ಹರ್ ಹರ್ ಮೋದಿ, ಘರ್ ಘರ್ ಮೋದಿ

ಗದಗ: ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಗೆಲುವು ಘೊಷಣೆಯಾಗುತ್ತಿದ್ದಂತೆಯೇ ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲಾದ್ಯಂತ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ನಗರದ ಹುಯಿಲಗೋಳ ನಾರಾಯಣರಾವ್ ವೃತ್ತ, ಮಹಾತ್ಮಾ ಗಾಂಧಿ ವೃತ್ತ, ಸಂಸದರ ಜನಸಂಪರ್ಕ ಕಾರ್ಯಾಲಯದ ಎದುರು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪರಸ್ಪರ ಬಣ್ಣ ಎರಚಿ, ಸಿಹಿ ವಿತರಿಸುತ್ತ ನಗರದ ತುಂಬೆಲ್ಲ ಬೈಕ್ ರ‍್ಯಾಲಿ ನಡೆಸಿ ಸಂಭ್ರಮಾಚರಿಸಿದರು.

‘ಹರ್ ಹರ್ ಮೋದಿ, ಘರ್ ಘರ್ ಮೋದಿ’ ಎಂದು ಘೊಷಣೆ ಕೂಗುತ್ತ, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 5 ವರ್ಷಗಳ ಕಾಲ ನೀಡಿದ ಭ್ರಷ್ಟಾಚಾರ ರಹಿತ ಆಡಳಿತ, ಜನಪರ ಯೋಜನೆಗಳು ಕೈ ಹಿಡಿದಿವೆ. ಸ್ಥಳೀಯವಾಗಿ ಸಂಸದ ಶಿವಕುಮಾರ ಉದಾಸಿ ಅವರು ಹ್ಯಾಟ್ರಿಕ್ ಗೆಲುವು ದಾಖಲಿಸಿರುವುದು ಖುಷಿ ನೀಡಿದೆ. ಮೋದಿ, ಅಮಿತ್ ಶಾ ಅವರ ಪ್ರಯತ್ನದ ಫಲವಾಗಿ ರಾಜ್ಯ ಸೇರಿ ದೇಶಾದ್ಯಂತ ಹೆಚ್ಚಿನ ಸೀಟುಗಳು ಬರಲು ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುಧೀರ ಕಾಟಿಗೇರ, ವಿನಾಯಕ ಹಬೀಬ, ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿನಿ ಜಗತಾಪ್, ವಿಜಯಲಕ್ಷ್ಮಿ ಮಾನ್ವಿ, ಜಯಶ್ರೀ ಉಗಲಾಟದ ಸೇರಿ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮದುವೆ ಸಂಭ್ರಮದ ಮಧ್ಯೆ ಚುನಾವಣೆ ಫಲಿತಾಂಶದ ಕಾವು

ದೇಶಾದ್ಯಂತ ಬೆಳಗ್ಗೆ 8ರಿಂದ ಲೋಕಸಭೆ ಚುನಾವಣೆ ಫಲಿತಾಂಶದ ಕಾವು ಏರತೋಡಗಿತ್ತು. ಈ ಮಧ್ಯೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ನಿಗದಿಯಾಗಿದ್ದ ಕೊಪ್ಪಳ ಬಂಧುಗಳ ಮದುವೆ ಸಮಾರಂಭದಲ್ಲೂ ವಧು-ವರರಿಗೆ ಹಾಗೂ ಸಂಬಂಧಿಕರಿಗೆ ಚುನಾವಣಾ ಫಲಿತಾಂಶ ಕುತೂಹಲ ಮೂಡಿಸಿತ್ತು. ಅದಕ್ಕಾಗಿಯೇ ಮದುವೆ ಮಂಟಪದ ಪಕ್ಕದಲ್ಲಿ ಪ್ರೊಜೆಕ್ಟರ್ ಮೂಲಕ ಚುನಾವಣಾ ಫಲಿತಾಂಶ ವೀಕ್ಷಿಸಲು ವೇದಿಕೆ ಸಜ್ಜುಗೊಳಿಸಿದ್ದರು. ಒಂದು ಕಡೆ ಸಾರ್ವಜನಿಕರು ವಧು-ವರರನ್ನು ಆಶೀರ್ವದಿಸುತ್ತಿದ್ದರೆ, ಮತ್ತೊಂದೆಡೆ ಚುನಾವಣಾ ಫಲಿತಾಂಶ ನೋಡಲು ಕಾತುರರಾಗಿದ್ದರು.

ಜನಪರ ಆಡಳಿತಕ್ಕೆ ಜನಬೆಂಬಲ

ರೋಣ: ಶಿವಕುಮಾರ ಉದಾಸಿ ಗೆಲುವು ಸಾಧಿಸಿದ್ದರಿಂದ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

‘2014ರ ಲೋಕಸಭೆ ಚುನಾವಣೆಯಲ್ಲಿದ್ದ ಮೋದಿ ಅಲೆ ಈ ಬಾರಿ ಸುನಾಮಿಯಾಗಿ ಮಾರ್ಪಟ್ಟ ಹಿನ್ನೆಲೆಯಲ್ಲಿ ಎನ್​ಡಿಎ ಮೈತ್ರಿಕೂಟ ಭಾರಿ ಬಹುಮತ ಪಡೆದಿದೆ. ಪ್ರಧಾನಿ ಮೋದಿಯವರ ಐದು ವರ್ಷಗಳ ಜನಪರ ಆಡಳಿತಕ್ಕೆ ಜನಬೆಂಬಲ ದೊರೆತಿದೆ. ದೇಶದ ಅಭಿವೃದ್ಧಿ, ರಕ್ಷಣೆ, ಆಡಳಿತ ನಿರ್ವಹಣೆಗೆ ಮೋದಿ ಸಮರ್ಥ ನಾಯಕ ಎಂಬುದನ್ನು ಈ ನಾಡಿನ ಜನ ಒಪ್ಪಿದ್ದಾರೆ. ಇದರಿಂದಲೇ ಕರ್ನಾಟಕದಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ದೊರಕಿದೆ’ ಎಂದು ಮುಖಂಡರು, ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.

ಸಂಭ್ರಮಕ್ಕೆ ತುಂತುರು ಮಳೆ ಸಿಂಚನ

ಲಕ್ಷ್ಮೇಶ್ವರ: ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪರಸ್ಪರ ಗುಲಾಲು ಎರಚಿ, ಬೈಕ್ ರ‍್ಯಾಲಿ ನಡೆಸಿ ವಿಜಯೋತ್ಸವ ಆಚರಿಸಿದರು. ಕಾರ್ಯಕರ್ತರ ಸಂಭ್ರಮಕ್ಕೆ ತುಂತುರು ಮಳೆ ಶುಭ ಸೂಚಕವಾಯಿತು.

ಕಾರ್ಯಕರ್ತರು ಮೋದಿಯವರ ಮುಖವಾಡ ಧರಿಸಿದ್ದರು. ಕೆಲವರು ಮುಖಗಳ ಮೇಲೆ ಮೋದಿ ಮತ್ತು ಕಮಲದ ಚಿಹ್ನೆ ಬರೆಯಿಸಿಕೊಂಡು ಸಂಭ್ರಮಿಸಿದರು. ನಗರ ಬಿಜೆಪಿ ಘಟಕದ ಕಾರ್ಯದರ್ಶಿ ದುಂಡೇಶ ಕೊಟಗಿ ಅವರು ತಲೆಯಲ್ಲಿ ಬಿಜೆಪಿ ಎಂದು ಬರೆಯಿಸಿಕೊಂಡಿದ್ದರು. ಪಟ್ಟಣವಷ್ಟೇ ಅಲ್ಲದೆ ಸಮೀಪದ ಶಿಗ್ಲಿ, ಸೂರಣಗಿ, ಬಾಲೇಹೊಸೂರ, ಬಟ್ಟೂರ, ಬಡ್ನಿ, ಅಡರಕಟ್ಟಿ, ಗೊಜನೂರ, ಯಳವತ್ತಿ, ಯತ್ನಳ್ಳಿ, ಕುಂದ್ರಳ್ಳಿ, ಆದ್ರಳ್ಳಿ, ರಾಮಗೇರಿ , ಗೋವನಾಳ, ಬಸಾಪುರ, ಹರದಗಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಮಲ ಪಡೆಯವರು ವಿಜಯೋತ್ಸವ ಆಚರಿಸಿದರು.

