ನವದೆಹಲಿ: ಭಾರತ ಹಾಕಿ ತಂಡದಲ್ಲಿ ಮತ್ತೆ ಮಹತ್ವದ ಬೆಳವಣಿಗೆಯಾಗಿದ್ದು, ಹರೇಂದ್ರ ಸಿಂಗ್ ಅವರನ್ನು ಪುರುಷರ ತಂಡದ ಕೋಚ್ ಹುದ್ದೆಯಿಂದ ವಜಾಗೊಳಿಸಲಾಗಿದೆ. ಕಳೆದ ವರ್ಷ ತಂಡದಿಂದ ಒಟ್ಟಾರೆಯಾಗಿ ಬಂದಿರುವ ನಿರ್ವಹಣೆ ನೀರಸವಾಗಿದ್ದ ಕಾರಣಕ್ಕೆ ಹಾಕಿ ಇಂಡಿಯಾ ಈ ಅನಿರೀಕ್ಷಿತ ನಿರ್ಧಾರವನ್ನು ಕೈಗೊಂಡಿದೆ. ಹರೇಂದ್ರ ಸಿಂಗ್ಗೆ ಇದೀಗ ಜೂನಿಯರ್ ತಂಡದ ಕೋಚ್ ಹುದ್ದೆಯಲ್ಲಿ ಮುಂದುವರಿಯುವಂತೆ ಸೂಚಿಸಲಾಗಿದೆ. ಸದ್ಯಕ್ಕೆ ಹೈ ಪರ್ಫಾಮೆನ್ಸ್ ಡೈರೆಕ್ಟರ್ ಡೇವಿಡ್ ಜಾನ್ ಹಾಗೂ ಅನಾಲಿಟಿಕಲ್ ಕೋಚ್ ಕ್ರಿಸ್ ಸಿರಿಯೆಲ್ಲೊಗೆ ತಂಡದ ತಾತ್ಕಾಲಿಕ ಮಾರ್ಗದರ್ಶನದ ಜವಾಬ್ದಾರಿಯನ್ನು ನೀಡಿದೆ.
ಹೊಸ ಕೋಚ್ಗೆ ಅರ್ಜಿಯನ್ನು ಆಹ್ವಾನಿಸಲಿರುವ ಹಾಕಿ ಇಂಡಿಯಾ ಫೆಬ್ರವರಿಯಲ್ಲಿ ನಡೆಯಲಿರುವ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯ ರಾಷ್ಟ್ರೀಯ ಶಿಬಿರಕ್ಕೂ ಮುನ್ನ ನೇಮಕ ಮಾಡುವುದಾಗಿ ಹೇಳಿದೆ. ಕಳೆದ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ರಹಿತ ನಿರ್ವಹಣೆ ತೋರಿದ್ದ ಭಾರತ ತಂಡ ಮೇ 1ಕ್ಕೆ ಮಾರಿಜ್ನೆ ಜೊಯೆರ್ಡ್ರನ್ನು ಮಹಿಳಾ ತಂಡಕ್ಕೆ ಕೋಚ್ ಆಗಿ ನೇಮಿಸಿದ್ದರೆ, ಹರೇಂದ್ರ ಸಿಂಗ್ರನ್ನು ಪುರುಷರ ತಂಡದ ಕೋಚ್ ಆಗಿ ಅದಲು ಬದಲಾವಣೆ ಮಾಡಿತ್ತು. ಆದರೆ ವರ್ಷಾಂತ್ಯದ ಏಷ್ಯನ್ ಗೇಮ್ಸ್ನಲ್ಲಿ ಭಾರತ ಹರೇಂದ್ರ ಸಿಂಗ್ ಮಾರ್ಗದರ್ಶನದಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರೆ, ಇತ್ತೀಚೆಗೆ ತವರಿನಲ್ಲೆ ನಡೆದಿದ್ದ ವಿಶ್ವಕಪ್ನಲ್ಲೂ ಕ್ವಾರ್ಟರ್ ಫೈನಲ್ನಲ್ಲಿ ಸವಾಲು ಮುಗಿಸಿತ್ತು. ಹರೇಂದ್ರ ಸಿಂಗ್ ಕೋಚ್ ಆದ ಅವಧಿಯಲ್ಲಿ ಭಾರತ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಸಾಧನೆ ಮಾಡಿತ್ತು.