ಹಲವರನ್ನು ಆಪೋಷನ ಪಡೆದ ಅಲೆ

ಕಾರವಾರ: ದೋಣಿ ವಿಹಾರದ ಸಂಭ್ರಮ, ದೇವರಲ್ಲಿ ಪ್ರಾರ್ಥಿಸಿ ಪಡೆದ ಸಮಾಧಾನವನ್ನು ಸಮುದ್ರದ ಒಂದೇ ಅಬ್ಬರದ ಅಲೆ ನುಂಗಿ ಹಾಕಿದೆ. ಕೂರ್ಮಗಡ ಜಾತ್ರೆಗೆ ತೆರಳಿದ್ದ ಹಲವರನ್ನು ಸಮುದ್ರದ ಆಪೋಶನ ಪಡೆದಿದೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಬದುಕುಳಿದವರ ನೋವಿನ ಕಥೆ ಕರುಳು ಕಿವುಚುವಂತಿದೆ.

ಸೋಮವಾರ ಕಡಲ ನಡುವೆ ಇರುವ ಕೂರ್ಮಗಡ ದ್ವೀಪದಲ್ಲಿ ನಡೆಯುವ ಕಡವಾಡ ನರಸಿಂಹ ದೇವರ ಜಾತ್ರೆಗೆ ತೆರಳಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಅಬ್ಬರದ ಅಲೆಗೆ ದೋಣಿಯೊಂದು ಮುಳುಗಿದ್ದು, 18 ಜನರನ್ನು ರಕ್ಷಿಸಲಾಗಿದೆ. ಐವರು ಮಕ್ಕಳು ಮೂವರು ಮಹಿಳೆಯರು ಸೇರಿ 15 ಜನರು ನಾಪತ್ತೆಯಾಗಿದ್ದು, ಅವರಲ್ಲಿ 8 ಜನರ ಶವ ಪತ್ತೆಯಾಗಿದೆ.

ಒಂದೇ ಕುಟುಂಬದ 10 ಜನರು ನೀರು ಪಾಲು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕನಕ ಸತ್ಯಪ್ಪ ಬೆಳಗೋಡ ಎಂಬುವವರು ಕಾರವಾರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರು ಜಾತ್ರೆಗಾಗಿ ಊರಿನಿಂದ ನೆಂಟರನ್ನು ಕರೆಸಿದ್ದರು. ಸಂಬಂಧಿಕರೆಲ್ಲ ಸೇರಿ ಒಟ್ಟು 13 ಜನರು ಕೂರ್ಮಗಡ ಜಾತ್ರೆಗೆ ತೆರಳಿದ್ದರು. ಆದರೆ, ಅವರಲ್ಲಿ ಕನಕ, ಅವರ ಪತ್ನಿ, ಅಳಿಯ ಗಣೇಶ ಬೆಳಗಲಕೊಪ್ಪ (9)ಸೇರಿ ಕೇವಲ ಮೂವರು ಬಚಾವಾಗಿದ್ದಾರೆ. ಕನಕ ಅವರ ತಂಗಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಹೊಸೂರಿನ ಭಾರತೀ ಬೆಳಗಲಕೊಪ್ಪ , ಅವರ ತಂಗಿ ಮಂಜುಳಾ ಅವರ ಪುತ್ರ ಅರುಣ(3), ಹಾಗು ಕನಕ ಅವರ ಸ್ನೇಹಿತನ ತಾಯಿ ಕೊಪ್ಪಳದ ಅಣ್ಣಕ್ಕ ಸೇರಿ ನಾಲ್ವರ ಮೃತ ದೇಹಗಳು ಪತ್ತೆಯಾಗಿವೆ. ಕನಕ ಅವರ ತಂಗಿಯ ಗಂಡ ಪರಶುರಾಮ, ಅವರ ಇಬ್ಬರು ಮಕ್ಕಳು ಹಾಗೂ ಪರಶುರಾಮ ಅವರ ತಮ್ಮನ ಇಬ್ಬರು ಮಕ್ಕಳು ಸೇರಿ ನಾಲ್ವರು ಮಕ್ಕಳ ಮೃತದೇಹ ಪತ್ತೆಯಾಗಬೇಕಿದೆ. ಬೋಟ್ ಮೇಲೆ ನಿಂತು ಬಚಾವಾಗಿ ಬಂದ ಬಾಲಕ ಗಣೇಶ ಬೆಳಗಲಕೊಪ್ಪ ಆತನ ಆಕ್ರಂದನ ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿತ್ತು. ಅಮ್ಮ ಎಲ್ಲಿ, ಅಪ್ಪ ಎಲ್ಲಿ ಎಂದು ಆತನ ಅಳು ಕರುಳು ಕಿವುಚುವಂತಿತ್ತು.