ದೇಶದ ಜನರ ಕನಸು ನನಸು

ಮುಂಡರಗಿ: ರಾಜ್ಯ ಹಾಗೂ ದೇಶದಲ್ಲಿ ಅತಿ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಬಣ್ಣ ಎರಚಿ ಸಂಭ್ರಮ ಆಚರಿಸಿದರು.

ಬೃಂದಾವನ ಸರ್ಕಲ್​ನಲ್ಲಿ ಸಂಸದ ಶಿವಕುಮಾರ ಉದಾಸಿ, ಪ್ರಧಾನಿ ನರೇಂದ್ರ ಮೋದಿ ಪರ ಘೊಷಣೆ ಕೂಗಿದರು. ತೆರೆದ ವಾಹನದಲ್ಲಿ ಮುಖಂಡರು ಮತ್ತು ಬೈಕ್ ರ‍್ಯಾಲಿ ಮೂಲಕ ಕಾರ್ಯಕರ್ತರು ಪ್ರಮುಖ ವೃತ್ತಗಳಲ್ಲಿ ಸಂಚರಿಸಿದರು.

ಬಿಜೆಪಿ ಮುಂಡರಗಿ ಮಂಡಳ ಅಧ್ಯಕ್ಷ ದೇವಪ್ಪ ಕಂಬಳಿ ಮಾತನಾಡಿ, ದೇಶದ ಜನ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸಬೇಕು ಎನ್ನುವುದು ದೇಶದ ಜನರ ಕನಸಾಗಿತ್ತು. ಹೀಗಾಗಿ ಮತ್ತೆ ಬಿಜೆಪಿ ಬಹುಮತ ಪಡೆದಿದೆ ಎಂದರು.

ಸಡಗರ ಹೆಚ್ಚಿಸಿದ ಹ್ಯಾಟ್ರಿಕ್ ಗೆಲುವು

ನರೇಗಲ್ಲ: ಶಿವಕುಮಾರ ಉದಾಸಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನರೇಗಲ್ಲ ಪಟ್ಟಣ ಸೇರಿ ಅಬ್ಬಿಗೇರಿ, ಮಾರನಬಸರಿ, ಹಾಲಕೆರೆ, ಬೂದಿಹಾಳ, ಡ.ಸ. ಹಡಗಲಿ, ಗುಜಮಾಗಡಿ, ನಾಗರಾಳ, ಯರೇಬೇಲೇರಿ, ಕುರುಡಗಿ, ಜಕ್ಕಲಿ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪುರ, ಹೊಸಳ್ಳಿ, ಕೋಡಿಕೊಪ್ಪ, ಕೋಚಲಾಪೂರ, ದ್ಯಾಂಪೂರ, ಮಲ್ಲಾಪೂರ, ತೋಟಗಂಟಿ ಗ್ರಾಮದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಪಪಂ ಮಾಜಿ ಸದಸ್ಯ ಯಲ್ಲಪ್ಪ ಮಣ್ಣೊಡ್ಡರ ಮಾತನಾಡಿ, ಶಿವಕುಮಾರ ಉದಾಸಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಲು ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತರು ನಿಷ್ಠೆಯಿಂದ ಶ್ರಮಿಸಿದ್ದಾರೆ ಎಂದರು.

Leave a Reply

Your email address will not be published. Required fields are marked *