More

  ಹಲ್ಲೆಕೋರರ ಬಂಧನಕ್ಕೆ ಗಡುವು

  ಭದ್ರಾವತಿ: ಕೆರೆ ಬಂಡು ತೆಗೆಸುವ ವಿಚಾರಕ್ಕೆ ಇತ್ತೀಚೆಗೆ ಕೂಡ್ಲಿಗೆರೆ ಜಿಪಂ ಸದಸ್ಯ ಮಣಿಶೇಖರ್ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸದ ಭದ್ರಾವತಿ ಗ್ರಾಮಾಂತರ ಠಾಣಾ ಪೊಲೀಸರ ಕ್ರಮ ಖಂಡಿಸಿ ಶನಿವಾರ ಜೆಡಿಎಸ್ ಕಾರ್ಯಕರ್ತರು ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ನಗರದ ಲೋಯರ್ ಹುತ್ತಾದಿಂದ ತಾಲೂಕು ಕಚೇರಿಯವರೆಗೂ ಪಾದಯಾತ್ರೆ ಮೂಲಕ ತೆರಳಿ ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿದರು.

  ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನಾಸಭೆಯಲ್ಲಿ ಮಾತನಾಡಿ, ಅರಳಿಹಳ್ಳಿ ಬಳಸುವ ಕೆರೆ ಹೂಳೆತ್ತುವಾಗ ಕೆರೆ ಒತ್ತುವರಿ ಮಾಡಿಕೊಂಡಿರುವ ಅದೇ ಗ್ರಾಮದ ಮಲ್ಲಿಕಾರ್ಜುನ ಹಾಗೂ ಆತನ ಸಹೋದರರು ಸ್ಥಳದಲ್ಲಿದ್ದ ಜಿಪಂ ಸದಸ್ಯ ಮಣಿಶೇಖರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿರುವವರ ವಿರುದ್ಧ ದೂರು ದಾಖಲಿಸಲು ಮುಂದಾದ ಮಣಿಶೇಖರ್ ಮೇಲೆಯೆ ಸಬ್​ಇನ್​ಸ್ಪೆಕ್ಟರ್ ಸುನೀಲ್ ಕುಮಾರ್ ಒಬ್ಬ ಕೊಲೆಗಡುಕನಿಗೆ ಹಾಕುವಂತಹ ಕೇಸ್ ದಾಖಲಿಸಿ ಘಟನೆಗೆ ಕಾರಣರಾದವರನ್ನು ಹಾಗೆಯೆ ಬಿಟ್ಟಿದ್ದಾರೆ. ಇನ್ನು ಎರಡು ದಿನಗಳ ಒಳಗಾಗಿ ಆರೋಪಿಗಳನ್ನು ಬಂಧಿಸಬೇಕು, ಇನ್ಸ್​ಪೆಕ್ಟರ್ ಸುನೀಲ್​ಕುಮಾರ್ ವರ್ಗಾವಣೆಯಾಗಬೇಕು, ವರ್ಗಾವಣೆಯಾಗದೆ ಇಲ್ಲಿಯೆ ಇದ್ದರೆ ನಾನೇ ಪೊಲೀಸ್ ಠಾಣೆ ಮುಂಭಾಗ ಅನಿರ್ದಿಷ್ಟಾವಧಿ ನಿರಂತರ ಧರಣಿ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

  ಜಿಪಂ ಸದಸ್ಯ ಮಣಿಶೇಖರ್ ಮಾತನಾಡಿ, ನಾನು ಗೆದ್ದ ಸಮಯದಲ್ಲಿ ಊರಿನ ಮಧ್ಯದಲ್ಲಿರುವ ಕೆರೆ ಅಭಿವೃದ್ಧಿ ಮಾಡಿ ವಾಕಿಂಗ್ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು ಆ ಹಿನ್ನೆಲೆಯಲ್ಲಿ ಸರ್ಕಾರದ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಹಲ್ಲೆ ಮಾಡಿದ್ದು ಸ್ಥಳಕ್ಕೆ ಆಗಮಿಸಿದ ಗ್ರಾಮದ ಖಲೀಲ್ ಪ್ರಾಣ ಉಳಿಸಿದರು ಎಂದು ಹೇಳಿದರು.

  ಗ್ರಾಮಾಂತರ ಪೋಲಿಸ್ ಠಾಣೆಗೆ ಪ್ರತಿಭಟಕಾರರು ತೆರಳದಂತೆ ದಾರಿಯಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು, ನೂರಾರು ಪೊಲೀಸರ ಸರ್ಪಗಾವಲಿನಲ್ಲಿ ಪ್ರತಿಭಟನೆ ನಡೆಯಿತು.

  ಪೊಲೀಸರ ವಿರುದ್ಧ ಕಿಡಿ: ನಮ್ಮನ್ನು ಕಾಯುವ ಬದಲು ತಪ್ಪು ಮಾಡಿದವರನ್ನು ಬಂಧಿಸಿದ್ದರೆ ಸರ್ಕಾರಕ್ಕೆ ಇಷ್ಟೊಂದು ವೆಚ್ಚ ಬೀಳುತ್ತಿರಲಿಲ್ಲ. ನಮ್ಮನ್ನು ಕಾಯಲು ಇಷ್ಟೊಂದು ಪೊಲೀಸ್ ಸಿಬ್ಬಂದಿ ಅವಶ್ಯಕತೆಯೂ ಇರಲಿಲ್ಲ. ನಾನು ಸಂವಿಧಾನಬದ್ಧವಾಗಿ 3 ಬಾರಿ ಶಾಸಕನಾಗಿದ್ದೇನೆ. ನನಗೆ ನನ್ನದೆ ಆದ ನಡವಳಿಕೆ ಇದೆ ಎಂದು ಬಂದೋಬಸ್ತ್​ನಲ್ಲಿದ್ದ ಪೊಲೀಸರನ್ನು ಕಂಡು ಅಪ್ಪಾಜಿ ಕಿಡಿಕಾರಿದರು.

  ಜೆಡಿಎಸ್ ಅಧ್ಯಕ್ಷ ಕರುಣಾಮೂರ್ತಿ, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಖಲೀಲ್, ಜಿ.ಟಿ.ಶ್ರೀಧರ್, ಯಶೋದಮ್ಮ, ಸುಕನ್ಯಾ, ಕರಿಯಪ್ಪ, ಧಮೇಗೌಡ, ಎಸ್.ಕುಮಾರ್, ಎಚ್.ಬಿ.ರವಿಕುಮಾರ್, ಜೆ.ಡಿ.ನಟರಾಜ್, ಚಂದ್ರಹಾಸ್, ಗುಣಶೇಖರ್,ನಾರಾಯಣಪ್ಪ, ಆನಂದ್, ಜೆಡಿಎಸ್ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts