೂರಿಟಿ ಹಣ ಮತ್ತು ವಕೀಲರ ಶುಲ್ಕ ಪಾವತಿ ಮಾಡಲು ಸಾಧ್ಯವಾಗದೆ 5 ತಿಂಗಳು ಜೈಲಿನಲ್ಲಿದ್ದ. ಭರತ್ ಸಹೋದರಿ ವಕೀಲರ ಶುಲ್ಕ ಮತ್ತು ಕೋರ್ಟ್​ಗೆ ಶ್ಯೂರಿಟಿ ಪಾವತಿ ಮಾಡಿ ಏ.5ರಂದು ಜೈಲಿನಿಂದ ಬಿಡುಗಡೆ ಮಾಡಿಸಿದ್ದಳು.

ಸುಳಿವು ಕೊಟ್ಟ ಸಿಸಿ ಕ್ಯಾಮರಾ

ಭರತ್ ಮೇಲೆ ದಾಳಿ ನಡೆದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಹಂತಕರು ಇಬ್ಬರು ಎಂದು ಖಚಿತವಾಯಿತು. ಭರತ್ ಸ್ನೇಹಿತ ಪ್ರಮೋದ್​ನನ್ನು ವಿಚಾರಣೆ ನಡೆಸಿದಾಗ ವಿನೋದ್ ಮತ್ತು ಆಕಾಶ್ ಸುಳಿವು ಲಭ್ಯವಾಗಿತ್ತು.

ಅಪರಾಧ ಹಿನ್ನೆಲೆಯುಳ್ಳವರು

ಬಂಧಿತ ಆರೋಪಿ ವಿನೋದ್ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲ್ಲೆ, ದರೋಡೆ ಸೇರಿ ಐದು ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆಕಾಶ್ ವಿರುದ್ಧ ಕೆ.ಪಿ. ಅಗ್ರಹಾರ ಠಾಣೆಯಲ್ಲಿ 2 ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದು, ರೌಡಿ ಪಟ್ಟಿ ತೆರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.