15 ನಿಮಿಷ ಬೋಟ್ ಹಿಡಿದುಕೊಂಡಿದ್ದೆ ‘ಭಾರಿ ಅಲೆ ಬಂದಿದ್ದರಿಂದ ಇದ್ದಕ್ಕಿದ್ದಂತೆ ಬೋಟ್ ಮಗುಚಿಬಿಟ್ಟಿತು. ನಾನು ರಾಡ್ ಹಿಡಿದು ಸುಮಾರು 15 ನಿಮಿಷ ಬೋಟ್ ಹಿಡಿದುಕೊಂಡಿದ್ದೆ. ನಂತರ ಒಂದು ತೇಲುವ ರಿಂಗ್ ಸಿಕ್ಕಿತು ಅದನ್ನು ಹಿಡಿದು ಬಚಾವಾದೆ. ನನ್ನ ಪಕ್ಕವಿದ್ದ ಜನರು ಮುಳುಗುವುದು ಕಾಣುತ್ತಿತ್ತು’ ಎಂದು ತಾವು ಸಾವಿನ ದವಡೆಯವರೆಗೂ ಹೋಗಿ ಬಚಾವಾಗಿ ಬಂದ ದುರಂತ ಕ್ಷಣವನ್ನು ಕಾರವಾರದ ನವೀನ ಪಾಲನಕರ್ ನೆನಪಿಸಿಕೊಳ್ಳುತ್ತಾರೆ. ಒಟ್ಟು ಐವರು ಸ್ನೇಹಿತರು ತೆರಳಿದ್ದೆವು. ನನ್ನನ್ನೂ ಸೇರಿ ನಾಲ್ವರು ಬಚಾವಾಗಿದ್ದೇವೆ. ಶ್ರೇಯಸ್ ಪಾವಸ್ಕರ್ ಎಂಬ ಸ್ನೇಹಿತ ನಾಪತ್ತೆಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಅಮೂಲ್ ನೇತಲಕರ್ ಅವರೂ 20 ನಿಮಿಷ ಬೋಟ್​ನ ಒಂದು ಸೀಟ್ ಹಿಡಿದುಕೊಂಡು ನಂತರ ಬಚಾವಾಗಿದ್ದಾರೆ.

ಬೆಳಗಾವಿಯಿಂದ ಬಂದು ಅಪ್ಪ ಅಮ್ಮನ ಕಳೆದುಕೊಂಡೆ ಕಡವಾಡದ ಸಾಗರ ಕೊಠಾರಕರ್ ಬೆಳಗಾವಿಯಲ್ಲಿ ಉದ್ಯೋಗದಲ್ಲಿದ್ದಾರೆ. ಜಾತ್ರೆಯ ಸಲುವಾಗಿಯೇ ಮನೆಗೆ ಬಂದಿದ್ದರು. ಮನೆಯಲ್ಲಿದ್ದ ವೃದ್ಧ ತಂದೆ ತಾಯಿ ಹಾಗೂ ಚಿಕ್ಕಮ್ಮನ ಜೊತೆಗೆ ಜಾತ್ರೆಗೆ ತೆರಳಿದ್ದರು. ಆದರೆ, ಬೋಟ್ ಅವಘಡದಲ್ಲಿ ತಂದೆ ಗಣಪತಿ ಕೊಠಾರಕರ್ ತಾಯಿ ಜಯಶ್ರೀ ಕೊಠಾರಕರ್ ಹಾಗೂ ಚಿಕ್ಕಮ್ಮ ಗೀತಾ ತಳೇಕರ್ ಅವರನ್ನು ಕಳೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಇವರ ರೋದನ ಮುಗಿಲು ಮುಟ್ಟಿತ್ತು.

