ಹಲ್ಮಿಡಿಗಿಂತಲೂ ಹಳೇ ಶಾಸನ?

ಹಲ್ಮಿಡಿ ಶಾಸನವೇ ಕನ್ನಡದ ಅತೀ ಪ್ರಾಚೀನ ಶಾಸನ ಎಂದು ಈವರೆಗೆ ಹೇಳಲಾಗುತ್ತಿತ್ತು. ಆದರೆ ಈಗ ಅದಕ್ಕಿಂತಲೂ ಪ್ರಾಚೀನ ಕನ್ನಡ ಭಾಷೆಯನ್ನೊಳಗೊಂಡ ಶಾಸನ ಪತ್ತೆಯಾಗಿರುವುದು ವಿಶೇಷ. ಎರಡು ವರ್ಷದ ಹಿಂದೆಯೇ ಈ ಶಾಸನ ಪತ್ತೆಯಾಗಿದ್ದರೂ ಅದರ ಅಧ್ಯಯನಕ್ಕೆ ಸಾಕಷ್ಟು ಸಮಯ ತೆಗೆದುಕೊಂಡ ಪುರಾತತ್ತ್ವಇಲಾಖೆ ಈಗ ಅಪರೂಪದ ಅಂಶಗಳನ್ನು ಬಹಿರಂಗಪಡಿಸಿದೆ. ಇದರಂತೆ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಮದ ಈ ಶಾಸನವೇ ಕನ್ನಡದ ಮೊದಲ ಶಾಸನವೆಂದು ಪರಿಗಣಿಸಲ್ಪಡಲಿದೆ.

 | ಅರವಿಂದ ಅಕ್ಲಾಪುರ

ಶಿವಮೊಗ್ಗ: ಇತಿಹಾಸವೇ ಹಾಗೆ, ಮೊಗೆದಷ್ಟೂ ಕುತೂಹಲಕಾರಿ ಅಂಶಗಳನ್ನು ತನ್ನ ಒಡಲಾಳದಿಂದ ಹೊರಹಾಕುತ್ತದೆ. ಅದರಲ್ಲೂ ಉತ್ಖನನದ ವೇಳೆ ಪತ್ತೆಯಾಗುವ ತಾಳೆಗರಿ, ಶಾಸನಗಳು ನಮ್ಮ ನಾಡಿನ ಸಂಸ್ಕೃತಿಯ ಕಾಲಘಟ್ಟದ ರಹಸ್ಯವನ್ನು ಬಿಚ್ಚಿಡುತ್ತವೆ. ಇದೇ ಕಾರಣದಿಂದ ಇಂದು ಪತ್ತೆಯಾಗುವ ಒಂದು ಅಂಶ ಹೊಸದು ಎಂದುಕೊಳ್ಳುವಾಗಲೇ ನಾಳೆ ಅದಕ್ಕಿಂತ ರಹಸ್ಯವಾದ ಮತ್ತೊಂದು ಸತ್ಯ ಭೂಮಿಯ ಒಡಲಿನಿಂದ ಹೊರಬರುತ್ತದೆ.

ಈಗ ಆಗಿರುವುದೂ ಅದೇ. ಇದುವರೆಗೆ ನಮ್ಮ ಪಠ್ಯದಲ್ಲಿ ಹಲ್ಮಿಡಿ ಶಾಸನವೇ ಕನ್ನಡದ ಮೊದಲ ಶಾಸನ ಎಂದು ಬೋಧಿಸಲಾಗುತ್ತಿತ್ತು. ಇನ್ನು ಮುಂದೆ ಹಾಗೆ ಹೇಳುವಂತಿಲ್ಲ. ಏಕೆಂದರೆ ಹಲ್ಮಿಡಿ ಶಾಸನಕ್ಕಿಂತಲೂ ಹಳೆಯ ಕಾಲಘಟ್ಟದ ಶಾಸನ ಪತ್ತೆಯಾಗಿದೆ. ಅದರಲ್ಲಿ ಸಂಸ್ಕೃತದ ಜತೆಗೆ ಕನ್ನಡದ ಸಾಲುಗಳೂ ಇವೆ. ಹೀಗಾಗಿ ಇದನ್ನು ಕನ್ನಡದ ಮೊದಲ ಶಾಸನ ಎಂದು ಈಗ ನಂಬುವುದಕ್ಕೆ ಅಡ್ಡಿಯಿಲ್ಲ ಎನ್ನುತ್ತಿದ್ದಾರೆ ಇತಿಹಾಸ ತಜ್ಞರು.

ತಾಳಗುಂದ ಶಾಸನ: ಅಂದಹಾಗೆ ಈ ಶಾಸನ ಪತ್ತೆ ಯಾಗಿರುವುದು ಶಿಕಾರಿಪುರ ತಾಲೂಕಿನ ತಾಳಗುಂದದಲ್ಲಿ. ಹಿಂದೆ ಉತ್ಖನನದ ವೇಳೆ ಹಾಸನದ ಹಲ್ಮಿಡಿಯಲ್ಲಿ ದೊರೆತ ಶಾಸನವನ್ನು ಅದೇ ಊರಿನ ಹೆಸರಿನಿಂದ ಕರೆಯಲಾಗಿತ್ತು. ಈಗ ತಾಳಗುಂದ ಗ್ರಾಮದಲ್ಲಿ ದೊರೆತ ಶಾಸನಕ್ಕೂ ಊರಿನ ಹೆಸರನ್ನೇ ಪುರಾತತ್ವ ಇಲಾಖೆ ಇಟ್ಟಿದೆ.