8 ಜನರನ್ನು ರಕ್ಷಿಸಿದ ಮೀನುಗಾರ ಇನ್ನೊಂದು ದೋಣಿಯೂ ಮುಳುಗಡೆ: ಕೂರ್ಮಗಡ ಜಾತ್ರೆಯಿಂದ ವಾಪಸಾಗುತ್ತಿದ್ದ ದೋಣಿ ಮುಳುಗಡೆಯಾದ ಜಾಗದಲ್ಲೇ ಕೆಲವೇ ಹೊತ್ತಿನಲ್ಲಿ ಮತ್ತೊಂದು ದೋಣಿ ಮುಳುಗಡೆಯಾಗಿತ್ತು. ಆದರಲ್ಲಿದ್ದ ಚಿತ್ತಾಕುಲಾದ ನಾಲ್ವರು ಮೀನುಗಾರರು ಸುರಕ್ಷಿತವಾಗಿ ಪಾರಾಗಿದ್ದಾರೆ.

ಚಾಲಕನ ಬಂಧನ: ಬೋಟ್ ದೇವಬಾಗದ ದಯಾನಂದ ರಾಮ ಜಾದವ್ ಅವರಿಗೆ ಸೇರಿದ್ದಾಗಿದೆ. ಚಾಲಕನ ಬಳಿ ಬೋಟ್​ಗೆ ಸಂಬಂಧಿಸಿದಂತೆ ಯಾವುದೇ ಪರವಾನಗಿ ಇರಲಿಲ್ಲ. ಅಲ್ಲದೆ, ಅಪಘಾತ ನಡೆದ ಸಂದರ್ಭದಲ್ಲಿ ಆತನ ಬೋಟ್​ನಿಂದ ಜಿಗಿದು ಪರಾರಿಯಾಗಿದ್ದ ನಂತರ ಆತನನ್ನು ಸೇರಿ ಒಟ್ಟು ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಭಾರಿ ಅಲೆ ಇತ್ತು ನಮ್ಮ ಬೋಟ್ ಅವರ ಬೋಟ್​ನಿಂದ ಕೇವಲ 150 ಮೀಟರ್ ದೂರದಲ್ಲಿತ್ತು. ದೊಡ್ಡದಾಗಿ ಬಂದ ಅಲೆಗೆ ಬೋಟ್ ಮಗುಚಿತು. ಹತ್ತಿರ ಹೋದರೆ ನಮ್ಮ ಬೋಟ್ ಕೂಡ ಮುಳುಗುತ್ತಿತ್ತು. ಆದರೂ ಧೈರ್ಯ ಮಾಡಿ ಹೋಗಿ ನಮ್ಮ ಬೋಟ್​ನಲ್ಲಿದ್ದ ಲೈಫ್ ಜಾಕೆಟ್ ಎಸೆದೆವು. ನಂತರ ಮಗುಚಿ ತೇಲುತ್ತಿದ್ದ ಬೋಟ್ ಮೇಲೆ ಕುಳಿತಿದ್ದ 8 ಜನರನ್ನೂ ಬೋಟ್ ಮೇಲೆ ಹತ್ತಿಸಿಕೊಂಡೆವು. ಅಷ್ಟರಲ್ಲಾಗಲೇ ನಮ್ಮ ಬೋಟ್​ನಲ್ಲೂ ನೀರು ತುಂಬಿಕೊಂಡಿತ್ತು. ಶಾಸಕಿ ರೂಪಾಲಿ ಅವರು ಜೊತೆಗಿದ್ದರು. ಗಿರಿಧರ ತಾಂಡೇಲ