ಎರಡು ವರ್ಷಗಳ ಹಿಂದೆ ಪತ್ತೆಯಾಗಿದ್ದ ಈ ಶಾಸನದ ಸುದೀರ್ಘ ಅಧ್ಯಯನದ ಬಳಿಕ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಸಂಸ್ಕೃತ ಹಾಗೂ ಕನ್ನಡದ ಸಾಲುಗಳುಳ್ಳ ಈ ಶಾಸನವನ್ನು ಕನ್ನಡದ ಹಳೆಯ ಶಾಸನವೆಂದು ಪುರಾತತ್ತ್ವ ಇಲಾಖೆಯ ಉತ್ಖನನ ವಿಭಾಗ ಅಧಿಕೃತವಾಗಿ ಪ್ರಕಟಿಸಿದೆ. ಇದರ ಜತೆಗೆ ಆ ಕಾಲಘಟ್ಟದಲ್ಲಿ ಇಲ್ಲಿ ಆಳ್ವಿಕೆ ನಡೆಸಿದವರ ಮಾಹಿತಿಯನ್ನೂ ಈ ಶಾಸನದ ಮೂಲಕ ಪತ್ತೆಹಚ್ಚಿರುವುದರಿಂದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದಂತಾಗಿದೆ.

ಇದೀಗ ಪಠ್ಯ ಹಾಗೂ ಇತಿಹಾಸ ಗ್ರಂಥಗಳಲ್ಲಿನ ಅಂಶಗಳ ಬದಲಾವಣೆಗೂ ಆಗ್ರಹ ಕೇಳಿಬರುತ್ತಿದೆ. ತಾಳಗುಂದ ಶಾಸನವನ್ನು ಕನ್ನಡದ ಮೊದಲ ಶಾಸನ ಎಂದು ಪುರಾತತ್ತ್ವ ಇಲಾಖೆ ಘೊಷಿಸಿದ ಬೆನ್ನಲ್ಲೇ ಪಠ್ಯದಲ್ಲಿ ಇದೇ ಅಂಶಗಳನ್ನು ಸೇರಿಸಬೇಕೆಂದು ಕೆಲ ಶಾಸನ ಅಧ್ಯಯನಕಾರರು ಒತ್ತಾಯಿಸಿದ್ದಾರೆ.

ಈ ಭಾಗದಲ್ಲಿ ಇನ್ನಷ್ಟು ಶಾಸನಗಳು ಇರುವ ಸಾಧ್ಯತೆ ಇರುವುದರಿಂದ ಪುರಾತತ್ತ್ವ ಇಲಾಖೆಯಿಂದ ಸಮಗ್ರ ಅಧ್ಯಯನ ನಡೆಯಬೇಕು. ಉತ್ಖನನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ.

ಕ್ರಿ.ಶ. 370ರ ಅವಧಿ

ಈ ಶಾಸನ ರಚನೆಯಾದ ಅವಧಿ ಕ್ರಿ.ಶ. 370-450 ಇರಬಹುದೆಂದು ಅಧ್ಯಯನದಿಂದ ತಿಳಿದುಬಂದಿದೆ. ಕೆಲ ವರ್ಷಗಳ ಹಿಂದೆ ತಾಳಗುಂದ ದಲ್ಲಿ ಕಂಡುಬಂದ ಶಾಸನ ಶಾಂತಿವರ್ಮನ ಕಾಲಕ್ಕಿಂತಲೂ ಹಳೆಯದೆಂಬ ಅಂಶ ಬೆಳಕಿಗೆ ಬಂದಿದೆ. ಶಿಕಾರಿಪುರ ತಾಲೂಕು ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ತ್ವ ಇಲಾಖೆಯಿಂದ 2013-14ರಲ್ಲಿ ನಡೆಸಿದ ಉತ್ಖನನದ ವೇಳೆ ಈ ಶಾಸನ ಪತ್ತೆಯಾಗಿತ್ತು.

ಇನಾಮು ಭೂಮಿ ವಿವರ

ವಜಿನಾಗ ಎಂಬ ಅಂಬಿಗನಿಗೆ ಕದಂಬ ದೊರೆಯು ಭೂಮಿಯನ್ನು ಇನಾಮು ನೀಡಿದ್ದ ಅಂಶವನ್ನು ಈ ಶಾಸನ ವಿವರಿಸುತ್ತದೆ. ಪ್ರಣವಲಿಂಗೇಶ್ವರ ದೇವಾಲಯದ ಉತ್ತರ ಭಾಗದಲ್ಲಿ ಇದು ಪತ್ತೆಯಾಗಿತ್ತು. ತುಂಡರಿಸಿರುವ ಏಳು ಸಾಲುಗಳಲ್ಲಿ ಕನ್ನಡ ಪದಗಳ ಬಳಕೆ ಮಾಡಿರುವುದರಿಂದ ಶಾಸನ ಶಾಸ್ತ್ರದ ಪ್ರಕಾರ ಇದನ್ನು ಕನ್ನಡ ಶಾಸನ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಅಂಶವನ್ನು ಪುರಾತತ್ತ್ವ ಇಲಾಖೆ ದೃಢಪಡಿಸಿದೆ.

ಕದಂಬ ಸಾಮ್ರಾಜ್ಯ

ಕ್ರಿ.ಶ. 345ರಲ್ಲಿ ಮಯೂರ ವರ್ಮ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಬನವಾಸಿ ಕದಂಬರ ರಾಜಧಾನಿಯಾಗಿತ್ತು. ಮಯೂರ ವರ್ಮ 365ರಲ್ಲಿ ಮೃತಪಟ್ಟ ನಂತರ ಕಂಗವರ್ಮ, ಭಗೀರಥ ವರ್ಮ, ರಘುಪತಿ ವರ್ಮ ಮುಂತಾದವರು ಕ್ರಿ.ಶ. 365-425ರವರೆಗೂ ಆಳ್ವಿಕೆ ನಡೆಸಿದ್ದರು. ಇದೇ ಅವಧಿಯಲ್ಲಿ ಶಾಸನ ಕೆತ್ತಿಸಲಾಗಿತ್ತು ಎಂಬುದು ಶಾಸನ ಶಾಸ್ತ್ರ ತಜ್ಞರ ಅನಿಸಿಕೆ.

ಹಲ್ಮಿಡಿ ಶಾಸನ

ಈ ಶಾಸನವು ಕ್ರಿ.ಶ.450ರಿಂದ 500 ಅವಧಿಯೊಳಗಿನದ್ದು ಎಂದು ನಂಬಲಾಗಿದೆ. ಇದರಲ್ಲಿ ಹದಿನಾರು ಸಾಲುಗಳಿದ್ದು, ಹಳೆಗನ್ನಡ, ಬ್ರಾಹ್ಮಿ ಲಿಪಿಗಳನ್ನು ಹೋಲುವ ಕನ್ನಡಲಿಪಿ ಇದೆ. ಕದಂಬ ವಂಶದ ಕಾಕುಸ್ಥವರ್ಮ ಬರೆಸಿದ ದತ್ತಿಶಾಸನ ಇದು. ಶತ್ರುರಾಜರ ವಿರುದ್ಧ ಹೋರಾಡಿ ಗೆದ್ದ ವಿಜಯರಸ ಎಂಬ ಯೋಧನಿಗೆ, ಪಲ್ಮಿಡಿ, ಮೂಳವಳ್ಳಿಯನ್ನು ದತ್ತಿಯಾಗಿ ಕೊಟ್ಟ ರಾಜಾಜ್ಞೆಯ ಶಾಸನ ಇದು. ಈಗ ತಾಳಗುಂದದಲ್ಲಿ ಸಿಕ್ಕಿರುವ ಶಾಸನವೂ ಕದಂಬ ಅರಸರ ಕಾಲದ್ದೇ ಆದ್ದರಿಂದ, ಅತ್ಯಂತ ಹಳೆಯ ಶಾಸನ ಬರೆದ ಹೆಗ್ಗಳಿಕೆಯೂ ಅವರದ್ದೇ ಆಗಿರಲಿದೆ.

 ಈ ಹಿಂದೆ ಶ್ರವಣಬೆಳಗೊಳದಲ್ಲಿ ಸಿಕ್ಕ ಶಾಸನ ಕೂಡ ಹಲ್ಮಿಡಿ ಶಾಸನಕ್ಕಿಂತ ಪುರಾತನವಾದದ್ದೆಂದು ಹೇಳಲಾಗಿತ್ತು. ಕ್ರಮೇಣ ಆ ವಾದ ಬಿದ್ದುಹೋಯಿತು. ಈಗ ತಾಳಗುಂದದಲ್ಲಿ ಸಿಕ್ಕ ಶಾಸನದ ಬಗ್ಗೆಯೂ ಅದೇ ಮಾತು ಕೇಳಿಬರುತ್ತಿದೆ. ಶಾಸನದಲ್ಲಿ ಇರುವುದು ಎರಡೇ ಸಾಲುಗಳಾದ್ದರಿಂದ ಇನ್ನಷ್ಟು ಅಧ್ಯಯನ ನಡೆಯಬೇಕು. ಜತೆಗೆ ಇದೇ ಹಳೆಯ ಶಾಸನ ಎಂಬುದಕ್ಕೆ ಮತ್ತಷ್ಟು ಪೂರಕ ಸಾಕ್ಷ್ಯಳೂ ಸಿಗಬೇಕು.

| ಡಾ. ಜಗದೀಶ್, ಶಾಸನ ತಜ್ಞರು

Leave a Reply

Your email address will not be published. Required fields are marked *